ಅನಿವಾಸಿ ಭಾರತೀಯರ FCNR-B ಠೇವಣಿಗಳಿಗೆ ಭಾರತದ ಬ್ಯಾಂಕುಗಳಿಂದ ಭರ್ಜರಿ ಬಡ್ಡಿ ಆಫರ್ – Kannada News

ನವದೆಹಲಿ, ಜೂನ್ 11: ಅನಿವಾಸಿ ಭಾರತೀಯರಿಂದ (NRI) ಅವರ ದೇಶಗಳ ಕರೆನ್ಸಿಯನ್ನು ಆಕರ್ಷಿಸುವ ಸಲುವಾಗಿ ಆರ್​ಬಿಐ ಕೆಲ ನಿಯಮಗಳಲ್ಲಿ ಬದಲಾವಣೆ ಮಾಡಿದ ಬೆನ್ನಲ್ಲೇ ಭಾರತದ ಹಲವು ಬ್ಯಾಂಕುಗಳು ಎನ್​ಆರ್​ಐ ಠೇವಣಿಗಳ (FCNR-B) ದರಗಳನ್ನು ಗಣನೀಯವಾಗಿ ಹೆಚ್ಚಿಸತೊಡಗಿವೆ. ಸರ್ಕಾರಿ ಸ್ವಾಮ್ಯದ ಎಸ್​ಬಿಐನಿಂದ ಹಿಡಿದು ಖಾಸಗಿಯ ಯೆಸ್ ಬ್ಯಾಂಕ್​ವರೆಗೆ ಹಲವು ಬ್ಯಾಂಕುಗಳು ವಿದೇಶೀ ಕರೆನ್ಸಿಗಳ ಠೇವಣಿ ದರಗಳನ್ನು ಏರಿಸಿವೆ. ಕೆಲ ಠೇವಣಿಗಳಿಗೆ ಶೇ. 7.1ರವರೆಗೂ ಬಡ್ಡಿ ಆಫರ್ ಮಾಡಲಾಗಿದೆ.

ಯೆಸ್ ಬ್ಯಾಂಕ್ (Yes Bank) ತನ್ನ ವಿದೇಶಿ ಕರೆನ್ಸಿ ಅನಿವಾಸಿ (FCNR-B) ಠೇವಣಿಗಳ ಮೇಲಿನ ಬಡ್ಡಿದರವನ್ನು ಗಣನೀಯವಾಗಿ ಹೆಚ್ಚಿಸಿದೆ. ಗರಿಷ್ಠ ಶೇ. 6.6 ರವರೆಗೆ ಬಡ್ಡಿದರವನ್ನು ಆಫರ್ ಮಾಡುತ್ತಿದೆ. ಅದರ ಹೊಸ ದರಗಳು ಈ ಕೆಳಗಿನಂತಿವೆ:

  • 1-2 ವರ್ಷದ ಅವಧಿ: ಶೇ. 6.10 ಬಡ್ಡಿದರ.
  • 2-3 ವರ್ಷದ ಅವಧಿ: ಶೇ. 6.35 ಬಡ್ಡಿದರ.
  • 3-5 ವರ್ಷದ ಅವಧಿ: ಶೇ. 6.60 ಬಡ್ಡಿದರ.

ಇದನ್ನೂ ಓದಿ: ಕೈಯಿಂದ ಪ್ರೀಮಿಯಮ್ ಕಟ್ಟಬೇಕಿಲ್ಲ; ಉಚಿತ 7 ಲಕ್ಷ ರೂ ವಿಮಾ ಸೌಲಭ್ಯ ಪಡೆಯುವುದು ಹೇಗೆ?

ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮೂರು ವರ್ಷದ ಡೆಪಾಸಿಟ್​ಗಳಿಗೆ ಬಡ್ಡಿದರವನ್ನು ಶೇ. 7.1ಕ್ಕೆ ಏರಿಸಿದೆ. ಐದು ವರ್ಷದ ಡೆಪಾಸಿಟ್​ಗೆ ಬಡ್ಡಿದರ ಶೇ. 7 ನಿಗದಿ ಮಾಡಿದೆ.

ಇನ್ನು, ಎಚ್​​ಡಿಎಫ್​ಸಿ ಬ್ಯಾಂಕ್ ತನ್ನ ಎನ್​ಆರ್​ಐ ಗ್ರಾಹಕರ ಡೆಪಾಸಿಟ್​ಗಳಿಗೆ ಶೇ. 6 ಬಡ್ಡಿ ಆಫರ್ ಮಾಡುತ್ತಿದೆ. ಇತರ ಹಲವು ಬ್ಯಾಂಕುಗಳು ಕೂಡ ತಮ್ಮ ಠೇವಣಿ ದರಗಳನ್ನು ಹೆಚ್ಚಿಸಿವೆ.

ಆರ್​ಬಿಐನ ಈ ನಿರ್ಧಾರಕ್ಕೆ ಕಾರಣವೇನು?

ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗಷ್ಟೇ ಅನಿವಾಸಿ ಭಾರತೀಯ ಹೂಡಿಕೆದಾರರನ್ನು ಆಕರ್ಷಿಸಲು ಕೆಲವು ಪ್ರಮುಖ ಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ ಎಫ್‌ಸಿಎನ್‌ಆರ್ (FCNR) ಠೇವಣಿಗಳ ಮೇಲಿನ ಹೆಡ್ಜಿಂಗ್ ವೆಚ್ಚವನ್ನು (ವಿದೇಶಿ ಕರೆನ್ಸಿ ವಿನಿಮಯ ದರ ಏರಿಳಿತದ ಅಪಾಯದ ವೆಚ್ಚ) ಆರ್​ಬಿಐ ಭರಿಸುವ ನಿರ್ಧಾರವೂ ಸೇರಿದೆ. ಇದರಿಂದಾಗಿ ಬ್ಯಾಂಕುಗಳಿಗೆ ಆಗುವ ವೆಚ್ಚ ಕಡಿಮೆಯಾಗಿದ್ದು, ಆ ಲಾಭವನ್ನು ಬ್ಯಾಂಕುಗಳು ಹೆಚ್ಚಿನ ಬಡ್ಡಿಯ ರೂಪದಲ್ಲಿ ಎನ್‌ಆರ್‌ಐ ಗ್ರಾಹಕರಿಗೆ ವರ್ಗಾಯಿಸುತ್ತಿವೆ.

ಇದನ್ನೂ ಓದಿ: ಆಂಥ್ರೊಪಿಕ್-ಟಿಸಿಎಸ್ ಎಐ ಡೀಲ್; 50,000 ಉದ್ಯೋಗಿಗಳಿಗೆ ಸಿಗಲಿದೆ ಕ್ಲಾಡ್ ತರಬೇತಿ

FCNR(B) ಠೇವಣಿಗಳ ಪ್ರಮುಖ ಅನುಕೂಲಗಳು

  • ಈ ಖಾತೆಗಳಲ್ಲಿ ಹಣವನ್ನು ಭಾರತೀಯ ರೂಪಾಯಿಗೆ ಬದಲಾಯಿಸದೆ ಯುಎಸ್ ಡಾಲರ್ (USD), ಬ್ರಿಟಿಷ್ ಪೌಂಡ್ (GBP) ಅಥವಾ ಯೂರೋ (EUR) ನಂತಹ ವಿದೇಶಿ ಕರೆನ್ಸಿಗಳಲ್ಲೇ ಇಡಬಹುದು. ಹೀಗಾಗಿ ರೂಪಾಯಿ ಮೌಲ್ಯ ಕುಸಿತದ ಭೀತಿ ಇರುವುದಿಲ್ಲ.
  • ಈ ಠೇವಣಿಗಳ ಮೇಲೆ ಗಳಿಸುವ ಬಡ್ಡಿಯು ಭಾರತದಲ್ಲಿ ಸಂಪೂರ್ಣವಾಗಿ ಆದಾಯ ತೆರಿಗೆಯಿಂದ ಮುಕ್ತವಾಗಿರುತ್ತದೆ (Tax-Free).
  • ಗಳಿಸಿದ ಅಸಲು ಮತ್ತು ಬಡ್ಡಿಯನ್ನು ಯಾವುದೇ ಮಿತಿ ಇಲ್ಲದೆ, ಸುಲಭವಾಗಿ ತಮ್ಮ ದೇಶಕ್ಕೆ ವರ್ಗಾಯಿಸಿಕೊಳ್ಳಬಹುದು (Repatriable).

ಆರ್​ಬಿಐನ ಈ ಕ್ರಮದಿಂದ ದೇಶದ ಫಾರೆಕ್ಸ್ ಮಾರುಕಟ್ಟೆಗೂ ಅನುಕೂಲವಾಗುತ್ತದೆ. ಬಹಳ ಮುಖ್ಯವಾದ ವಿದೇಶಿ ಕರೆನ್ಸಿ ಸಂಪತ್ತು ಸಂಗ್ರಹ ಹೆಚ್ಚುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *