ಬೆಂಗಳೂರು, ಜುಲೈ 13: ಅನ್ನಭಾಗ್ಯ (Anna Bhagya) ಯೋಜನೆಗೆ ಇದೀಗ ದೊಡ್ಡ ಗ್ರಹಣ ಹಿಡಿದಂತಾಗಿದೆ. ಬಡವರ ಹೊಟ್ಟೆ ತುಂಬಿಸಬೇಕಾದ ಪಡಿತರ ಅಕ್ಕಿ ವಿತರಣೆ ರಾಜ್ಯದಲ್ಲಿ ಸಂಪೂರ್ಣವಾಗಿ ವಿಳಂಬವಾಗುತ್ತಿದೆ. ಕಳೆದ ಮೂರು ತಿಂಗಳಿಂದ ಅಕ್ಕಿ ವಿತರಣೆಯಲ್ಲಿ ಸಾಕಷ್ಟು ಸಮಸ್ಯೆ ಉಂಟಾಗಿದ್ದು, ಜನ ಸಾಮಾನ್ಯರು ಕಂಗಾಲಾಗಿದ್ದಾರೆ. ಅಷ್ಟಕ್ಕೂ ಅಕ್ಕಿ ಖರೀದಿಸಲು ರಾಜ್ಯ ಸರ್ಕಾರದ ಬಳಿ ಹಣವಿಲ್ಲವಾ ಎನ್ನುವ ಅನುಮಾನ ದಟ್ಟವಾಗಿದೆ.
ರಾಜ್ಯ ಸರ್ಕಾರದ ಬಳಿ ಅಕ್ಕಿ ಖರೀದಿಸಲು ಹಣದ ಕೊರತೆ?
ಕಳೆದ ಮೂರು ತಿಂಗಳಿಂದ ರಾಜ್ಯಾದ್ಯಂತ ಪಡಿತರ ಅಕ್ಕಿ ವಿತರಣೆಯಲ್ಲಿ ಭಾರೀ ಸಮಸ್ಯೆ ಎದುರಾಗಿದೆ. ಪ್ರತಿ ತಿಂಗಳು ದಿನಾಂಕ 5ರ ಒಳಗಾಗಿ ಬಡವರ ಕೈ ಸೇರಬೇಕಾಗಿದ್ದ ಅಕ್ಕಿ ಇದೀಗ ಸರಿಯಾಗಿ ಸಿಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ರಾಜ್ಯ ಸರ್ಕಾರದ ಬಳಿ ಅಕ್ಕಿ ಖರೀದಿಸಲು ಹಣದ ಕೊರತೆ ಎಂಬ ಮಾತು ಕೇಳಿಬರುತ್ತಿದೆ. ಅನ್ನಭಾಗ್ಯದ ಅಕ್ಕಿ ಖರೀದಿಗೆ ರಾಜ್ಯ ಸರ್ಕಾರ ಸಕಾಲಕ್ಕೆ ಹಣ ಪಾವತಿ ಮಾಡದ ಹಿನ್ನೆಲೆ, ಅಕ್ಕಿ ಪೂರೈಕೆ ಸಂಪೂರ್ಣ ಹಳಿ ತಪ್ಪಿದೆ.
ಇದನ್ನೂ ಓದಿ: ಅನ್ನಭಾಗ್ಯ ಫಲಾನುಭವಿಗಳಿಗೆ ಗುಡ್ನ್ಯೂಸ್: ಶೀಘ್ರದಲ್ಲೇ ಕೈಸೇರಲಿದೆ ಇಂದಿರಾ ಕಿಟ್
ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಗಾಗಿ ಕೇಂದ್ರ ಸರ್ಕಾರದಿಂದ ಪ್ರತಿ ತಿಂಗಳು ಬರೋಬ್ಬರಿ 2 ಲಕ್ಷದ 12 ಸಾವಿರ ಮೆಟ್ರಿಕ್ ಟನ್ ಅಕ್ಕಿಯನ್ನು ಖರೀದಿ ಮಾಡುತ್ತಿದೆ. ಇದಕ್ಕಾಗಿ ಪ್ರತಿ ತಿಂಗಳು ಸುಮಾರು 300 ರಿಂದ 400 ಕೋಟಿ ರೂ ಹಣವನ್ನು ಕೇಂದ್ರಕ್ಕೆ ರಾಜ್ಯ ಸರ್ಕಾರ ಪಾವತಿಸಬೇಕಾಗುತ್ತದೆ. ಆದರೆ, ಕಳೆದ ಕೆಲವು ತಿಂಗಳಿಂದ ಈ ಹಣ ಪಾವತಿಯಲ್ಲಿ ಭಾರೀ ವಿಳಂಬವಾಗುತ್ತಿದೆ. ಸರ್ಕಾರದ ಕಡೆಯಿಂದ ಹಣ ಬಿಡುಗಡೆಯಾಗದ ಕಾರಣ, ಕೇಂದ್ರದ ಗೋದಾಮುಗಳಿಂದ ಅಕ್ಕಿಯನ್ನು ಲಿಫ್ಟ್ ಮಾಡುವ ಪ್ರಕ್ರಿಯೆ ತಡವಾಗುತ್ತಿದ್ದು, ಇದು ನೇರವಾಗಿ ಬಡವರ ಹೊಟ್ಟೆಯ ಮೇಲೆ ಹೊಡೆಯುವಂತೆ ಮಾಡಿದೆ.
ನ್ಯಾಯಬೆಲೆ ಅಂಗಡಿಗಳ ಮುಂದೆ ಕ್ಯೂ; ಗ್ರಾಹಕರ ಆಕ್ರೋಶ
ಇತ್ತ ಅಕ್ಕಿ ಸರಬರಾಜು ವಿಳಂಬವಾಗುತ್ತಿರುವುದರಿಂದ ರೇಷನ್ ಶಾಪ್‌ಗಳ ಮುಂದೆ ಸಾರ್ವಜನಿಕರು ಹಗಲು-ರಾತ್ರಿ ಕ್ಯೂ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ಕಡೆ ನ್ಯಾಯಬೆಲೆ ಅಂಗಡಿಗಳು ಮುಚ್ಚಿರುತ್ತಿರುವುದರಿಂದ ಸಾರ್ವಜನಿಕರು ಪ್ರತಿನಿತ್ಯ ಖಾಲಿ ಕೈಯಲ್ಲಿ ಮನೆಗೆ ವಾಪಸ್ ಹೋಗುತ್ತಿದ್ದಾರೆ. ಕೂಲಿ ನಾಲಿ ಮಾಡಿ ಬದುಕುವ ತಮಗೆ ರೇಷನ್ ಅಂಗಡಿ ಮುಂದೆ ಕಾಯುವುದೇ ಕೆಲಸವಾಗಿದೆ ಎಂದು ಪಡಿತರ ಗ್ರಾಹಕರಾದ ಚಂದ್ರಕಲಾ ಹಾಗೂ ನಾಗರತ್ನಮ್ಮ ಸೇರಿದಂತೆ ಹಲವರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಸಿಎಂ ಡಿಕೆ ಶಿವಕುಮಾರ್ ಈ ಇಕ್ಕಟ್ಟಿನಿಂದ ಬಡವರನ್ನು ಹೇಗೆ ಪಾರು ಮಾಡುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.
ವರದಿ: ಅರುಣ್ ಕುಮಾರ್ ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
