ಭೋಪಾಲ್, ಫೆ.27: ಜವಾಬ್ದಾರಿಯುತ ಸ್ಥಾನದಲ್ಲಿರುವವರು ಜನಸಾಮಾನ್ಯರ ಕಷ್ಟಕ್ಕೆ ಹೇಗೆ ಸ್ಪಂದಿಸಬೇಕು ಎಂಬುದಕ್ಕೆ ಕೇಂದ್ರ ಸಚಿವ ಶಿವ್‌ರಾಜ್ ಸಿಂಗ್ ಚೌಹಾಣ್ ಅವರು ಸಾಕ್ಷಿಯಾಗಿದ್ದಾರೆ. ಭೋಪಾಲ್‌ನ ಚೆತಕ್ ಬ್ರಿಡ್ಜ್ ಬಳಿ ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದಿದ್ದ ಯುವಕನನ್ನು ಕಂಡು, ತಮ್ಮ ಬೆಂಗಾವಲು ಪಡೆಯನ್ನು (Convoy) ತಡೆದು ನಿಲ್ಲಿಸಿ ಆತನನ್ನು ಆಸ್ಪತ್ರೆಗೆ ದಾಖಲಿಸುವ ಮೂಲಕ ಜೀವ ಉಳಿಸಿದ್ದಾರೆ. ಶಿವ್‌ರಾಜ್ ಸಿಂಗ್ ಚೌಹಾಣ್ ಅವರು ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದಾಗ ಚೆತಕ್ ಬ್ರಿಡ್ಜ್ ಬಳಿ ಜನಸಂದಣಿ ಇರುವುದನ್ನು ಗಮನಿಸಿದರು. ತಕ್ಷಣ ವಾಹನ ನಿಲ್ಲಿಸಿ ವಿಚಾರಿಸಿದಾಗ, ಅಪಘಾತವಾಗಿ ಯುವಕನೊಬ್ಬ ರಕ್ತದ ಮಡುವಿನಲ್ಲಿ ಬಿದ್ದಿರುವುದು ತಿಳಿದುಬಂದಿತು. ಸಚಿವರು ವಿಳಂಬ ಮಾಡದೆ ತಮ್ಮ ಬೆಂಗಾವಲು ಪಡೆಯಲ್ಲಿದ್ದ ವಾಹನವೊಂದರಲ್ಲಿ ಸಂತ್ರಸ್ತನನ್ನು ಹತ್ತಿಸಿ ಹತ್ತಿರದ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಯುವಕನನ್ನು ಕಳುಹಿಸಿಕೊಟ್ಟಿದ್ದಷ್ಟೇ ಅಲ್ಲದೆ, ವೈದ್ಯರಿಗೆ ಖುದ್ದಾಗಿ ಫೋನ್ ಮಾಡಿ ತುರ್ತು ಚಿಕಿತ್ಸೆ ನೀಡುವಂತೆ ಸೂಚಿಸಿದರು. ಅಲ್ಲದೆ, ತಮ್ಮ ತಂಡದ ಅಧಿಕಾರಿಯೊಬ್ಬರನ್ನು ಆಸ್ಪತ್ರೆಯಲ್ಲೇ ಉಳಿಸಿ ಯುವಕನ ಆರೋಗ್ಯದ ಬಗ್ಗೆ ಗಮನಹರಿಸುವಂತೆ ತಿಳಿಸಿದರು.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
