ಅಭಿಮಾನಿಗಳಿಗೆ ಹೆಲ್ತ್ ಕಾರ್ಡ್ ಕೊಡಿಸಿದ ಶಿವರಾಜ್ ಕುಮಾರ್ – Kannada News | Shiva Rajkumar issued free family health cards to his fans

ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಜ್ ಕುಮಾರ್ (Shiva Rajkumar) ಅವರು ಇಂದು (ಜುಲೈ 12) ಅಭಿಮಾನಿಗಳೊಟ್ಟಿಗೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ವಿಡಿಯೋ ಹಂಚಿಕೊಂಡಿದ್ದ ನಟ ಶಿವರಾಜ್ ಕುಮಾರ್, ಹುಟ್ಟುಹಬ್ಬಕ್ಕೆ ಆಗಮಿಸುವ ಅಭಿಮಾನಿಗಳು ಕಡ್ಡಾಯವಾಗಿ ಕೇಕ್ ಹಾಗೂ ಹಾರಗಳನ್ನು ತರಬಾರದು ಎಂದಿದ್ದರು. ಅದರಂತೆ ಸರಳವಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿರುವ ನಟ ಶಿವರಾಜ್ ಕುಮಾರ್, ಈ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಉಡುಗೊರೆ ನೀಡಿದ್ದಾರೆ.

ಶಿವರಾಜ್ ಕುಮಾರ್ ಅವರು ತಮ್ಮ ಹುಟ್ಟುಹಬ್ಬದಂದು ತಮ್ಮ ಅಭಿಮಾನಿಗಳಿಗೆ ಉಚಿತವಾಗಿ ಹೆಲ್ತ್ ಕಾರ್ಡ್​​ಗಳನ್ನು ವಿತರಣೆ ಮಾಡಿದ್ದಾರೆ. ‘ಹ್ಯಾಟ್ರಿಕ್ ಹೀರೋ ಫ್ಯಾಮಿಲಿ ಹೆಲ್ತ್ ಕಾರ್ಡ್’ ಹೆಸರಿನ ಹೆಲ್ತ್ ಕಾರ್ಡುಗಳನ್ನು ನಟ ಶಿವರಾಜ್ ಕುಮಾರ್ ಬಿಡುಗಡೆ ಮಾಡಿದರು. ಈ ಹೆಲ್ತ್ ಕಾರ್ಡ್​​ಗಳು ಅವರ ಅಭಿಮಾನಿಗಳು ಮತ್ತು ಅವರ ಕುಟುಂಬದ ಆರೋಗ್ಯದ ದೃಷ್ಟಿಯಿಂದ ಬಿಡುಗಡೆ ಮಾಡಲಾಯ್ತು.

ಸುಮಾರು 2500 ಕುಟುಂಬಗಳಿಗೆ ಈ ಹೆಲ್ತ್ ಕಾರ್ಡ್​​ನಿಂದ ಸಹಾಯ ಆಗಲಿದೆ ಎನ್ನಲಾಗಿದೆ. ಉಚಿತ ಆರೋಗ್ಯ ತಪಾಸಣೆ, ಹೃದಯ ಸಂಬಂಧಿ ಕಾಯಿಲೆಗಳ ಚಿಕಿತ್ಸೆಗೆ ವಿಶೇಷ ಸೌಲಭ್ಯ, ಹೈ ಸ್ಪೀಡ್ ಆಂಬುಲೆನ್ಸ್ ಸೇವೆ, 2029ರ ವರೆಗೆ ಕಾರ್ಡುಗಳು ಮಾನ್ಯವಾಗಿರಲಿವೆ. ಅಭಿಮಾನಿಗಳು ಮಾತ್ರವೇ ಅಲ್ಲದೆ ಅವರ ಕುಟುಂಬಕ್ಕೂ ಕಾರ್ಡ್ ಅನ್ವಯ ಆಗಲಿದೆ.

ಇತ್ತೀಚೆಗಷ್ಟೆ ನಟ ಶಿವರಾಜ್ ಕುಮಾರ್ ಅವರು ವೈದೇಹಿ ಸ್ಪೆಷಾಲಿಟಿ ಆಸ್ಪತ್ರೆಯ ಜಾಹೀರಾತೊಂದರಲ್ಲಿ ನಟಿಸಿದ್ದರು. ಅದೇ ಆಸ್ಪತ್ರೆಯ ಜೊತೆ ಕೈ ಜೋಡಿಸಿ ಈ ಹೆಲ್ತ್ ಕಾರ್ಡ್​ಗಳನ್ನು ಬಿಡುಗಡೆ ಮಾಡಿದ್ದಾರೆ. ಕೆಲ ಮೂಲಗಳ ಪ್ರಕಾರ, ಶಿವರಾಜ್ ಕುಮಾರ್ ಅವರು ಅಭಿಮಾನಿಗಳಿಗೆ ಉಚಿತ ಹೆಲ್ತ್ ಕಾರ್ಡ್ ಕೊಡಿಸಲೆಂದು ಆಸ್ಪತ್ರೆಯ ಜಾಹೀರಾತಿನಲ್ಲಿ ಉಚಿತವಾಗಿ ನಟಿಸಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ

ಕಾರ್ಡ್ ವಿತರಣೆ ಮಾಡಿ ಮಾತನಾಡಿದ ಶಿವರಾಜ್ ಕುಮಾರ್, ‘ಇವತ್ತು ನಾನು ಆರೋಗ್ಯದಿಂದ ಇದ್ದೀನಿ ಎಂದರೆ ಅದರಲ್ಲಿ ವೈದೇಹಿ ಆಸ್ಪತ್ರೆಯ ಪಾತ್ರ ಇದೆ. ಆರೋಗ್ಯದ ವಿಷಯದಲ್ಲಿ ಗೋಲ್ಡನ್ ಮಿನಟ್ ಎಂಬುದು ಬಹಳ ಮುಖ್ಯ, ಅದು ಯಾರಿಗೂ ಮಿಸ್ ಆಗಬಾರದು. ನನ್ನ ಅಭಿಮಾನಿಗಳಿಗೆ, ಅವರ ಕುಟುಂಬದ ಆರೋಗ್ಯಕ್ಕೆ ಏನಾದರೂ ಮಾಡಬೇಕು ಎಂಬ ಆಸೆ ಇತ್ತು. ಹಾಗಾಗಿ ಈ ಜಾಹೀರಾತು ಮಾಡಿ ಹೀಗೊಂದು ಕಾರ್ಯ ಮಾಡಿದೆವು. ಯಾರಿಗೆ ಚಿಕಿತ್ಸೆ ಮಾಡಿಸಲು ಸಾಧ್ಯ ಇದೆಯೋ ಅವರು ಈ ಕಾರ್ಡ್ ತೆಗೆದುಕೊಳ್ಳಬೇಡಿ, ಯಾರಿಗೆ ಆಗುವುದಿಲ್ಲವೋ, ಕುಟುಂಬ ಪರಿಸ್ಥಿತಿ ಸರಿಯಿಲ್ಲವೋ ಅವರಿಗೆ ಕಾರ್ಡ್ ಕೊಡಿ ಎಂದು ಶಿವರಾಜ್ ಕುಮಾರ್ ಮನವಿ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *