ಬೆಂಗಳೂರು, ಮೇ.21: ರಾಜಧಾನಿ ಬೆಂಗಳೂರಿನಲ್ಲಿ ಅಸ್ತಿತ್ವದಲ್ಲಿರುವ ಗಿಡಮರಗಳನ್ನು ಉಳಿಸಿಕೊಳ್ಳುವುದು ಒಂದು ಸವಾಲಾಗಿ ಪರಿಣಮಿಸಿದೆ. ಇದೀಗ ಬೆಂಗಳೂರಿನ ಎಚ್.ಎಸ್.ಆರ್. ಲೇಔಟ್‌ನಲ್ಲಿರುವ ಬಿ.ಡಿ.ಎ. ವಾಣಿಜ್ಯ ಸಂಕೀರ್ಣದ ಸುತ್ತಲೂ ಇರುವ 180 ಮರಗಳಿಗೆ ಕುತ್ತು ಎದುರಾಗಿದೆ. ಶಿಥಿಲಾವಸ್ಥೆಯಲ್ಲಿದ್ದ ಹಳೆಯ ವಾಣಿಜ್ಯ ಸಂಕೀರ್ಣವನ್ನು ಕೆಡವಿ ಹೊಸದಾಗಿ ನಿರ್ಮಿಸಲು ಬಿ.ಡಿ.ಎ. ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ, ಸಂಕೀರ್ಣದ ಆವರಣದಲ್ಲಿರುವ ಸುಮಾರು 180 ವಿವಿಧ ಜಾತಿಯ ಮರಗಳನ್ನು ಕಡಿಯಲು ಅನುಮತಿ ಕೋರಿ ಬಿ.ಡಿ.ಎ. ಅಧಿಕಾರಿಗಳು ಜಿ.ಬಿ.ಎ. ಅರಣ್ಯ ವಿಭಾಗಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಮರಗಳನ್ನು ಕಡಿಯುವ ಈ ಪ್ರಸ್ತಾವನೆಗೆ ಸಾರ್ವಜನಿಕರು ಮತ್ತು ಪರಿಸರ ಪ್ರೇಮಿಗಳಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಮರಗಳಿದ್ದ ಸ್ಥಳದಲ್ಲಿ ತಾತ್ಕಾಲಿಕ ಅಂಗಡಿಗಳನ್ನು ನಿರ್ಮಿಸುವಾಗ ಬಿ.ಡಿ.ಎ. ಅನುಮತಿ ಇಲ್ಲದೆ ಎರಡು ಮರಗಳನ್ನು ಮತ್ತು ರೆಂಬೆಕೊಂಬೆಗಳನ್ನು ಕಡಿದ ಆರೋಪವೂ ಕೇಳಿಬಂದಿದೆ. ಈ ಸಂಬಂಧ ಜಿ.ಬಿ.ಎ. ಅರಣ್ಯ ವಿಭಾಗವು ಬಿ.ಡಿ.ಎ. ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ. ಜನರು ಮತ್ತು ಪರಿಸರ ಪ್ರೇಮಿಗಳು ಮರಗಳನ್ನು ಉಳಿಸಿಕೊಂಡೇ ಹೊಸ ಸಂಕೀರ್ಣವನ್ನು ನಿರ್ಮಿಸುವಂತೆ ಆಗ್ರಹಿಸುತ್ತಿದ್ದಾರೆ. ಈ ಮರಗಳು ಸಾರ್ವಜನಿಕರಿಗೆ ಆಶ್ರಯ ತಾಣಗಳಾಗಿದ್ದು, ಇವುಗಳನ್ನು ಉಳಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ. ಜಿ.ಬಿ.ಎ. ಅರಣ್ಯ ವಿಭಾಗವು ಮರಗಳನ್ನು ಕಡಿಯಲು ಅನುಮತಿ ನೀಡಬಾರದು ಎಂಬುದು ಸಾರ್ವಜನಿಕರ ಪ್ರಮುಖ ಬೇಡಿಕೆಯಾಗಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
