Headlines

ಅಮರನಾಥ ಯಾತ್ರಿಕರಿಗೆ ಪ್ರಧಾನಿ ಮೋದಿ ಪತ್ರ: ಭಕ್ತರ ಮನ ಗೆದ್ದ ‘ಐದು ಪ್ರತಿಜ್ಞೆಗಳು’ – Kannada News | PM Modi’s 5 Amarnath Yatra Pledges: Cleanliness, Safety, Local and Nation First

ನವದೆಹಲಿ, ಜುಲೈ 05: ಈ ವರ್ಷದ ಪವಿತ್ರ ಅಮರನಾಥ ಯಾತ್ರೆ(Amarnath Yatra)ಗೆ ಮುಂಚಿತವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಯಾತ್ರಿಕರಿಗೆ ವಿಶೇಷವಾದ ಎರಡು ಪುಟಗಳ ಪತ್ರವೊಂದನ್ನು ಬರೆದಿದ್ದಾರೆ. ಭಕ್ತರಿಗೆ “ಹರ ಹರ ಮಹಾದೇವ್” ಮತ್ತು “ಜೈ ಬಾಬಾ ಬರ್ಫಾನಿ” ಘೋಷಣೆಗಳೊಂದಿಗೆ ಶುಭಾಶಯ ಕೋರಿದ್ದಾರೆ.

ಪ್ರಧಾನಿ ಮೋದಿ ಕರೆ ನೀಡಿರುವ ಆ ‘ಐದು ಪ್ರತಿಜ್ಞೆಗಳು’ ಯಾವುವು?
ಸ್ವಚ್ಛತೆ: ಇಡೀ ಯಾತ್ರಾ ಮಾರ್ಗದಲ್ಲಿ ನೈರ್ಮಲ್ಯವನ್ನು ಕಾಪಾಡುವುದು ಮತ್ತು ಎಲ್ಲೂ ಕಸ ಹಾಕದೆ ಸ್ವಚ್ಛತೆಗೆ ಆದ್ಯತೆ ನೀಡುವುದು.

ಸುರಕ್ಷತಾ ನಿಯಮಗಳ ಪಾಲನೆ: ಮಳೆ, ಶೀತ ಮತ್ತು ಜಾರುವ ರಸ್ತೆಗಳಿರುವುದರಿಂದ ಆಡಳಿತ ಮಂಡಳಿ ನೀಡುವ ಸುರಕ್ಷತಾ ಸಲಹೆಗಳು ಹಾಗೂ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು.

ಸ್ಥಳೀಯ ಉತ್ಪನ್ನಗಳಿಗೆ ಬೆಂಬಲ (ವೋಕಲ್ ಫಾರ್ ಲೋಕಲ್): ಜಮ್ಮು ಮತ್ತು ಕಾಶ್ಮೀರದ ಬಡ ಕುಟುಂಬಗಳು ಹಾಗೂ ಯುವಕರ ಜೀವನೋಪಾಯಕ್ಕೆ ನೆರವಾಗಲು, ಯಾತ್ರೆಯ ಒಟ್ಟು ವೆಚ್ಚದ ಕನಿಷ್ಠ ಶೇಕಡಾ 10 ರಷ್ಟನ್ನು ಅಲ್ಲಿನ ಸ್ಥಳೀಯ ವಸ್ತುಗಳನ್ನು ಖರೀದಿಸಲು ಬಳಸಬೇಕು.

ಪರಿಸರ ಸಂರಕ್ಷಣೆ (ಏಕ್ ಪೆಡ್ ಮಾ ಕೆ ನಾಮ್): ಯಾತ್ರೆ ಮುಕ್ತಾಯವಾಗುವ ‘ರಕ್ಷಾ ಬಂಧನ’ದ ದಿನದಂದು ಸಹೋದರ ಅಥವಾ ಸಹೋದರಿಗೆ ಒಂದು ಸಸಿಯನ್ನು ಉಡುಗೊರೆಯಾಗಿ ನೀಡುವ ಮೂಲಕ ಪರಿಸರ ಬೆಳೆಸುವುದು.

ರಾಷ್ಟ್ರ ಪ್ರಥಮ (ನೇಷನ್ ಫಸ್ಟ್): ಯಾತ್ರೆ ಮುಗಿದ ಮೇಲೂ “ರಾಷ್ಟ್ರವೇ ಮೊದಲು” ಎಂಬ ಭಾವನೆಯೊಂದಿಗೆ ವರ್ಷವಿಡೀ ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿಭಾಯಿಸಿ, ‘ವಿಕಸಿತ ಭಾರತ’ ನಿರ್ಮಾಣಕ್ಕೆ ಕೊಡುಗೆ ನೀಡುವುದು.

ಮತ್ತಷ್ಟು ಓದಿ: ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಪ್ರಧಾನಿ ಮೋದಿಗೆ ಕೊಲೆ ಬೆದರಿಕೆ

ಸೇವೆಗೆ ಪ್ರಧಾನಿ ಶ್ಲಾಘನೆ
ಅಮರನಾಥ ದೇವಾಲಯ ಮಂಡಳಿ, ಜಮ್ಮು-ಕಾಶ್ಮೀರ ಆಡಳಿತ ಸೇರಿದಂತೆ ಯಾತ್ರೆಯ ಯಶಸ್ಸಿಗೆ ಶ್ರಮಿಸುತ್ತಿರುವ ಭಾರತೀಯ ಸೇನೆ, ಸಿಆರ್‌ಪಿಎಫ್, ಪೊಲೀಸ್, ಐಟಿಬಿಪಿ, ಬಿಎಸ್‌ಎಫ್, ಎನ್‌ಡಿಆರ್‌ಎಫ್, ವೈದ್ಯರು ಮತ್ತು ಸ್ವಯಂಸೇವಕರ ನಿಸ್ವಾರ್ಥ ಸೇವೆಯನ್ನು ಪ್ರಧಾನಿ ಮೋದಿ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಸವಾಲಿನ ಪರ್ವತ ಹಾದಿಯಲ್ಲಿ ನೆರವಾಗುವ ಸ್ಥಳೀಯ ಕುದುರೆ ಮಾಲೀಕರು ಮತ್ತು ಪಲ್ಲಕ್ಕಿ ಹೊರುವವರ ಕೊಡುಗೆಯನ್ನು ಅವರು ವಿಶೇಷವಾಗಿ ಸ್ಮರಿಸಿದ್ದಾರೆ.

ಕೊನೆಯಲ್ಲಿ, ಬಾಬಾ ಅಮರನಾಥರ ಆಶೀರ್ವಾದ ಎಲ್ಲರ ಮೇಲಿರಲಿ, ನಿಮ್ಮ ಪ್ರಯಾಣವು ಸುರಕ್ಷಿತ ಹಾಗೂ ಮಂಗಳಕರವಾಗಿರಲಿ ಎಂದು ಪ್ರಧಾನಿ ಮೋದಿ ಶುಭ ಹಾರೈಸಿದ್ದಾರೆ.

ಪ್ರಧಾನಿ ಮೋದಿ ಪ್ರತಿಜ್ಞೆಗೆ ಜನರ ಪ್ರತಿಕ್ರಿಯೆ

ನಮ್ಮ ನಗರಗಳ ಮೆಟ್ರೋ ರೈಲನ್ನು ಜನರು ಕೇವಲ ಸರ್ಕಾರಿ ಸೇವೆಯಾಗಿ ನೋಡದೆ, ಜವಾಬ್ದಾರಿಯಿಂದ ಕಾಪಾಡಿಕೊಳ್ಳುವಂತೆ, ಅಮರನಾಥದ ಸೌಲಭ್ಯಗಳನ್ನೂ ಭಕ್ತರು ತಮ್ಮದೇ ಎಂಬ ಭಾವನೆಯಿಂದ ನೋಡಬೇಕು ಎಂದು ಭಕ್ತರು ಕೂಡ ಕರೆ ನೀಡಿದ್ದಾರೆ. ಯಾತ್ರೆಯ ಮಾರ್ಗದಲ್ಲಿ ಭಕ್ತರು ಈ ಪತ್ರವನ್ನು ಕೈಯಲ್ಲಿ ಹಿಡಿದು ಪ್ರಧಾನಿಯವರ ಸಂದೇಶಕ್ಕೆ ಕೃತಜ್ಞತೆ ಸಲ್ಲಿಸುತ್ತಿರುವುದು ಕಂಡುಬಂದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *