ಅಮಿತಾಬ್ ಬಚ್ಚನ್ ಹೂಡಿಕೆ ಮಾಡುವ ವಿಧಾನ ತಿಳಿಸಿದ ಅಭಿಷೇಕ್ ಬಚ್ಚನ್ – Kannada News | Abhishek Bachchan shares his father Amitabh Bachchan’s investment lessons

ಅಮಿತಾಬ್ ಬಚ್ಚನ್ (Amitabh Bachchan) ಬಾಲಿವುಡ್​ನ ಸೂಪರ್ ಸ್ಟಾರ್ ನಟ. ಭಾರತೀಯ ಚಿತ್ರರಂಗದ ಲಿವಿಂಗ್ ಲಿಜೆಂಡ್ ಎನಿಸಿಕೊಂಡಿರುವ ಅಮಿತಾಬ್ ಬಚ್ಚನ್ ಅವರು ಅತ್ಯದ್ಭುತ ನಟರಾಗಿರುವ ಜೊತೆಗೆ ಉದ್ಯಮಿಯೂ ಹೌದು. ಅಮಿತಾಬ್ ಬಚ್ಚನ್ ಅವರು ಹಲವು ವರ್ಷಗಳಿಂದಲೂ ರಿಯಲ್ ಎಸ್ಟೇಟ್ ಸೇರಿದಂತೆ ಹಲವು ಉದ್ಯಮಗಳ ಮೇಲೆ ಹೂಡಿಕೆ ಮಾಡಿಕೊಂಡು ಬಂದಿರುವುದು ಮಾತ್ರವೇ ಅಲ್ಲದೆ, ತಮ್ಮ ಮಕ್ಕಳಿಗೂ ಹೂಡಿಕೆಯ ಕೆಲವು ನಿಯಮಗಳನ್ನು ಹೇಳಿಕೊಟ್ಟಿದ್ದಾರೆ. ಇದೀಗ ಅಮಿತಾಬ್ ಬಚ್ಚನ್ ಅವರ ಪುತ್ರ, ಖ್ಯಾತ ನಟ ಅಭಿಷೇಕ್ ಬಚ್ಚನ್ ಅವರು ತಂದೆಯ ಹೂಡಿಕೆ ನಿಯಮಗಳ ಬಗ್ಗೆ ಮಾತನಾಡಿದ್ದಾರೆ.

ಬಾಲಿವುಡ್‌ನ ಬಚ್ಚನ್ ಕುಟುಂಬ ಕೇವಲ ಚಿತ್ರರಂಗದ ಯಶಸ್ಸಿನ ಮೇಲೆ ಮಾತ್ರ ಅವಲಂಬಿತವಾಗಿಲ್ಲ, ಬದಲಿಗೆ ಆಸ್ತಿ ಮತ್ತು ಸಂಪತ್ತನ್ನು ಹೇಗೆ ಬುದ್ಧಿವಂತಿಕೆಯಿಂದ ವೃದ್ಧಿಸಬೇಕು ಎಂಬ ಕಲೆಯನ್ನೂ ಕರಗತ ಮಾಡಿಕೊಂಡಿದೆ. ಇತ್ತೀಚೆಗೆ ಸ್ವಿಗ್ಗಿ ಮತ್ತು ನಾಗಿನ್ ಸಾಸ್ ಸಂಸ್ಥೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಸುದ್ದಿಯಾಗಿದ್ದ ನಟ ಅಭಿಷೇಕ್ ಬಚ್ಚನ್, ಇದೀಗ ತಮ್ಮ ತಂದೆ ಅಮಿತಾಭ್ ಬಚ್ಚನ್ ಅವರ ಹೂಡಿಕೆಯ ನಿಯಮಗಳನ್ನು ಬಹಿರಂಗಪಡಿಸಿದ್ದಾರೆ.

ಜಾಗತಿಕ ಉದ್ಯಮ ಶೃಂಗಸಭೆಯಲ್ಲಿ ಮಾತನಾಡಿದ ಅಭಿಷೇಕ್, ‘ನನ್ನ ತಂದೆ ಯಾವಾಗಲೂ ಭೌತಿಕ ಆಸ್ತಿ ಖರೀದಿ​ ಮೇಲೆ ನಂಬಿಕೆ ಇಟ್ಟವರು. ಅದರಲ್ಲೂ ರಿಯಲ್ ಎಸ್ಟೇಟ್ ಮತ್ತು ಚಿನ್ನದ ಮೇಲೆ ಅವರಿಗೆ ಹೆಚ್ಚಿನ ಒಲವು. ನಾನು ಕೂಡ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದೆ, ನಂತರ ನನ್ನ ಪತ್ನಿ ಬೆಳ್ಳಿಯತ್ತಲೂ ಗಮನ ಹರಿಸುವಂತೆ ಸೂಚಿಸಿದಳು, ಅವರಿಗೆ ಬೆಳ್ಳಿಯ ಮೇಲೆ ಒಲವು ಹೆಚ್ಚು’ ಎಂದು ತಮ್ಮ ಕುಟುಂಬದ ಹಣಕಾಸು ಶಿಸ್ತಿನ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅಮಿತಾಬ್ ಬಚ್ಚನ್ ಅವರು ಮುಂಬೈ ಒಂದರಲ್ಲೇ ಸುಮಾರು 600 ಕೋಟಿಗೂ ಹೆಚ್ಚು ಮೌಲ್ಯದ ಕಮರ್ಶಿಯಲ್ ಆಸ್ತಿಯನ್ನು ಹೊಂದಿದ್ದಾರೆ ಎನ್ನಲಾಗುತ್ತದೆ.

ಇದನ್ನೂ ಓದಿ:ಅಮಿತಾಬ್ ಬಚ್ಚನ್ ಎದುರು ಬಾಲಕನ ಉದ್ಧಟತನ: ವಿಡಿಯೋ ವೈರಲ್

ಕೇವಲ ಹೂಡಿಕೆ ಮಾತ್ರವಲ್ಲದೆ, ಕೆಲವು ಬ್ರ್ಯಾಂಡ್ ರಾಯಭಾರಿಯಾಗುವ ವಿಷಯದಲ್ಲೂ ಅಭಿಷೇಕ್ ತಮ್ಮದೇ ಆದ ಕಟ್ಟುನಿಟ್ಟಿನ ನಿಯಮ ಹೊಂದಿದ್ದಾರಂತೆ. ‘ನಾನು ಒಬ್ಬ ನಟನಾಗಿ ಯಾವುದಾದರೂ ಬ್ರ್ಯಾಂಡ್ ಅನ್ನು ಪ್ರಚಾರ ಮಾಡಬಹುದು. ಆದರೆ, ವೈಯಕ್ತಿಕವಾಗಿ ನಾನು ಬಳಸದ ವಸ್ತುವನ್ನು ಪ್ರಚಾರ ಮಾಡುವುದು ನನಗೆ ಮೋಸ ಮಾಡಿದಂತೆ ಅನಿಸುತ್ತದೆ. ಯಾವುದಾದರೂ ಕಂಪನಿ ನನ್ನನ್ನು ರಾಯಭಾರಿಯನ್ನಾಗಿ ಮಾಡಲು ಮುಂದೆ ಬಂದರೆ, ಮೊದಲು ನಾನು ಆ ವಸ್ತುವನ್ನು ಬಳಸುತ್ತೇನೆಯೇ? ಎಂದು ಯೋಚಿಸುತ್ತೇನೆ’ ಎಂದಿದ್ದಾರೆ.

ತಮ್ಮ 20 ವರ್ಷಗಳ ಅನುಭವವನ್ನು ಹಂಚಿಕೊಂಡ ಅವರು, “ನಾನು ಇಂದಿಗೂ ಒಮೆಗಾ ವಾಚ್ ಧರಿಸುತ್ತೇನೆ, ಫೋರ್ಡ್ ಕಾರು ಬಳಸುತ್ತಿದ್ದೆ, ಐಡಿಯಾ ಸಿಮ್ ಹಾಗೂ ಮೊಟೊರೊಲಾ ಫೋನ್ ಬಳಸುತ್ತಿದ್ದೆ. ಇವೆಲ್ಲವೂ ನಾನು ವೈಯಕ್ತಿಕವಾಗಿ ಇಷ್ಟಪಟ್ಟು ಬಳಸುವ ಬ್ರ್ಯಾಂಡ್‌ಗಳು’ ಎಂದು ತಮ್ಮ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.

ಅಭಿಷೇಕ್ ಬಚ್ಚನ್ ಕೇವಲ ರಿಯಲ್ ಎಸ್ಟೇಟ್‌ನಲ್ಲಿ ಮಾತ್ರವಲ್ಲದೆ, ಕ್ರೀಡಾ ಲೋಕದಲ್ಲೂ ದೊಡ್ಡ ಹೂಡಿಕೆ ಮಾಡಿದ್ದಾರೆ. ಅವರು ಪ್ರೊ ಕಬಡ್ಡಿಯ ‘ಜೈಪುರ ಪಿಂಕ್ ಪ್ಯಾಂಥರ್ಸ್’ ತಂಡದ ಮಾಲೀಕರಾಗಿದ್ದಾರೆ ಮತ್ತು ‘ಚೆನ್ನೈಯಿನ್ ಎಫ್‌ಸಿ’ ಫುಟ್‌ಬಾಲ್ ತಂಡದ ಸಹ-ಮಾಲೀಕರಾಗಿದ್ದಾರೆ. ಇವುಗಳ ಜೊತೆಗೆ ‘ವಾಹ್ದಮ್ ಟೀ’ ನಂತಹ ಸ್ಟಾರ್ಟಪ್​​ಗಳಲ್ಲಿಯೂ ಹೂಡಿಕೆ ಮಾಡುವ ಮೂಲಕ ತಮ್ಮ ಉದ್ಯಮ ವಿಸ್ತರಿಸಿದ್ದಾರೆ. ಅಭಿಷೇಕ್ ಬಚ್ಚನ್ ಅವರು ಸಹ ಸುಮಾರು 250 ಕೋಟಿಯ ರಿಯಲ್ ಎಸ್ಟೇಟ್ ಅನ್ನು ಮುಂಬೈನಲ್ಲಿ ಹೊಂದಿದ್ದಾರೆ ಎನ್ನಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *