ಅಮೆರಿಕದ ರೋಗಿಗಳಿಗೆ ಮೈಸೂರಲ್ಲೇ ಕುಳಿತು ತುರ್ತು ಚಿಕಿತ್ಸೆ ನೀಡುತ್ತಾರೆ ನ್ಯೂರಾಲಜಿಸ್ಟ್ ಡಾ. ಸುಶ್ರುತ ! – Kannada News | Mysuru Neurologist Dr Shushrutha Gowda Provides Tele Neurology Care to US Patients

ಡಾ. ಸುಶ್ರುತ ಗೌಡ

ಮೈಸೂರು, ಜುಲೈ 07: ಭಾರತದಲ್ಲಿ ತೀವ್ರವಾದ ನರಸಂಬಂಧಿ ತುರ್ತು ಪರಿಸ್ಥಿತಿಗಳಲ್ಲಿ (Neurological Emergencies) ರೋಗಿಗಳು ಹತ್ತಿರದ ಆಸ್ಪತ್ರೆ ತಲುಪುವಷ್ಟರಲ್ಲಿ ಅಮೂಲ್ಯವಾದ ಸಮಯ ವ್ಯರ್ಥವಾಗುತ್ತದೆ. ಆದರೆ, ಮೈಸೂರಿನ ನ್ಯೂರಾಲಜಿಸ್ಟ್ ಒಬ್ಬರು ಇಲ್ಲಿಂದ ಸುಮಾರು 15,000 ಕಿಲೋಮೀಟರ್ ದೂರದಲ್ಲಿರುವ ಅಮೆರಿಕದ ರೋಗಿಗಳಿಗೆ ‘ಟೆಲಿ-ನ್ಯೂರಾಲಜಿ’ (Tele-neurology) ಜಾಲದ ಮೂಲಕ ನೈಜ ಸಮಯದಲ್ಲಿ ಅತ್ಯಾಧುನಿಕ ತುರ್ತು ಚಿಕಿತ್ಸೆ ನೀಡುತ್ತಿದ್ದಾರೆ. ಮೈಸೂರಿನ ತಮ್ಮ ಕ್ಲಿನಿಕ್‌ನಿಂದಲೇ ಕಾರ್ಯನಿರ್ವಹಿಸುತ್ತಿರುವ ಖ್ಯಾತ ನರರೋಗ ತಜ್ಞ ಡಾ. ಸುಶ್ರುತ ಗೌಡ ಅವರು, ಅಮೆರಿಕದ ರೋಗಿಗಳಿಗೆ ಈ ಸೇವೆಯನ್ನು ಒದಗಿಸುತ್ತಿರುವ ಭಾರತದ ಕೆಲವೇ ಕೆಲವು ತಜ್ಞರಲ್ಲಿ ಒಬ್ಬರಾಗಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಪ್ರತಿ ತಿಂಗಳು 130 ಗಂಟೆಗಳ ತುರ್ತು ಸೇವೆ

ಡಾ. ಸುಶ್ರುತ ಗೌಡ ಅವರು ಪ್ರತಿ ತಿಂಗಳು ಸುಮಾರು 130 ಗಂಟೆಗಳನ್ನು ಅಮೆರಿಕದ ಕಾನ್ಸಾಸ್, ಮಿಸೌರಿ, ಒಕ್ಲಹೋಮ ಮತ್ತು ಅರ್ಕಾನ್ಸಾಸ್ ಎಂಬ ನಾಲ್ಕು ಪ್ರಮುಖ ರಾಜ್ಯಗಳ ಆಸ್ಪತ್ರೆಗಳಿಗೆ ತುರ್ತು ನರರೋಗ ಸಲಹೆಗಳನ್ನು ನೀಡಲು ಮೀಸಲಿಡುತ್ತಿದ್ದಾರೆ. ಮೆದುಳಿನ ಪಾರ್ಶ್ವವಾಯು, ಮೆದುಳಿನಲ್ಲಿ ರಕ್ತಸ್ರಾವದಂತಹ ಅತ್ಯಂತ ಸಂಕೀರ್ಷ್ಟ ಮತ್ತು ಜೀವಕ್ಕೆ ಕಂಟಕವಾಗುವ ಪ್ರಕರಣಗಳನ್ನು ಇವರು ಮೈಸೂರಿನಿಂದಲೇ ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ.

ಬಿಜಾಪುರದಿಂದ ಅಮೆರಿಕದವರೆಗೆ ಡಾ. ಗೌಡ ಅವರ ಪಯಣ

ವಿಜಯಪುರದ ಬಿಎಲ್‌ಡಿಇ (BLDE) ವೈದ್ಯಕೀಯ ಕಾಲೇಜಿನಲ್ಲಿ ಪದವಿ ಮುಗಿಸಿದ ಡಾ. ಸುಶ್ರುತ ಅವರು, 2002 ರಲ್ಲಿ ಯುನೈಟೆಡ್ ಕಿಂಗ್‌ಡಮ್‌ಗೆ (UK) ತೆರಳಿದರು. ಬಳಿಕ 2005 ರಲ್ಲಿ ಅಮೆರಿಕಕ್ಕೆ ಸ್ಥಳಾಂತರಗೊಂಡು ಫ್ಲೋರಿಡಾ ವಿಶ್ವವಿದ್ಯಾಲಯದಲ್ಲಿ ತಮ್ಮ ನ್ಯೂರಾಲಜಿ ರೆಸಿಡೆನ್ಸಿ ಪೂರ್ಣಗೊಳಿಸಿದರು. ನಂತರ ನ್ಯೂ ಮೆಕ್ಸಿಕೋ ವಿಶ್ವವಿದ್ಯಾಲಯದ ಸ್ಟ್ರೋಕ್ ವಿಭಾಗದ ನಿರ್ದೇಶಕರಾಗಿ ಹಾಗೂ ಕೆಂಟುಕಿಯ ಬ್ಯಾಪ್ಟಿಸ್ಟ್ ಹೆಲ್ತ್‌ನಲ್ಲಿ ಸೇವೆ ಸಲ್ಲಿಸಿ, 2019ರಲ್ಲಿ ಭಾರತಕ್ಕೆ ಮರಳಿದರು.

“ನ್ಯೂ ಮೆಕ್ಸಿಕೋ ವಿಶ್ವವಿದ್ಯಾಲಯದಲ್ಲಿದ್ದಾಗ ಗ್ರಾಮೀಣ, ಬುಡಕಟ್ಟು ಮತ್ತು ಗುಡ್ಡಗಾಡು ಪ್ರದೇಶಗಳ ಬಡ ರೋಗಿಗಳಿಗೆ ತಜ್ಞರ ಚಿಕಿತ್ಸೆ ತಲುಪಿಸುವ ಟೆಲಿ-ಮೆಡಿಸಿನ್ ಯೋಜನೆಯಡಿ ನಾನು ಸುಮಾರು 25 ಆಸ್ಪತ್ರೆಗಳಿಗೆ ಸೇವೆ ನೀಡಿದ್ದೆ. ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಮೈಸೂರು ಭಾಗದ ಜನರಿಗೆ ಸೂಪರ್ ಸ್ಪೆಷಾಲಿಟಿ ನರರೋಗ ಸೇವೆಗಳನ್ನು ನೀಡಲು ನಾನು ಈ ಕೆಲಸದಿಂದ ಸಣ್ಣ ವಿರಾಮ ತಗೊಂಡಿದ್ದೆ. ಈಗ 2026 ರ ಆರಂಭದಿಂದ ಮತ್ತೆ ಅಮೆರಿಕದ ರೋಗಿಗಳಿಗೆ ಈ ಸೇವೆಯನ್ನು ಮುಂದುವರಿಸಿದ್ದೇನೆ,” ಎಂದು ಡಾ.ಗೌಡ ಹೇಳಿದ್ದಾರೆ.

ಭಾರತದ ಆರೋಗ್ಯ ವ್ಯವಸ್ಥೆಗೆ ಹೊಸ ದಾರಿ

ಅಮೆರಿಕದಲ್ಲಿ ಬಲಿಷ್ಠ ಸಾಮಾಜಿಕ ಬೆಂಬಲ ವ್ಯವಸ್ಥೆ ಇರುವುದರಿಂದ ವೈದ್ಯರು ಕೆಲವೇ ಸೆಕೆಂಡುಗಳಲ್ಲಿ ಚಿಕಿತ್ಸೆಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ವಿವರಿಸುತ್ತಾರೆ. ಇದೇ ಮಾದರಿಯನ್ನು ಭಾರತದಲ್ಲೂ ಅಳವಡಿಸಿಕೊಳ್ಳಬಹುದು ಎಂಬುದು ಅವರ ಆಶಯ.

ಭಾರತದಲ್ಲಿ ಅಗಾಧವಾದ ಮಾನವ ಸಂಪನ್ಮೂಲವಿದೆ. ಪ್ರಸ್ತುತ ಇರುವ ಆರೋಗ್ಯ ಕಾರ್ಯಕರ್ತರಿಗೆ ಸೂಕ್ತ ತರಬೇತಿ ನೀಡಿ, ಸಮರ್ಥ ಟೆಲಿ-ಮೆಡಿಸಿನ್ ವ್ಯವಸ್ಥೆಯನ್ನು ದೇಶಾದ್ಯಂತ ಜಾರಿಗೆ ತಂದರೆ, ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ರೋಗಿಗಳಿಗೆ ಅತ್ಯುತ್ತಮ ತಜ್ಞ ವೈದ್ಯರ ಚಿಕಿತ್ಸೆ ಸುಲಭವಾಗಿ ಸಿಗುವಂತೆ ಮಾಡಬಹುದು ಮತ್ತು ಭಾರತದ ಆರೋಗ್ಯ ರಂಗದಲ್ಲಿ ದೊಡ್ಡ ಕ್ರಾಂತಿಯನ್ನೇ ಸೃಷ್ಟಿಸಬಹುದು ಎಂದು ಡಾ. ಸುಶ್ರುತ ಗೌಡ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *