ಜೆರುಸಲೇಂ, ಜುಲೈ 06: ಇಡೀ ವಿಶ್ವದಲ್ಲಿ ಇಸ್ರೇಲ್(Israel)ಗೆ ಇರುವ ಏಕೈಕ ಶಕ್ತಿಶಾಲಿ ಮಿತ್ರ ರಾಷ್ಟ್ರ ಅಮೆರಿಕ ಮಾತ್ರ ಎಂಬ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಹೇಳಿಕೆಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಳ್ಳಿ ಹಾಕಿದ್ದಾರೆ. ಜಗತ್ತಿನಲ್ಲಿ ನಮಗೆ ಭಾರತದಂತಹ ಇನ್ನೂ ಹಲವು ಆಪ್ತ ದೇಶಗಳ ಬೆಂಬಲವಿದೆ ಎಂದು ನೆತನ್ಯಾಹು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಭಾರತದಿಂದ ಸಿಗುತ್ತಿದೆ ಅಗಾಧ ಬೆಂಬಲ
ನಾನು ಜೆಡಿ ವ್ಯಾನ್ಸ್ ಅವರನ್ನು ಗೌರವಿಸುತ್ತೇನೆ. ಆದರೆ ಅವರು ಹೇಳುವ ಎಲ್ಲ ಮಾತುಗಳನ್ನೂ ನಾನು ಒಪ್ಪಲು ಸಾಧ್ಯವಿಲ್ಲ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲ್‌ನ ಅತ್ಯುತ್ತಮ ಸ್ನೇಹಿತ ಎಂಬುದರಲ್ಲಿ ಸಂಶಯವಿಲ್ಲ. ಆದರೆ ನಮಗೆ ಭಾರತದಂತಹ ಇತರ ಕೆಲವು ಶಕ್ತಿಶಾಲಿ ಸ್ನೇಹಿತರೂ ಇದ್ದಾರೆ ಎಂದಿದ್ದಾರೆ.
ಭಾರತದ ಬೆಂಬಲವನ್ನು ಶ್ಲಾಘಿಸಿದ ಅವರು, ಭಾರತವು 140 ಕೋಟಿ (1.4 ಬಿಲಿಯನ್) ಜನಸಂಖ್ಯೆ ಹೊಂದಿರುವ ದೇಶ. ಅಲ್ಲಿಂದ ಇಸ್ರೇಲ್‌ಗೆ ಸಿಗುತ್ತಿರುವ ಬೆಂಬಲ ಅಪಾರವಾದದ್ದು. ನನ್ನ ಫೇಸ್‌ಬುಕ್ ಖಾತೆಯನ್ನು ನೋಡಿದರೆ ಸಾಕು, ಭಾರತದ ಜನರು ನಮ್ಮ ಮೇಲೆ ತೋರುತ್ತಿರುವ ಅಗಾಧವಾದ ಪ್ರೀತಿ ಮತ್ತು ಬೆಂಬಲದ ಪ್ರವಾಹ ನಮಗೆ ಅರ್ಥವಾಗುತ್ತದೆ ಎಂದು ಹೇಳಿದ್ದಾರೆ.
ಜೆಡಿ ವ್ಯಾನ್ಸ್ ಹೇಳಿದ್ದೇನು?
ಕಳೆದ ತಿಂಗಳು ಶ್ವೇತಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮತ್ತು ದಿ ನ್ಯೂಯಾರ್ಕ್ ಟೈಮ್ಸ್ ಸಂದರ್ಶನದಲ್ಲಿ ಜೆಡಿ ವ್ಯಾನ್ಸ್ ಅವರು ಇಸ್ರೇಲ್ ಸರ್ಕಾರಕ್ಕೆ ಕಠಿಣ ಸಂದೇಶ ನೀಡಿದ್ದರು. ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಶಾಂತಿ ಮಾತುಕತೆಗಳನ್ನು ಇಸ್ರೇಲ್ ವಿರೋಧಿಸುತ್ತಿರುವುದಕ್ಕೆ ವ್ಯಾನ್ಸ್ ಅಸಮಾಧಾನ ವ್ಯಕ್ತಪಡಿಸಿದ್ದರು. ಇಡೀ ಜಗತ್ತಿನಲ್ಲಿ ಇಸ್ರೇಲ್ ಪರವಾಗಿ ನಿಂತಿರುವ ಏಕೈಕ ನಾಯಕ ಡೊನಾಲ್ಡ್ ಟ್ರಂಪ್ ಮಾತ್ರ.
ನಾನು ಇಸ್ರೇಲ್ ಸರ್ಕಾರದ ಜಾಗದಲ್ಲಿದ್ದರೆ, ಜಗತ್ತಿನಲ್ಲಿ ನಮಗಿರುವ ಏಕೈಕ ಪ್ರಬಲ ಮಿತ್ರನ (ಅಮೆರಿಕ) ಮೇಲೆಯೇ ದಾಳಿ ಮಾಡುತ್ತಿರಲಿಲ್ಲ. ಕೇವಲ ಮಿಲಿಟರಿ ಶಕ್ತಿಯಿಂದಲೇ ನಿಮ್ಮ ಎಲ್ಲಾ ರಾಷ್ಟ್ರೀಯ ಭದ್ರತಾ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ವ್ಯಾನ್ಸ್ ಇಸ್ರೇಲ್ ಅನ್ನು ಟೀಕಿಸಿದ್ದರು.
ಮತ್ತಷ್ಟು ಓದಿ: ಲೆಬನಾನ್‌ನಿಂದ ಹಿಂದೆ ಸರಿಯಲ್ಲ; ಅಮೆರಿಕ-ಇರಾನ್ ಶಾಂತಿ ಒಪ್ಪಂದವನ್ನು ತಿರಸ್ಕರಿಸಿದ ಇಸ್ರೇಲ್
ಜಾಗತಿಕವಾಗಿ ಇಸ್ರೇಲ್ ತಂತ್ರಜ್ಞಾನಕ್ಕೆ ಭಾರಿ ಬೇಡಿಕೆ
ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಕೆಗಳು ಕೇಳಿಬರುತ್ತಿದ್ದರೂ ಇಸ್ರೇಲ್‌ಗೆ ತಂತ್ರಜ್ಞಾನ ಮತ್ತು ಮಿಲಿಟರಿ ರಂಗದಲ್ಲಿ ವಿಶ್ವದ ಹಲವು ರಾಷ್ಟ್ರಗಳ ಬೆಂಬಲವಿದೆ ಎಂದು ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ. ವಿಶ್ವದ ಹಲವು ದೇಶಗಳ ನಾಯಕರು ನನಗೆ ವೈಯಕ್ತಿಕವಾಗಿ ಕರೆ ಮಾಡುತ್ತಾರೆ. ರಾಜಕೀಯ ಕಾರಣಗಳಿಂದ ಸಾರ್ವಜನಿಕವಾಗಿ ಬೆಂಬಲಿಸಲು ಅವರಿಗೆ ಸಮಸ್ಯೆಯಿರಬಹುದು. ಆದರೆ ಅವರು ನಮ್ಮ ಮಿಲಿಟರಿ ತಂತ್ರಗಳು, ಕೃತಕ ಬುದ್ಧಿಮತ್ತೆ (AI) ಮತ್ತು ಸೈಬರ್ ಭದ್ರತೆಯ ಪರಿಣತಿಯನ್ನು ತಮಗೂ ಕಲಿಸಿಕೊಡುವಂತೆ ಒಪ್ಪಂದಗಳಿಗೆ ವಿನಂತಿಸುತ್ತಿದ್ದಾರೆ. ಸೈಬರ್ ತಂತ್ರಜ್ಞಾನದಲ್ಲಿ ಇಸ್ರೇಲ್ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದು ಅವರು ತಿಳಿಸಿದ್ದಾರೆ.
ಶೀಘ್ರದಲ್ಲೇ ಟ್ರಂಪ್-ನೆತನ್ಯಾಹು ಭೇಟಿ
ಆಕ್ಸಿಯೋಸ್ ವರದಿಯ ಪ್ರಕಾರ, ಪ್ರಾದೇಶಿಕ ಭದ್ರತೆ ಹಾಗೂ ಇರಾನ್ ಮತ್ತು ಲೆಬನಾನ್ ವಿಷಯಗಳಲ್ಲಿ ಟ್ರಂಪ್ ಮತ್ತು ನೆತನ್ಯಾಹು ನಡುವೆ ಕೆಲವು ಭಿನ್ನಾಭಿಪ್ರಾಯಗಳು ಮೂಡಿವೆ. ಆದಾಗ್ಯೂ, ನ್ಯಾಟೋ (NATO) ಶೃಂಗಸಭೆಯ ನಂತರ ಶ್ವೇತಭವನದಲ್ಲಿ ಅಥವಾ ಮುಂದಿನ ವಾರ ಇಬ್ಬರು ನಾಯಕರು ಮುಖಾಮುಖಿಯಾಗಿ ಭೇಟಿಯಾಗಿ ಮಹತ್ವದ ಚರ್ಚೆ ನಡೆಸಲು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
