ಅಯೋಧ್ಯೆ, ಜುಲೈ 29: ಅಯೋಧ್ಯೆಯ ಶ್ರೀ ರಾಮ ಮಂದಿರ(Ram Mandir)ದಲ್ಲಿ ನಡೆದ ದೇಣಿಗೆ ಕಳ್ಳತನ ಪ್ರಕರಣ ಹಾಗೂ ಆಡಳಿತಾತ್ಮಕ ಬದಲಾವಣೆಗಳ ನಡುವೆಯೇ ಟ್ರಸ್ಟ್ ಮಹತ್ವದ ನಿರ್ಧಾರ ತಳೆದಿದೆ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಆಯ್ಕೆ ಪ್ರಕ್ರಿಯೆ ನಡೆಯುತ್ತಿರುವ ಹಂತದಲ್ಲೇ, ಟ್ರಸ್ಟ್‌ನ ಮೊದಲ ‘ಕಾರ್ಯದರ್ಶಿ’ ಹುದ್ದೆಗೆ ಜಗದೀಶ್ ಅಫ್ಲೆ ಅವರನ್ನು ನೇಮಿಸಲಾಗಿದೆ. ಸೆಪ್ಟೆಂಬರ್ 2 ರಂದು ನಡೆಯಲಿರುವ ಟ್ರಸ್ಟ್‌ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಇವರ ನೇಮಕಾತಿಗೆ ಅಧಿಕೃತ ಮುದ್ರೆ ಬೀಳಲಿದ್ದು, ಪ್ರಸ್ತುತ ಎಸ್‌ಬಿಐ ಬ್ಯಾಂಕ್ ಖಾತೆಗಳ ನಿರ್ವಹಣೆಗಾಗಿ ಅಫ್ಲೆ ಅವರನ್ನು ಅಧಿಕೃತ ಸಹಿದಾರರನ್ನಾಗಿ ನೇಮಿಸಲಾಗಿದೆ.
ಯಾರೀ ಜಗದೀಶ್ ಅಫ್ಲೆ?
ಮಹಾರಾಷ್ಟ್ರದ ಪುಣೆ ಮೂಲದವರಾದ ಜಗದೀಶ್ ಅಫ್ಲೆ ಅವರು ಪ್ರತಿಷ್ಠಿತ ಐಐಟಿ ಬಾಂಬೆಯಿಂದ ಬಿ.ಟೆಕ್ ಹಾಗೂ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಎಂ.ಟೆಕ್ ಪದವಿ ಪಡೆದಿದ್ದಾರೆ. ಅಮೆರಿಕ ಹಾಗೂ ಹಲವು ಯುರೋಪಿಯನ್ ದೇಶಗಳ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡಿದ ಅನುಭವ ಇವರಿಗಿದೆ.
ಬಾಲ್ಯದಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿರುವ ಅಫ್ಲೆ, ವಿದೇಶದಿಂದ ನಿವೃತ್ತರಾಗಿ ಮರಳಿದ ನಂತರ ರಾಮಮಂದಿರ ನಿರ್ಮಾಣ ಆರಂಭವಾದ ದಿನದಿಂದಲೂ ಯಾವುದೇ ವೇತನ ಪಡೆಯದೇ ಯೋಜನಾ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಅವರು ತಮ್ಮ ಪತ್ನಿಯೊಂದಿಗೆ ಅಯೋಧ್ಯೆಯ ತೀರ್ಥ ಕ್ಷೇತ್ರ ಭವನದಲ್ಲೇ ನೆಲೆಸಿದ್ದಾರೆ.
ಮತ್ತಷ್ಟು ಓದಿ: ರಾಮ ಮಂದಿರ ದೇಣಿಗೆ ಹಗರಣ:ಬೆಳಗ್ಗೆ ಫೋನ್ ಕಾಲ್, ಮಧ್ಯಾಹ್ನ ಕೋಟಿ ಕಳ್ಳತನ, ಏನೇನೆಲ್ಲಾ ನಡೀತು?
ಜುಲೈ 6 ರಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಡಾ. ಅನಿಲ್ ಮಿಶ್ರಾ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ ನಂತರ, ಬ್ಯಾಂಕ್ ವಹಿವಾಟು ನಡೆಸಲು ಸಹಿದಾರರಿಲ್ಲದೆ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಸುಮಾರು 1,000 ಸಿಬ್ಬಂದಿಯ ಜೂನ್ ತಿಂಗಳ ವೇತನ ಹಾಗೂ ಹೊರಗುತ್ತಿಗೆ ಸಂಸ್ಥೆಗಳ ಪಾವತಿ ವಿಳಂಬವಾಗಿತ್ತು.
ಈ ಸಮಸ್ಯೆಗೆ ಪರಿಹಾರವಾಗಿ, ಮಧ್ಯಂತರ ಪ್ರಧಾನ ಕಾರ್ಯದರ್ಶಿ ಕೃಷ್ಣ ಮೋಹನ್ ಹಾಗೂ ಕಾರ್ಯದರ್ಶಿ ಜಗದೀಶ್ ಅಫ್ಲೆ ಅವರನ್ನು ಸಹಿದಾರರನ್ನಾಗಿ ಎಸ್‌ಬಿಐಗೆ ಟ್ರಸ್ಟ್ ಪ್ರಸ್ತಾವನೆ ಸಲ್ಲಿಸಿದ್ದು, ಸದ್ಯ ಹಣಕಾಸು ವಹಿವಾಟು ಸುಗಮಗೊಂಡಿದೆ.
ಸಿಇಒ ಹುದ್ದೆಗೆ 5,200 ಅರ್ಜಿಗಳು
ಟ್ರಸ್ಟ್‌ನ ಸಿಇಒ ಹುದ್ದೆಗಾಗಿ ಬರೋಬ್ಬರಿ5,200 ಅರ್ಜಿಗಳು ಬಂದಿದ್ದು, ನಿವೃತ್ತ ನ್ಯಾಯಾಧೀಶ ಪ್ರಮೋದ್ ಕೊಹ್ಲಿ ನೇತೃತ್ವದ ಸಮಿತಿಯು ಇವುಗಳ ಪರಿಶೀಲನೆ ನಡೆಸುತ್ತಿದೆ. ಸಿಇಒ ಹಾಗೂ ಅಧಿಕೃತ ವಕ್ತಾರರ ನೇಮಕಾತಿಯನ್ನು ಸೆಪ್ಟೆಂಬರ್ 2 ರ ಸಭೆಯಲ್ಲಿ ಅಂತಿಮಗೊಳಿಸುವ ಸಾಧ್ಯತೆಯಿದೆ.
ಆಡಳಿತಾತ್ಮಕ ಸುಧಾರಣೆ: ರಾಮಮಂದಿರ ಉದ್ಘಾಟನೆಯ ನಂತರ ಲಕ್ಷಾಂತರ ಭಕ್ತರು ಆಗಮಿಸುತ್ತಿರುವುದರಿಂದ ಹಾಗೂ ದೇಣಿಗೆ ಕಳ್ಳತನದಂತಹ ಆಡಳಿತಾತ್ಮಕ ಲೋಪಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ, ಟ್ರಸ್ಟ್ ತನ್ನ ನಿರ್ವಹಣಾ ವ್ಯವಸ್ಥೆಯನ್ನು ವೃತ್ತಿಪರಗೊಳಿಸಲು ಸಿಇಒ ಹಾಗೂ ಕಾರ್ಯದರ್ಶಿ ಹುದ್ದೆಗಳನ್ನು ಸೃಷ್ಟಿಸಿದೆ.
ಆಡಿಟಿಂಗ್ ಮತ್ತು ತಂತ್ರಜ್ಞಾನ ಆಧಾರಿತ ಕಾವಲು: ದೇಣಿಗೆ ಸಂಗ್ರಹದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಕ್ಯೂಆರ್ ಕೋಡ್, ಡಿಜಿಟಲ್ ಸ್ವೀಕೃತಿ ಹಾಗೂ ಸಿಸಿಟಿವಿ ಕಣ್ಗಾವಲನ್ನು ಹೆಚ್ಚಿಸಲು ನೂತನ ಆಡಳಿತ ಮಂಡಳಿ ನಿರ್ಧರಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
