ಲಕ್ನೋ, ಜೂನ್ 24:ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯ ರಾಮಮಂದಿರಕ್ಕೆ ಸಂಗ್ರಹವಾದ ದೇಣಿಗೆಯಲ್ಲಿ ಕೋಟಿ ಕೋಟಿ ರೂಪಾಯಿ ವಂಚನೆ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಲಕ್ನೋ ಹೈಕೋರ್ಟ್‌ನಲ್ಲಿ ಇಂದು ಮಹತ್ವದ ಅರ್ಜಿ ವಿಚಾರಣೆ ನಡೆಯಲಿದೆ. ದೇಣಿಗೆಯಲ್ಲಿ ನಡೆದಿದೆ ಎನ್ನಲಾದ ಹಣ ಹಾಗೂ ಚಿನ್ನಾಭರಣಗಳ ಕಳ್ಳಾಟದ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಕೋರಿ ಈ ಅರ್ಜಿಯನ್ನು ಸಲ್ಲಿಸಲಾಗಿದೆ.
ಸಲ್ಲಿಕೆಯಾಗಿರುವ ಅರ್ಜಿಯಲ್ಲಿ, ರಾಮಮಂದಿರ ದೇಣಿಗೆಯಲ್ಲಿ 1,250 ಕೆಜಿ ಚಿನ್ನ, 70 ಕೆಜಿ ಬೆಳ್ಳಿ ಮತ್ತು 200 ಕೋಟಿ ರೂಪಾಯಿ ನಗದು ಹಣ ದುರ್ಬಳಕೆಯಾಗಿದೆ ಎಂದು ಗಂಭೀರ ಆರೋಪ ಮಾಡಲಾಗಿದೆ. ಈ ಬೃಹತ್ ಹಗರಣದ ಸಮಗ್ರ ತನಿಖೆಗೆ ಸ್ವತಂತ್ರ ತನಿಖಾ ಸಂಸ್ಥೆಯನ್ನು (SIT) ನೇಮಿಸುವಂತೆ ಆಗ್ರಹಿಸಲಾಗಿದೆ. ರಾಮಮಂದಿರಕ್ಕಾಗಿ ಭಕ್ತರು ಭಕ್ತಿ ಭಾವದಿಂದ ನೀಡಿದ ದೇಣಿಗೆಯಲ್ಲಿ ಕೋಟಿ ಕೋಟಿ ರೂಪಾಯಿ ಲೂಟಿಯಾಗಿದೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿಬಂದಿವೆ.
ಈ ವಿಚಾರವಾಗಿ ಈಗಾಗಲೇ ಗೃಹ ಸಚಿವಾಲಯಕ್ಕೆ ಎಸ್ಐಟಿ ಒಂದು ವರದಿಯನ್ನು ಸಲ್ಲಿಸಿದೆ ಎಂದು ತಿಳಿದುಬಂದಿದೆ. ಇದರ ಮಧ್ಯೆ, ಈ ಪ್ರಕರಣದ ಬಗ್ಗೆ ಇನ್ನಷ್ಟು ಆಳವಾದ ಮತ್ತು ಪಕ್ಷಪಾತರಹಿತ ತನಿಖೆ ಅಗತ್ಯ ಎಂಬ ಕೂಗು ಕೇಳಿಬಂದಿದ್ದು, ನ್ಯಾಯಾಲಯದ ಮೊರೆ ಹೋಗಲಾಗಿದೆ. ದೇಣಿಗೆ ಹಣ ಮತ್ತು ಆಭರಣಗಳ ದುರ್ಬಳಕೆ ಕುರಿತು ನ್ಯಾಯಯುತ ತನಿಖೆಯಾಗಬೇಕು ಎಂಬುದು ಅರ್ಜಿದಾರರ ಪ್ರಮುಖ ಬೇಡಿಕೆಯಾಗಿದೆ. ಇಂದು ಲಕ್ನೋ ಹೈಕೋರ್ಟ್ ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
