ಹಲವಾರು ನಟರು ಅಯ್ಯಪ್ಪ ಮಾಲೆ ಧಾರಣೆ ಮಾಡುತ್ತಾರೆ. ಆದರೆ ಮಾಲೆ ಧರಿಸಿದಾಗ ಹೊರಗೆ ಕಾಣಿಸಿಕೊಳ್ಳುವುದೇ ಇಲ್ಲ. ಬಹುತೇಕರು ಒಂದೇ ದಿನಕ್ಕೆ ಮಾಲೆ ಧರಿಸಿ, ಶಬರಿಮಲೆಗೆ ಹೊರಟು ಬಿಡುತ್ತಾರೆ. ಆದರೆ ನಟ ರಾಮ್ ಚರಣ್ ಹಾಗಲ್ಲ. ಅವರು ಹಲವು ದಿನಗಳ ಕಾಲ ಮಾಲೆ ಧರಿಸಿ, ನೇಮ-ನಿಷ್ಠೆಯಿಂದ ವೃತ ಪಾಲಿಸುತ್ತಾರೆ. ವರ್ಷದಲ್ಲಿ ಸುಮಾರು 80ಕ್ಕೂ ಹೆಚ್ಚು ದಿನಗಳು ಅವರು ವೃತದಲ್ಲಿ ಕಳೆಯುತ್ತಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ರಾಮ್ ಚರಣ್ ಅವರಿಗೆ ಪ್ರಶ್ನಿಸಲಾಗಿದ್ದು, ತಾವೇಕೆ ಪದೇ ಪದೇ ಮಾಲಧಾರಿ ಆಗುವುದೆಂದು ವಿವರಿಸಿದ್ದಾರೆ.
ಇತ್ತೀಚೆಗೆ ‘ಎಸ್ಕ್ವೈರ್ ಇಂಡಿಯಾ’ ಮ್ಯಾಗಜೀನ್ನ ಶೂಟಿಂಗ್ಗಾಗಿ ಹಾಂಕಾಂಗ್ಗೆ ಹೋಗಿದ್ದರು ರಾಮ್ ಚರಣ್. ಅಲ್ಲಿನ ಐಷಾರಾಮಿ ಹೋಟೆಲ್ನಲ್ಲಿ ಬರಿಗಾಲಿನಲ್ಲಿ ಓಡಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಈ ಸಂದರ್ಭದಲ್ಲಿ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ಆಧ್ಯಾತ್ಮಿಕ ಜೀವನ, ಮಾಲಧಾರಣೆ ಇನ್ನೂ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
‘ನಾನು ಕಳೆದ 20 ವರ್ಷಗಳಿಂದ ಪ್ರತಿ ವರ್ಷ ಎರಡು ಬಾರಿ ತಪ್ಪದೇ ಅಯ್ಯಪ್ಪ ದೀಕ್ಷೆಯನ್ನು ಪಾಲಿಸುತ್ತಿದ್ದೇನೆ. ಈ 41 ದಿನಗಳ ಕಾಲ ಬರಿಗಾಲಿನಲ್ಲಿ ನಡೆಯುವುದು, ಕಪ್ಪು ವಸ್ತ್ರ ಧರಿಸುವುದು ಮತ್ತು ಸಾತ್ವಿಕ ಆಹಾರ ಸೇವಿಸುವುದು ನನ್ನ ಜೀವನದ ಅವಿಭಾಜ್ಯ ಅಂಗವಾಗಿದೆ. ಇದು ನನಗೆ ಮಾನಸಿಕ ಶಾಂತಿ ಮತ್ತು ಶಿಸ್ತನ್ನು ನೀಡುತ್ತದೆ’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:‘ಪೆದ್ದಿ’ ಸಿನಿಮಾ ಶೂಟಿಂಗ್ ಮುಗಿಯಿತೇ? ರಾಮ್ ಚರಣ್ ಕೊಟ್ಟರು ಉತ್ತರ
‘ನನ್ನ ತಂದೆಯ ಸಲಹೆಯ ಮೇರೆಗೆ ನಾನು 17 ನೇ ವಯಸ್ಸಿನಲ್ಲಿ ಅಯ್ಯಪ್ಪ ದೀಕ್ಷೆಯನ್ನು ಪ್ರಾರಂಭಿಸಿದೆ. ಈ ದೀಕ್ಷೆ ನನ್ನ ಜೀವನದಲ್ಲಿ ಶಿಸ್ತನ್ನು ಹೆಚ್ಚಿಸಿತು. ಇದು ನನ್ನ ಆಲೋಚನೆಗಳನ್ನು ನಿಯಂತ್ರಿಸಲು ಸಹಾಯ ಮಾಡಿತು. ಅನಗತ್ಯ ವಿಷಯಗಳಿಂದ ದೂರವಿರಲು ಮತ್ತು ಮಾನಸಿಕ ಶಾಂತಿಯನ್ನು ಪಡೆಯಲು ಇದು ನನಗೆ ಸಹಾಯ ಮಾಡಿತು ಎಂದಿದ್ದಾರೆ.
ತಮ್ಮ ತಂದೆ ಮೆಗಾಸ್ಟಾರ್ ಚಿರಂಜೀವಿ ಬಗ್ಗೆ ಮಾತನಾಡಿ, ‘ಅವರಿಂದ ಕಠಿಣ ಪರಿಶ್ರಮದ ಪಾಠವನ್ನು ನಾನು ಕಲಿತಿದ್ದೇನೆ. ‘ಉಳಿದವರೆಲ್ಲರೂ 50 ಗಂಟೆ ಕೆಲಸ ಮಾಡಿದರೆ, ನೀವು 100 ಗಂಟೆ ಕೆಲಸ ಮಾಡಬೇಕು’ ಎಂಬುದು ನನ್ನ ತಂದೆ ನನಗೆ ಕಲಿಸಿದ ತತ್ವ. ಅವರ ಪ್ರಭಾವ ನನ್ನ ಜೀವನದ ಮೇಲೆ ಸಾಕಷ್ಟಿದೆ’ ಎಂದಿದ್ದಾರೆ ರಾಮ್ ಚರಣ್.
ತಮ್ಮ ಪ್ರೀತಿಯ ಸಾಕುನಾಯಿ ‘ರೈಮ್’ ಬಗ್ಗೆ ಮಾತನಾಡುತ್ತಾ, ‘ರೈಮ್ ನನ್ನ ಮಗಳಿಗೆ ಒಬ್ಬಳು ಗದರಿಸುವ ಅಕ್ಕನಂತಿದ್ದಾಳೆ. ಕ್ಲಿನ್ ಕಾರಾ ಸ್ವಿಮ್ಮಿಂಗ್ ಪೂಲ್ ಹತ್ತಿರ ಹೋದಾಗಲೆಲ್ಲಾ ರೈಮ್ ಅವಳನ್ನು ತಡೆದು ನಿಲ್ಲಿಸುತ್ತಾಳೆ. ಅವಳ ಬುದ್ಧಿವಂತಿಕೆಯನ್ನು ಕಂಡು ನನಗೆ ಆಶ್ಚರ್ಯವಾಗುತ್ತದೆ’ ಎಂದು ಮಗಳ ಸುರಕ್ಷತೆಯ ಬಗ್ಗೆ ರೈಮ್ ವಹಿಸುವ ಕಾಳಜಿಯನ್ನು ಶ್ಲಾಘಿಸಿದರು.
‘ಈಗ ನಾನು ಕೇವಲ ನಟನಾಗಿ ಮಾತ್ರವಲ್ಲದೆ, ತಂದೆಯಾಗಿ, ಪತಿಯಾಗಿ ಮತ್ತು ಮಗನಾಗಿ ಹಲವಾರು ಜವಾಬ್ದಾರಿಗಳನ್ನು ಹೊಂದಿದ್ದೇನೆ. ಕೆಲಸ ಮುಗಿಸಿ ಮನೆಗೆ ಬಂದ ತಕ್ಷಣ ನಾನು ಸೋಮಾರಿಯಾಗಲು ಸಾಧ್ಯವಿಲ್ಲ. ಮಕ್ಕಳ ಜೊತೆ ಆಟವಾಡಬೇಕು, ಹೆಂಡತಿಯ ಅಗತ್ಯಗಳನ್ನು ಗಮನಿಸಬೇಕು ಮತ್ತು ಅಭಿಮಾನಿಗಳ ಸಮಸ್ಯೆಗಳಿಗೂ ಸ್ಪಂದಿಸಬೇಕು. ಪ್ರತಿ ದಿನವೂ ನಾನು ಶೇ. 100 ರಷ್ಟು ಸಕ್ರಿಯನಾಗಿರಬೇಕು’ ಎಂದು ತಮ್ಮ ಜೀವನಶೈಲಿಯ ಬಗ್ಗೆ ವಿವರಿಸಿದ್ದಾರೆ.
ರಾಮ್ ಚರಣ್ ಪ್ರಸ್ತುತ ‘ಪೆದ್ದಿ’ ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾ ಏಪ್ರಿಲ್ 30ರಂದು ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ಶಿವರಾಜ್ ಕುಮಾರ್ ಸಹ ನಟಿಸಿದ್ದಾರೆ. ಜಾನ್ಹವಿ ಕಪೂರ್ ಸಿನಿಮಾದ ನಾಯಕಿ. ಸಿನಿಮಾ ನಿರ್ದೇಶನ ಮಾಡಿರುವುದು ಬುಚ್ಚಿಬಾಬು ಸನಾ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ