ಬೆಂಗಳೂರು, ಜೂನ್ 15: ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ. ಇಂದು ಬೆಳಗಿನ ಜಾವವೇ ಕೊಚ್ಚಿನ್ ನಗರದ ಸುಬ್ರಮಣ್ಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದ ಸಚಿವರು, ನಂತರ ದೇಗುಲದಲ್ಲಿಯೇ ಇರುಮುಡಿ ಒತ್ತು ಶಬರಿಮಲೆಗೆ ಯಾತ್ರೆ ಹೊರಟಿದ್ದಾರೆ. ಮಧ್ಯಾಹ್ನದ ಹೊತ್ತಿಗೆ ಪಂಪಾ ನದಿ ತೀರವನ್ನು ತಲುಪಲಿರುವ ಸಚಿವರು ಹಾಗೂ ಅವರೊಡನೆ ತೆರಳಿರುವ ಭಕ್ತರ ತಂಡ, ಪುಣ್ಯ ಸ್ನಾನ ಮಾಡಿ ಶಬರಿಮಲೆಯತ್ತ ಸಾಗಲಿದೆ. ಸಂಜೆ ಅಯ್ಯಪ್ಪ ಸನ್ನಿಧಿಯಲ್ಲಿ ಪಡಿ ಪೂಜೆಯಲ್ಲಿ ಪಾಲ್ಗೊಳಿರುವ ಸಚಿವರು ನಂತರ ಅಯ್ಯಪ್ಪ ಸ್ವಾಮಿಗೆ ಪುಷ್ಪ ಅಭಿಷೇಕದಲ್ಲಿ ಭಾಗಿಯಾಗಲಿದ್ದಾರೆ. ಕುಮಾರಸ್ವಾಮಿಯವರು ಕೇಂದ್ರ ಸಚಿವರಾದ ನಂತರ ಶಬರಿಮಲೆಗೆ ಕೈಗೊಂಡ ಮೊದಲ ಯಾತ್ರೆ ಇದಾಗಿದೆ. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಸುರೇಶ್ ಬಾಬು, ಮಾಜಿ ಮಂತ್ರಿಗಳಾದ ಸಿ.ಎಸ್. ಪುಟ್ಟರಾಜು, ಸಾ.ರಾ. ಮಹೇಶ್, ವಿಧಾನ ಪರಿಷತ್ ಸದಸ್ಯ ಭೋಜೇಗೌಡರ, ಶಾಸಕರಾದ ಶರಣಗೌಡ ಕಂದಕೂರ, ಮಾಜಿ ಶಾಸಕರಾದ ಮಾಗಡಿ ಮಂಜುನಾಥ್, ಹೆಚ್.ಎಂ. ರಮೇಶ್ ಗೌಡ ಸೇರಿದಂತೆ 30ಕ್ಕೂ ಹೆಚ್ಚು ಜನರ ತಂಡದೊಂದಿಗೆ ಹೆಚ್ಡಿಕೆ ಯಾತ್ರೆ ಕೈಗೊಂಡಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
