ಅರಣ್ಯಾಧಿಕಾರಿಗಳ ಗುಂಡೇಟಿಗೆ ಮೂವರು ಬಲಿ: ಕೊನೆಗೂ ದಾಖಲಾಯ್ತು FIR – Kannada News | Three Killed In Forest Encounter In Chamrajnagar: FIR Booked Against Forest Staff

ಚಾಮರಾಜನಗರ, (ಆಗಸ್ಟ್ 15): ಹನೂರು ತಾಲೂಕಿನ ಶಾಗ್ಯ ಗ್ರಾಮ ಪಂಚಾಯಿತಿ ವಾಪ್ತಿಯ ಹೊಳೆದಟ್ಟಿ ಅರಣ್ಯದಲ್ಲಿ ಮರಿಯ ಮಂಗಲ ಗ್ರಾಮದ ಅರಣ್ಯ ಪ್ರದೇಶದಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ (Chamrajnagar Encounter) ಸಂಬಂಧಿಸಿದಂತೆ ಕೊನೆಗೂ ಎಫ್​​​​ಐಆರ್ ದಾಖಲಾಗಿದೆ. ಪ್ರಾಣಿ ಬೇಟೆಗೆ ಬಂದಿದ್ದಾರೆಂದು ಅರಣಾಧ್ಯಿಕಾರಿಗಳು ನಡೆಸಿದ ಗುಂಡಿನ ದಾಳಿಗೆ ಮೂವರು ಮೃತಪಟ್ಟಿದ್ದು, ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ FIR ದಾಖಲಾಗಿದೆ. ಮೃತ ಆಥೋಣಿಸಾಮಿ ಪತ್ನಿ ಲೂರ್ದಾಮೇರಿ ದೂರಿನ ಆಧಾರದಲ್ಲಿ ಚಾಮರಾಜನಗರದ ಹನೂರು ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್​​​ಐಆರ್ ದಾಖಲಾಗಿದೆ.

ದಕ್ಷಿಣ ವಲಯ ಐಜಿ ಬೋರಲಿಂಗೇಗೌಡ, ಚಾಮರಾಜನಗರ ಎಸ್ಪಿ ಮುತ್ತುತಾಜು ಸಮ್ಮುಖದಲ್ಲಿ ಅರಣ್ಯ ಅಧಿಕಾರಿಗಳು ಹನೂರು ವಿಭಾಗ ಎಂದು ಆರೋಪಿಗಳನ್ನಾಗಿಸಿ ಕೇಸ್‌ ದಾಖಲಿಸಲಾಗಿದೆ. ನಿರ್ದಿಷ್ಟ ಹೆಸರು ನಮೂದಿಸದೇ ಅರಣ್ಯ ಅಧಿಕಾರಿಗಳು ಎಂದು ಎಫ್​​​ಐಆರ್​​​​​ನಲ್ಲಿ ನಮೂದಿಸಲಾಗಿದೆ. ಬಿಎನ್ ಎಸ್ 103(1) ಅಡಿಯಲ್ಲಿ ಕೇಸು ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಚಾಮರಾಜನಗರ ಅರಣ್ಯದಲ್ಲಿ ಎನ್‌ಕೌಂಟರ್: ಮೂವರು ಬಲಿ, DRFO ಕಚೇರಿ ಧ್ವಂಸ

ದೂರಿನಲ್ಲಿ ಏನಿದೆ?

ಹಸು ಸಾಕಿಕೊಂಡು ಜೀವನ ಸಾಗಿಸುತ್ತಿದ್ದೇವೆ. 14.08.2026 ರಂದು ನಮ್ಮ ಹಸುಗಳು‌‌ ಕಾಡಿಗೆ ಮೇಯಲು ಹೋಗಿದ್ದವು. ಅವುಗಳು ವಾಪಸ್ ಬಂದಿರಲಿಲ್ಲ.ಹಸುಗಳನ್ನು ಹುಡುಕಿಕೊಂಡು ಬರಲು ನಿನ್ನೆ (ಆಗಸ್ಟ್ 14) ಸಂಜೆ ನನ್ನ ಪತಿ ಆಥೋಣಿಸಾಮಿ, ತಮ್ಮ ಕುಮಾರ್, ಮೈದುನ ಪೀಟರ್, ದೊಡ್ಡಪ್ಪನ ಮಗ ಜೋಸೆಫ್ ತೆರಳಿದ್ದರು. ಬೆಳಿಗ್ಗೆ ಆದರೂ ಅವರು ಮನೆಗೆ ಬಂದಿರಲಿಲ್ಲ. ಬೆಳಿಗ್ಗೆ ಜೋಸೆಫ್ ಕರೆ ಮಾಡಿ ಘಟನೆ ವಿವರಿಸಿದ. ಮರಿಯಮಂಗಲ ಗ್ರಾಮದಿಂದ 4 ಕಿಮೀ ಕಾಡಿನಲ್ಲಿ ‌ನಾವು‌ ವಿಶ್ರಾಂತಿ ಮಾಡುತ್ತಾ ಮಲಗಿದ್ದೆವು. ಬೆಳಿಗಿನ ಜಾವ ಸುಮಾರು 3 ರಿಂದ 5 ಗಂಟೆ ಸಂದರ್ಭದಲ್ಲಿ ಅರಣ್ಯ ಅಧಿಕಾರಿಗಳು ಇದ್ದಕ್ಕಿದ್ದಂತೆ ಶೂಟ್ ಮಾಡಿದ್ರು. ಈ ವೇಳೆ ಸ್ಥಳದಲ್ಲೇ ಮೂವರು ಮೃತಪಟ್ಟರು‌. ನಾನು ತಪ್ಪಿಸಿಕೊಂಡು ಬಂದೆ ಎಂದು ಜೋಸೆಫ್ ತಿಳಿಸಿದ್ರು. ಅರಣ್ಯ ಇಲಾಖೆ ಅಧಿಕಾರಿಗಳು ಕೊಲೆ ಮಾಡಿದ್ದಾರೆ ಎಂದು ಲೂರ್ದಾಮೇರಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ಹೇಳಿದ್ದಿಷ್ಟು

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ಪ್ರತಿಕ್ರಿಯಿಸಿದ್ದು, ಕಾವೇರಿ ವನ್ಯಧಾಮದ ಕರಡಿ ಕಲ್ಲು ಒಡ್ಡು ಬಳಿ ಘಟನೆ ನಡೆದಿದೆ. ಪೈರಿಂಗ್ ನಿಂದ ಮೂವರು ಸಾವನ್ನಪ್ಪಿರುವುದಾಗಿ ಅರಣ್ಯಧಿಕಾರಿಗಳು ಮಾಹಿತಿ ನೀಡಿದರು. ಫೈರಿಂಗ್ ನಿಂದ ಮೂರು ಜನರ ಸಾವು,ಒಬ್ಬರು ಎಸ್ಕೇಪ್ ಆಗಿದ್ದರು.
ಜೀವ ಉಳಿಸಲು ಕೊಳ್ಳೇಗಾಲ ಆಸ್ಪತ್ರೆಗೆ ಕರೆದೊಯ್ದಿದ್ದಾಗಿ ಮಾಹಿತಿ ನೀಡಿದರು. ಮೂವರು ಮೃತಪಟ್ಟಿದ್ದರಿಂದ ಅಂಥೋಣಿ ಸಾಮಿ,ಜಾನ್ ಪೀಟರ್,ಸೆಬಾಸ್ಟಿಯನ್ ಕುಮಾರ್ ಮೃತದೇಹದ ‌ಮೈಸೂರಿನ ಕೆಆರ್ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಯಿತು. ಈಗ ಮೃತನ ಕುಟುಂಬಸ್ಥರ ದೂರು‌ ನೀಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಅರಣ್ಯ ಸಿಬ್ಬಂದಿ ಗುಂಡೇಟಿಗೆ ಮೂವರು ಬಲಿ: ಘಟನೆಯ ಸ್ಫೋಟಕ ಅಂಶ ಬಿಚ್ಚಿಟ್ಟ ಅರಣ್ಯ ಸಚಿವ ರಾಮಲಿಂಗಾರೆಡ್ಡಿ

ನಾಲ್ವರು ಬೇಟೆಯಾಡಲು ಬಂದಿದ್ರು ಎಂದ ಸಿಬ್ಬಂದಿ

ನಾಲ್ಕು ಜನರು ದನ ಕಾಯಲು ಹೋಗಿದ್ದರು. ಅರಣ್ಯ ಸಿಬ್ಬಂದಿ ಅವರ ಮೇಲೆ ಫೈರಿಂಗ್ ಮಾಡಿದ್ದಾರೆಂದು ದೂರು ಕೊಟ್ಟಿದ್ದಾರೆ. ಇನ್ನು ನಾಲ್ವರು ಬೇಟೆಯಾಡಲು ಅರಣ್ಯಕ್ಕೆ ಬಂದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬೇಟೆಗೆ ಬಂದವರು ಅರಣ್ಯ ಸಿಬ್ಬಂದಿಗಳ ಮೇಲೆ ಫೈರಿಂಗ್ ಮಾಡಿದ್ದಾರೆ. ಅದಕ್ಕೆ ನಾವು ಫೈರಿಂಗ್ ಮಾಡಿದ್ದೇವೆ ಅಂತಾ ಹೇಳಿದ್ದಾರೆ. ಸತ್ಯಾಸತ್ಯತೆ ಹೊರತರುವ ಕೆಲಸವಾಗುತ್ತದೆ.ನಾಡಬಂದೂಕು ಕೂಡ ಅರಣ್ಯ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಎರಡು ಬ್ಯಾಗ್ ಮಾಂಸ ಸಿಕ್ಕಿದೆ ಅಂತಾ ಹೇಳಿದ್ದಾರೆ ಎಂದು ವಿವರಿಸಿದರು.

ಸತ್ತವರ ವಿರುದ್ಧ ಪ್ರಕರಣಗಳಿರುವ ಬಗ್ಗೆ ಮಾಹಿತಿ ಇಲ್ಲ. ತನಿಖೆ ನಡೆದ ನಂತರ ಗೊತ್ತಾಗುತ್ತದೆ. ಅರಣ್ಯ ಬಾರ್ಡರ್ ಗೂ ಹಾಗೂ ಘಟನೆ ನಡೆದಿರುವ ಸ್ಥಳಕ್ಕೆ ದೂರವಿದೆ. ಈಗ ಕುಟುಂಬಸ್ಥರು ಮೈಸೂರಿಗೆ ತೆರಳಿದ್ದಾರೆ. ಅರಣ್ಯಧಿಕಾರಿಗಳು ಯಾವುದೇ ದೂರನ್ನ ನೀಡಿಲ್ಲ. ಅವರು ಸಹ ದೂರನ್ನು ಕೊಡಬಹುದು ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *