ವಾರಾಣಸಿ, ಜುಲೈ 17: ಉತ್ತರ ಪ್ರದೇಶದ ವಾರಾಣಸಿ(Varanasi)ಯಲ್ಲಿ ವಿದೇಶ ಪ್ರಜೆಯ ದಾಂಧಲೆ ಹೆಚ್ಚಾಗಿತ್ತು. ಅರೆಬರೆ ಬಟ್ಟೆ ತೊಟ್ಟಿದ್ದ ಆತ, ಸುಮಾರು ಮನೆಗಳಿಗೆ ನುಗ್ಗಿ, ಜನರ ಜತೆ ಜಗಳವಾಡಿದ್ದಲ್ಲದೆ ಅವರನ್ನು ಕಚ್ಚಿರುವ ಕುರಿತು ದೂರುಗಳು ಕೇಳಿಬಂದಿದೆ. ವೈರಲ್ ಆದ ವಿಡಿಯೋದಲ್ಲಿ ಹುಚ್ಚನಂತೆ ಜನರ ಮುಂದೆ ನಿಂತು ಬಾಯಿಗೆ ಬಂದಂತೆ ಮಾತನಾಡುವುದನ್ನು ಕಾಣಬಹುದು.
ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ‘ಸಪ್ತಸಾಗರ ಔಷಧ ಮಾರುಕಟ್ಟೆ’ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮನೆಗಳಿಗೆ ನುಗ್ಗಿ ವಸ್ತುಗಳನ್ನು ಧ್ವಂಸಗೊಳಿಸಿದ ವಿದೇಶಿಗ, ಸ್ಥಳೀಯ ನಿವಾಸಿಯೊಬ್ಬರ ಕೈಯನ್ನು ಕಚ್ಚಿ ಗಾಯಗೊಳಿಸಿದ್ದಾನೆ. ಆತ ಮಾದಕವಸ್ತು ಪ್ರಭಾವದಲ್ಲಿ ಈ ರೀತಿ ಮಾಡಿರಬಹುದು ಎಂದು ಹೇಳಲಾಗಿದೆ.
ಕಿರಿದಾದ ಗಲ್ಲಿಗಳಲ್ಲಿ ಜನರ ಬೆನ್ನಟ್ಟಿದ ವಿದೇಶಿ ಪ್ರಜೆ
ಸ್ಥಳೀಯರ ಪ್ರಕಾರ, ಈ ವಿದೇಶಿ ಪ್ರಜೆ ಮೊದಲು ರಸ್ತೆಯಲ್ಲಿ ವಿಚಿತ್ರವಾಗಿ ಓಡಾಡಿದ್ದಾನೆ. ನಂತರ ವಸತಿ ಕಟ್ಟಡವೊಂದರ ಮೇಲಿನ ಮಹಡಿಗೆ ನುಗ್ಗಿ ಅಲ್ಲಿನ ವಸ್ತುಗಳನ್ನು ಮನಬಂದಂತೆ ಹೊರಗೆ ಎಸೆಯಲು ಆರಂಭಿಸಿದ್ದಾನೆ. ಸ್ಥಳೀಯರು ಆತನನ್ನು ಶಾಂತಗೊಳಿಸಲು ಪ್ರಯತ್ನಿಸಿದಾಗ, ಆತ ಮತ್ತಷ್ಟು ಆಕ್ರೋಶಗೊಂಡು ಜನರ ಮೇಲೆ ದಾಳಿ ಮಾಡಿದ್ದಾನೆ. ಈ ಗದ್ದಲದ ನಡುವೆ ಆತ ನಿವಾಸಿಯೊಬ್ಬರ ಕೈಗೆ ಬಲವಾಗಿ ಕಚ್ಚಿದ್ದಾನೆ ಹಾಗೂ ಕಿರಿದಾದ ಹಾದಿಗಳಲ್ಲಿ ಸಾರ್ವಜನಿಕರನ್ನು ಬೆನ್ನಟ್ಟಿ ಭೀತಿ ಹುಟ್ಟಿಸಿದ್ದಾನೆ.
ವಿಷಯ ತಿಳಿದು ಕೊತ್ವಾಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ಆತನಿಗೆ ಕೆಳಗಿಳಿಯುವಂತೆ ಮನವೊಲಿಸಲು ಯತ್ನಿಸಿದಾಗ, ಆತ ಪೊಲೀಸರ ಮೇಲೆಯೇ ತಿರುಗಿಬಿದ್ದು ‘ಹಿಂತಿರುಗಿ ಹೋಗಿ’ ಎಂದು ಜೋರಾಗಿ ಕಿರುಚಾಡಿದ್ದಾನೆ. ಕೊನೆಗೆ ಸ್ಥಳೀಯರು ಮತ್ತು ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಆತನನ್ನು ಹಿಡಿದು ವಶಕ್ಕೆ ಪಡೆದಿದ್ದಾರೆ.
ವಿಡಿಯೋ
ಬಂಧನದ ನಂತರ ಪೊಲೀಸರು ಆತನನ್ನು ವೈದ್ಯಕೀಯ ಪರೀಕ್ಷೆಗಾಗಿ ಕಬೀರ್‌ಚೌರಾ ವಿಭಾಗೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಕೊತ್ವಾಲಿ ಇನ್ಸ್‌ಪೆಕ್ಟರ್ ದಯಾಶಂಕರ್, ವಿದೇಶಿ ಪ್ರಜೆಯನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಆತನ ಈ ಆಕ್ರಮಣಕಾರಿ ನಡವಳಿಕೆಗೆ ಮಾನಸಿಕ ಆರೋಗ್ಯದ ಸಮಸ್ಯೆಯೇ ಕಾರಣ ಅಥವಾ ಆತ ಅತಿಯಾಗಿ ಮಾದಕ ವಸ್ತು ಸೇವಿಸಿದ್ದಾನೆಯೇ ಎಂಬ ಬಗ್ಗೆ ವೈದ್ಯಕೀಯ ವರದಿ ಬಂದ ನಂತರ ಸತ್ಯ ತಿಳಿಯಲಿದೆ ಎಂದಿದ್ದಾರೆ.
ಪ್ರಸ್ತುತ ಪೊಲೀಸರು ಆ ವ್ಯಕ್ತಿಯ ಗುರುತು, ಆತ ಯಾವ ದೇಶದವನು ಮತ್ತು ವಾರಾಣಸಿಗೆ ಬಂದ ಉದ್ದೇಶವೇನು ಎಂಬುದನ್ನು ಪತ್ತೆಹಚ್ಚಲು ತನಿಖೆ ನಡೆಸುತ್ತಿದ್ದು, ವರದಿ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
