T20 World Cup 2026: ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ್ ತಂಡದ ಆರಂಭಿಕ ದಾಂಡಿಗ ಸಾಹಿಬ್ಝಾದ ಫರ್ಹಾನ್ (Sahibzada farhan) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ನಮೀಬಿಯ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಸಾಹಿಬ್ ಇದೀಗ ಇಂಗ್ಲೆಂಡ್ ವಿರುದ್ಧ ಅರ್ಧಶತಕ ಬಾರಿಸಿ ಮಿಂಚಿದ್ದಾರೆ.
ಶ್ರೀಲಂಕಾದ ಪಲ್ಲೆಕೆಲೆ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸೂಪರ್-8 ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಸಾಹಿಬ್ಝಾದ ಫರ್ಹಾನ್ 45 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 63 ರನ್ ಬಾರಿಸಿದ್ದಾರೆ.
ಈ 63 ರನ್ಗಳೊಂದಿಗೆ ಸಾಹಿಬ್ಝಾದ ಫರ್ಹಾನ್ ಈ ಬಾರಿಯ ವಿಶ್ವಕಪ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಈವರೆಗೆ 5 ಇನಿಂಗ್ಸ್ ಆಡಿರುವ ಸಾಹಿಬ್ ಒಟ್ಟು 283 ರನ್ಗಳಿಸಿದ್ದಾರೆ. ಈ ಮೂಲಕ ಕಿಂಗ್ ಕೊಹ್ಲಿಯ ಐತಿಹಾಸಿಕ ದಾಖಲೆಯತ್ತ ದಾಪುಗಾಲಿಟ್ಟಿದ್ದಾರೆ.
ವಿರಾಟ್ ಕೊಹ್ಲಿ 2014ರ ಟಿ20 ವಿಶ್ವಕಪ್ನಲ್ಲಿ 6 ಇನಿಂಗ್ಸ್ಗಳ ಮೂಲಕ ಬರೋಬ್ಬರಿ 319 ರನ್ ಗಳಿಸಿದ್ದರು. ಈ ಮೂಲಕ ವಿಶ್ವಕಪ್ ಇತಿಹಾಸದಲ್ಲೇ ಆವೃತ್ತಿಯೊಂದರಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದರು.
ಇದೀಗ ಈ ದಾಖಲೆ ಮುರಿಯಲು ಸಾಹಿಬ್ಝಾದ ಫರ್ಹಾನ್ಗೆ ಕೇವಲ 37 ರನ್ಗಳ ಅವಶ್ಯಕತೆಯಿದೆ. ಅಂದರೆ ಸೂಪರ್-8 ಸುತ್ತಿನ ತನ್ನ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 37 ರನ್ ಬಾರಿಸಿದರೆ ವಿರಾಟ್ ಕೊಹ್ಲಿಯ ದಾಖಲೆಯನ್ನು ಮುರಿಯಬಹುದು. ಅದರಂತೆ ಫೆಬ್ರವರಿ 28 ರಂದು ಸಾಹಿಬ್ಝಾದ ಫರ್ಹಾನ್ ಹೊಸ ಇತಿಹಾಸ ಬರೆಯಲಿದ್ದಾರಾ ಕಾದು ನೋಡಬೇಕಿದೆ.
Published On – 8:42 am, Wed, 25 February 26
