‘ಕಾಂತಾರ’ (Kantara) ಮತ್ತು ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮೂಲಕ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿಬಿಟ್ಟಿದ್ದಾರೆ. ಕನ್ನಡ ಚಿತ್ರರಂಗದ ಗಡಿ ದಾಟಿ ಹಲವು ಚಿತ್ರರಂಗಗಳಲ್ಲಿ ಬೇಡಿಕೆಯ ನಟ ಎನಿಸಿಕೊಂಡಿದ್ದಾರೆ. ಇದಕ್ಕೆಲ್ಲ ಅವರ ಕ್ರಿಯಾಶೀಲತೆ, ಶ್ರಮ, ಹೊಸತನಕ್ಕೆ ಅಳವಡಿಸಿಕೊಳ್ಳುವ ಗುಣ, ಕಷ್ಟ ಸಹಿಷ್ಣುತೆಗಳೇ ಕಾರಣ. ಇದೀಗ ದಕ್ಷಿಣ ಭಾರತದ ಬಲು ಬೇಡಿಕೆಯ ಹಿರಿಯ ನಟರೊಬ್ಬರು ರಿಷಬ್ ಶೆಟ್ಟಿ ಅವರು ಸೆಟ್ನಲ್ಲಿ ಹೇಗಿರುತ್ತಾರೆ? ಅವರ ಈ ಯಶಸ್ಸಿಗೆ ಕಾರಣ ಏನು? ಎಂಬುದನ್ನು ವಿವರಿಸಿದ್ದಾರೆ.
ಮೂಲತಃ ಮಲಯಾಳಂ ನಟರಾದರೂ ಕನ್ನಡ ಸೇರಿದಂತೆ ಹಲವಾರು ಭಾಷೆಗಳ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ನಟ ಜಯರಾಂ. ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ್ದ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಪ್ರಮುಖವಾದ ಪಾತ್ರದಲ್ಲಿ ಜಯರಾಂ ನಟಿಸಿದ್ದರು. ಇದೀಗ ಅವರು ತಮಿಳು ಸಿನಿಮಾಕ್ಕೆ ಸಂಬಂಧಿಸಿದಂತೆ ಪಾಲ್ಗೊಂಡಿದ್ದ ಸಂದರ್ಶನದಲ್ಲಿ ಮಾತನಾಡುತ್ತಾ, ನಟ ರಿಷಬ್ ಶೆಟ್ಟಿ ಅವರೊಟ್ಟಿಗೆ ನಟಿಸಿದ ಅನುಭವದ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ:ಸೂರ್ಯ ನಟನೆಯ ಹಿಟ್ ಸಿನಿಮಾಕ್ಕೆ ‘ಕಾಂತಾರ’, ‘ಸಪ್ತ ಸಾಗರದಾಚೆ’ ಸ್ಪೂರ್ತಿ
‘ರಿಷಬ್ ಶೆಟ್ಟಿ, ಸಿನಿಮಾ ಸೆಟ್ನಲ್ಲಿ ಪಾದರಸದಂತೆ ಇರುತ್ತಿದ್ದರು. ಚಿತ್ರೀಕರಣದ ಯಾವುದೇ ವಿಭಾಗದಲ್ಲಿಯೂ ಸಹ ಅವರೇ ಇರುತ್ತಿದ್ದರು. ಸೆಟ್ ನಿರ್ಮಾಣ, ಮೇಕಪ್, ಕ್ಯಾಮೆರಾ, ಆಕ್ಷನ್ ಎಲ್ಲದರಲ್ಲೂ ಅವರು ಭಾಗವಹಿಸುತ್ತಿದ್ದರು, ಮೇಲುಸ್ತುವಾರಿ ನೋಡುತ್ತಿದ್ದರು, ಸಲಹೆಗಳನ್ನು ನೀಡುತ್ತಿದ್ದರು. ಸೆಟ್ಗೆ ಬಂದಾಗಿನಿಂದ ಹೊರಗೆ ಹೋಗುವವರೆಗೆ, ಹೋದಮೇಲೂ ಅವರು ಸಿನಿಮಾದ ಕೆಲಸಗಳಲ್ಲಿಯೇ ಬಿಡುವಾಗಿರುತ್ತಿದ್ದರು’ ಎಂದಿದ್ದಾರೆ ಜಯರಾಂ.
‘ಸಿನಿಮಾ ಶೂಟಿಂಗ್ನ ಎಲ್ಲ ವಿಭಾಗಗಳಲ್ಲಿ ಅವರಷ್ಟು ತೊಡಗಿಕೊಳ್ಳುವ ನಿರ್ದೇಶಕರ ನಾನು ನೋಡಿಲ್ಲ. ನನ್ನ ಶೂಟಿಂಗ್ ಸಮಯದಲ್ಲಿ ಶಾಟ್ ಮುಗಿದರೂ ಸಹ ನಾನು ಅಲ್ಲಿಯೇ ಕೂರುತ್ತಿದ್ದೆ. ಅವರು ಏನು ಮಾಡುತ್ತಾರೋ ನೋಡುತ್ತಾ ಇರುತ್ತಿದ್ದೆ. ಅವರಿಂದ ಕಲಿಯುವುದು ಸಾಕಷ್ಟಿದೆ. ಯುವಕರು ಅವರನ್ನು ಆದರ್ಶವಾಗಿ ತೆಗೆದುಕೊಳ್ಳಬೇಕು’ ಎಂದು ಜಯರಾಂ ಅವರು ಹೇಳಿದ್ದಾರೆ.
ಜಯರಾಂ ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾದ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ರುಕ್ಮಿಣಿ ವಸಂತ್ ಅವರ ತಂದೆಯ ಪಾತ್ರ ಅವರದ್ದು. ಅದಕ್ಕೂ ಮುನ್ನ ಶಿವರಾಜ್ ಕುಮಾರ್ ನಟನೆಯ ಸೂಪರ್ ಹಿಟ್ ಸಿನಿಮಾ ‘ಘೋಸ್ಟ್’ನಲ್ಲಿ ಅವರು ನಟಿಸಿದ್ದಾರೆ. ಮಲಯಾಳಂ ಮೂಲದ ನಟ ಜಯರಾಂ ದಕ್ಷಿಣದ ಎಲ್ಲ ಭಾಷೆಗಳಲ್ಲೂ ನಟಿಸಿದ್ದಾರೆ ಜೊತೆಗೆ ಒಳ್ಳೆಯ ಹಾಡುಗಾರರೂ ಆಗಿರುವ ಜಯರಾಂ, ಹಿಂದೊಮ್ಮೆ ಅಪ್ಪು ಅವರ ಹಾಡು ಹಾಡಿ ಅದು ಸಖತ್ ವೈರಲ್ ಆಗಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
