‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ರಿಯಾಲಿಟಿ ಶೋ ಖ್ಯಾತಿಯ ಕಿರುತೆರೆ ನಟ ಧ್ರುವಂತ್ ಅಲಿಯಾಸ್ ಚರಿತ್ ಬಾಳಪ್ಪ ಅವರು ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದಾರೆ. ತಮ್ಮ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟಿದಾಗಿ ಟ್ರೋಲ್ ಮಾಡಿದವರ ವಿರುದ್ಧ ಅವರು ದೂರು ನೀಡಿದ್ದಾರೆ. ಇತ್ತೀಚೆಗೆ ಧ್ರುವಂತ್ (Dhruvanth) ಅವರು ನೀಡಿದ ಒಂದು ಸಂದರ್ಶನದ ತುಣುಕುಗಳನ್ನು ಇಟ್ಟುಕೊಂಡು ಅಶ್ಲೀಲವಾಗಿ ಟ್ರೋಲ್ ಮಾಡಲಾಗುತ್ತಿದೆ. ಅದರಿಂದ ಅಸಮಾಧಾನಗೊಂಡಿರುವ ಅವರು ಕೆಲವು ಟ್ರೋಲ್ (Troll) ಪೇಜ್ಗಳ ವಿರುದ್ಧ ದೂರು ನೀಡಿದ್ದು, ದೂರಿನ ಪ್ರತಿ ಲಭ್ಯವಾಗಿದೆ.
‘ನಾನು ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ನಟನಾಗಿದ್ದು, ಬಿಗ್ ಬಾಸ್ ಕನ್ನಡ ಸೀಸನ್ 12 ರಿಯಾಲಿಟಿ ಶೋನ ಫೈನಲಿಸ್ಟ್ ಆಗಿ ಸಾರ್ವಜನಿಕ ವ್ಯಕ್ತಿಯಾಗಿ ಸಮಾಜದಲ್ಲಿ ಗೌರವ ಮತ್ತು ವಿಶ್ವಾಸವನ್ನು ಸಂಪಾದಿಸಿದ್ದೇನೆ. ಸಾಮಾಜಿಕ ಜಾಲತಾಣಗಳಾದ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಮೂಲಕ ಉದ್ದೇಶಪೂರ್ವಕವಾಗಿ ನನ್ನ ವಿರುದ್ಧ ನಿರಂತರವಾಗಿ ಅವಾಚ್ಯ, ಅಶ್ಲೀಲ, ಮಾನಹಾನಿಕಾರಕ ಹಾಗೂ ಬೆದರಿಕೆ ಹಾಕುವ ರೀತಿಯ ಪೋಸ್ಟ್ಗಳು, ಕಾಮೆಂಟ್ಗಳು ಮತ್ತು ಸಂದೇಶಗಳನ್ನು ಪ್ರಕಟಿಸುತ್ತಿದ್ದಾರೆ’ ಎಂದು ಧ್ರುವಂತ್ ಅವರು ದೂರಿನಲ್ಲಿ ತಿಳಿಸಿದ್ದಾರೆ.
‘ಗಂಭೀರ ಪರಿಣಾಮ ಬೀರಿದೆ’
‘ಈ ಕೃತ್ಯಗಳು ನನ್ನ ಮಾನಸಿಕ ನೆಮ್ಮದಿಗೆ ಧಕ್ಕೆ ಉಂಟುಮಾಡುವುದಲ್ಲದೇ ನನ್ನ ವೃತ್ತಿಜೀವನ, ಸಾರ್ವಜನಿಕ ಚಿತ್ರಣ, ಖ್ಯಾತಿ ಹಾಗೂ ಭವಿಷ್ಯದ ಉದ್ಯೋಗಾವಕಾಶಗಳ ಮೇಲೂ ಗಂಭೀರ ಪರಿಣಾಮ ಬೀರಿದೆ. ನಿರ್ಮಾಪಕರು, ನಿರ್ದೇಶಕರು, ಬ್ರಾಂಡ್ಗಳು ಮತ್ತು ಇತರ ವೃತ್ತಿಪರರು ನನ್ನ ಬಗ್ಗೆ ತಪ್ಪು ಅಭಿಪ್ರಾಯ ಬೆಳೆಸುವಂತಹ ಪರಿಸ್ಥಿತಿಯನ್ನು ಸೃಷ್ಟಿಸಿವೆ’ ಎಂದು ಧ್ರುವಂತ್ ದೂರು ನೀಡಿದ್ದಾರೆ.
‘ವೃತ್ತಿಪರ ಬದುಕಿಗೆ ಧಕ್ಕೆ ಉಂಟುಮಾಡಿದೆ’
‘ನನ್ನ ಗೌರವವನ್ನು ಉದ್ದೇಶಪೂರ್ವಕವಾಗಿ ಹಾಳುಮಾಡಲು ಹಾಗೂ ಸಾರ್ವಜನಿಕರಲ್ಲಿ ನನ್ನ ಬಗ್ಗೆ ದ್ವೇಷ ಹಾಗೂ ಅವಿಶ್ವಾಸ ಮೂಡಿಸುವ ಈ ಕೃತ್ಯಗಳು ಕಾಣಿಸುತ್ತವೆ. ಅವರು ನಿರಂತರವಾಗಿ ಅವಾಚ್ಯ ಪದಗಳಿಂದ ನಿಂದನೆ ಮಾಡುವುದು, ಸುಳ್ಳು ಮತ್ತು ಮಾನಹಾನಿಕಾರಕ ಆರೋಪಗಳನ್ನು ಹರಡುವುದು, ಬೆದರಿಕೆ ಹಾಕುವುದು, ನನ್ನ ಸಾಮಾಜಿಕ ಹಾಗೂ ವೃತ್ತಿಪರ ಬದುಕಿಗೆ ಧಕ್ಕೆ ಉಂಟುಮಾಡುವುದು ಹಾಗೂ ಸಾರ್ವಜನಿಕವಾಗಿ ಅವಮಾನಿಸುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ’ ಎಂದಿದ್ದಾರೆ ಧ್ರುವಂತ್.
ಇದನ್ನೂ ಓದಿ: ‘ನಾನು ಕಪ್ ಗೆಲ್ಲದಿರಬಹುದು, ಶೋ ಗೆದ್ದಿದ್ದೇನೆ’; ಸೀಸನ್ ಚಪ್ಪಾಳೆ ಬದಲಿಸಿದ ಬಗ್ಗೆ ಧ್ರುವಂತ್ ಮಾತು
‘ಸೂಕ್ತ ಕ್ರಮ ಜರುಗಿಸಿ’
‘ಈ ಕೃತ್ಯಗಳಿಂದ ನನಗೆ ತೀವ್ರ ಮಾನಸಿಕ ಯಾತನೆ, ಸಾಮಾಜಿಕ ಅವಮಾನ ಉಂಟಾಗಿದೆ. ಆದ್ದರಿಂದ ಈ ರೀತಿ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ನನ್ನ ತಂಟೆಗೆ ಬಾರದಂತೆ ಬಂದೋಬಸ್ತ್ ಮಾಡಿಕೊಡಬೇಕು’ ಎಂದು ಧ್ರುವಂತ್ ಅವರು ದೂರು ನೀಡಿದ್ದಾರೆ. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಹಾಗೂ ಬಸವೇಶ್ವರ ನಗರ ಸೈಬರ್ ಸೆಲ್ನಲ್ಲಿ ಧ್ರುವಂತ್ ಅವರು ದೂರು ಸಲ್ಲಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
