ಸ್ಯಾಂಡಲ್‌ವುಡ್ ನಟಿಯರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸುವ ಮತ್ತು ಅವಹೇಳನಕಾರಿ ಕಮೆಂಟ್ ಮಾಡುವುದಕ್ಕೆ ಬ್ರೇಕ್ ಬಿದ್ದಿಲ್ಲ. ನಟಿ ರಮ್ಯಾ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮೀ ಈ ವಿಷಯವನ್ನು ಗಂಭೀರವಾಗಿ ಸ್ವೀಕರಿಸಿ ಕೇಸ್ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಅರೆಸ್ಟ್ ಕೂಡ ನಡೆಯಿತು. ಆದರೂ ಕೆಲವರು ಬುದ್ಧಿ ಕಲಿತಿಲ್ಲ. ಈಗ ಕನ್ನಡದ ಮತ್ತೋರ್ವ ನಟಿ ಐಶ್ವರ್ಯ ಸಿಂದೋಗಿ ಅವರು ಇಂತಹ ಕಿಡಿಗೇಡಿಗಳ ಕಾಟಕ್ಕೆ ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ನಟಿ ಐಶ್ವರ್ಯ ಸಿಂಧೋಗಿ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಅಪ್‌ಲೋಡ್ ಮಾಡಿರುವ ಪೋಸ್ಟ್‌ಗಳಿಗೆ ಸತತವಾಗಿ ಅವಹೇಳನಕಾರಿ ಹಾಗೂ ಆಕ್ಷೇಪಾರ್ಹ ಕಮೆಂಟ್‌ಗಳನ್ನು ಮಾಡಲಾಗುತ್ತಿದೆ ಎಂದು ದೂರು ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ತಮಗೆ ಪರಿಚಯವಿರುವ ವ್ಯಕ್ತಿಯೊಬ್ಬರ ಹೆಸರನ್ನು ಉಲ್ಲೇಖಿಸಿ ದೂರು ದಾಖಲಿಸಿದ್ದಾರೆ.
ಈ ಹಿಂದೆ ಕೂಡ ಇದೇ ವ್ಯಕ್ತಿ ಐಶ್ವರ್ಯಾಗೆ ಬೆದರಿಕೆ ಹಾಕಿದ್ದರು. ಆ ವೇಳೆ ಕೇಸ್ ದಾಖಲಾಗಿತ್ತು. ಈಗ ಅದೇ ವ್ಯಕ್ತಿ ನಕಲಿ ಖಾತೆಗಳನ್ನು ಸೃಷ್ಟಿಸಿ, ಅವುಗಳ ಮೂಲಕ ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ.
ತಮಗೆ ತೊಂದರೆ ನೀಡುತ್ತಿರುವ ಆ ನಕಲಿ ಖಾತೆಗಳ ಬಗ್ಗೆ ಸಂಪೂರ್ಣ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಐಶ್ವರ್ಯಾ ಮನವಿ ಮಾಡಿದ್ದಾರೆ. ನಟಿಯ ದೂರಿನ ಹಿನ್ನೆಲೆಯಲ್ಲಿ ಬೆಂಗಳೂರಿನ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಸದ್ಯ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಹಿಂದಿನ ಪ್ರಕರಣಗಳ ಹಿನ್ನೆಲೆ:
ಸಾಮಾಜಿಕ ಜಾಲತಾಣಗಳಲ್ಲಿ ನಟಿಯರಿಗೆ ಈ ರೀತಿಯ ಕಿರುಕುಳ ನೀಡುತ್ತಿರುವುದು ಇದೇ ಮೊದಲೇನಲ್ಲ. ಇತ್ತೀಚೆಗಷ್ಟೇ ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ರಮ್ಯಾ ಹಾಗೂ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರಿಗೂ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟ ಕಮೆಂಟ್‌ಗಳ ಮೂಲಕ ನಿಂದಿಸಲಾಗಿತ್ತು.
ಇದನ್ನೂ ಓದಿ: ‘ನಡೆದುಕೊಳ್ಳುವ ರೀತಿ ಚೆನ್ನಾಗಿರಲಿ’ ವಿಜಯಲಕ್ಷ್ಮಿ ದರ್ಶನ್ ಟಾಂಗ್ ಕೊಟ್ಟಿದ್ದು ಯಾರಿಗೆ?
ಆನ್‌ಲೈನ್‌ನಲ್ಲಿ ಅವಹೇಳನಕಾರಿ ಕಮೆಂಟ್‌ಗಳನ್ನು ಹಾಕಿ ಮಾನಸಿಕ ಕಿರುಕುಳ ನೀಡಿದ್ದಕ್ಕಾಗಿ ಇವರಿಬ್ಬರೂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಸೈಬರ್ ಕ್ರೈಮ್ ಪೊಲೀಸರು ತನಿಖೆ ನಡೆಸಿ, ನಟಿಯರಿಗೆ ಕೆಟ್ಟ ಕಮೆಂಟ್ ಮಾಡಿದ್ದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಅರೆಸ್ಟ್ ಮಾಡಿದ್ದರು. ನಟಿಯರ ತೇಜೋವಧೆ ಮಾಡುವವರ ವಿರುದ್ಧ ಕಾನೂನು ಕಠಿಣ ಕ್ರಮ ಜರುಗಿಸುತ್ತಿದ್ದರೂ, ಕಿಡಿಗೇಡಿಗಳ ಇಂತಹ ವಿಕೃತ ನಡೆ ಮಾತ್ರ ನಿಲ್ಲುತ್ತಿಲ್ಲ ಎಂಬುದಕ್ಕೆ ಐಶ್ವರ್ಯ ಸಿಂದೋಗಿ ಅವರ ಪ್ರಕರಣವೇ ಸಾಕ್ಷಿಯಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
