ಅಸಭ್ಯ ಸಾಹಿತ್ಯಕ್ಕೆ ವಿರೋಧ: ಕ್ಷಮೆ ಕೇಳಿ ರಾತ್ರೋರಾತ್ರಿ ಸಾಂಗ್ ಡಿಲೀಟ್ ಮಾಡಿದ ಬಾದ್​ಶಾ

ಅಸಭ್ಯ ಸಾಹಿತ್ಯಕ್ಕೆ ವಿರೋಧ: ಕ್ಷಮೆ ಕೇಳಿ ರಾತ್ರೋರಾತ್ರಿ ಸಾಂಗ್ ಡಿಲೀಟ್ ಮಾಡಿದ ಬಾದ್​ಶಾ

ಬಾಲಿವುಡ್‌ನ ಖ್ಯಾತ ರ‍್ಯಾಪರ್ ಮತ್ತು ಗಾಯಕ ಆದಿತ್ಯ ಪ್ರತೀಕ್ ಸಿಂಗ್ ಸಿಸೋಡಿಯಾ ಅಲಿಯಾಸ್ ಬಾದ್‌ಶಾ (Badshah) ಅವರ ಹೊಸ ಹಾಡು ‘ಟಟೀರಿ’ (Tateeree) ಈಗ ದೊಡ್ಡ ವಿವಾದಕ್ಕೆ ನಾಂದಿ ಹಾಡಿದೆ. ಈ ಹಾಡಿನ ದೃಶ್ಯಾವಳಿಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಹರಿಯಾಣ ಪೊಲೀಸರು ಗಾಯಕನ ವಿರುದ್ಧ ಎಫ್‌ಐಆರ್ (FIR) ದಾಖಲಿಸಿದ್ದಾರೆ. ಅಷ್ಟೇ ಅಲ್ಲದೆ, ಅವರ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿಗೊಳಿಸುವ ಪ್ರಕ್ರಿಯೆಯನ್ನೂ ಪೊಲೀಸರು ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಾದ್​ಶಾ ಅವರು ಕ್ಷಮೆ ಕೇಳಿದ್ದಾರೆ.

‘ಟಟೀರಿ’ ಹಾಡಿನಲ್ಲಿ ಶಾಲಾ ಸಮವಸ್ತ್ರ ಧರಿಸಿದ ಹರಿಯಾಣದ ಹೆಣ್ಣುಮಕ್ಕಳು ಆಕ್ಷೇಪಾರ್ಹವಾಗಿ ನರ್ತಿಸಿದ್ದಾರೆ ಮತ್ತು ಅಸಭ್ಯ ಸನ್ನೆಗಳನ್ನು ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದು ಹರಿಯಾಣದ ಸಂಸ್ಕೃತಿ ಮತ್ತು ವಿದ್ಯಾರ್ಥಿನಿಯರ ಘನತೆಗೆ ಧಕ್ಕೆ ತಂದಿದೆ ಎಂದು ಅನೇಕರು ದೂರಿದ್ದಾರೆ. ಈ ಹಾಡಿನ ಸಾಹಿತ್ಯ ಅಸಭ್ಯವಾಗಿದೆ ಎಂದು ಅನೇಕರು ದೂರು ನೀಡಿದ್ದರು.

ವಿವಾದ ಅತಿರೇಕಕ್ಕೆ ಹೋಗುತ್ತಿದ್ದಂತೆಯೇ ಎಚ್ಚೆತ್ತ ಬಾದ್‌ಶಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಕ್ಷಮೆಯಾಚಿಸಿದ್ದಾರೆ. ‘ನಾನು ಹರಿಯಾಣದವನು, ಹರಿಯಾಣವೇ ನನ್ನ ಗುರುತು. ಅಲ್ಲಿನ ಮಹಿಳೆಯರು ಅಥವಾ ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡುವ ಉದ್ದೇಶ ನನಗಿಲ್ಲ. ಹಿಪ್-ಹಾಪ್ ಶೈಲಿಯಲ್ಲಿ ಪೈಪೋಟಿಗಾಗಿ ಸಾಹಿತ್ಯ ಬರೆಯಲಾಗುತ್ತದೆಯೇ ಹೊರತು ಯಾರಿಗೂ ನೋವುಂಟು ಮಾಡುವ ಉದ್ದೇಶ ಇರುವುದಿಲ್ಲ. ಹರಿಯಾಣದ ಮಗನೆಂದು ಭಾವಿಸಿ ನನ್ನನ್ನು ಕ್ಷಮಿಸಿ’ ಎಂದು ಅವರು ಮನವಿ ಮಾಡಿದ್ದಾರೆ.

ತೀವ್ರ ವಿರೋಧ ಮತ್ತು ಕಾನೂನು ಕ್ರಮದ ಭೀತಿಯ ಹಿನ್ನೆಲೆಯಲ್ಲಿ ಬಾದ್‌ಶಾ ಅವರು ಈ ಹಾಡನ್ನು ಎಲ್ಲಾ ಕಡೆಯಿಂದ ತೆಗೆದುಹಾಕುವುದಾಗಿ ಘೋಷಿಸಿದ್ದಾರೆ. ಯೂಟ್ಯೂಬ್, ಸ್ಪಾಟಿಫೈ ಸೇರಿದಂತೆ ಎಲ್ಲಾ ಪ್ರಮುಖ ಮ್ಯೂಸಿಕ್ ಪ್ಲಾಟ್‌ಫಾರ್ಮ್‌ಗಳಿಂದ ‘ಟಟೀರಿ’ ಹಾಡನ್ನು ಡಿಲೀಟ್ ಮಾಡಲಾಗುತ್ತಿದೆ. ಸಾರ್ವಜನಿಕರ ಭಾವನೆಗಳಿಗೆ ಗೌರವ ನೀಡಿ, ವಿವಾದಕ್ಕೆ ಪೂರ್ಣವಿರಾಮ ಇಡಲು ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ, ರ್ಯಾಪರ್ ಬಾದ್​ಶಾ ವಿರುದ್ಧ ಪ್ರಕರಣ

ಇತ್ತೀಚೆಗಷ್ಟೇ ರಿಲೀಸ್ ಆಗಿದ್ದ ‘ಟಟೀರಿ’ ಹಾಡಿನಲ್ಲಿರುವ ಕೆಲವು ಪದಗಳು ಅಸಭ್ಯತೆಯಿಂದ ಕೂಡಿವೆ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಕೆಡಿಸುವಂತಿವೆ ಎಂದು ಸಾರ್ವಜನಿಕರು ದೂರು ನೀಡಿದ್ದರು. ಈ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಆಯೋಗವು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತ್ತು. ಮಹಿಳೆಯರು ಮತ್ತು ಅಪ್ರಾಪ್ತರ ಮೇಲೆ ಈ ಹಾಡು ಕೆಟ್ಟ ಪರಿಣಾಮ ಬೀರುತ್ತದೆ ಎಂದು ಆಯೋಗ ಆತಂಕ ವ್ಯಕ್ತಪಡಿಸಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *