ಆಂತ್ರೋಪಿಕ್​ನ ಬಲಿಷ್ಠ ಎಐ ಮಾಡಲ್​ಗಳು ಅಮೆರಿಕನ್ನೇತರರಿಗೆ ಅಲಭ್ಯ; ಭಾರತಕ್ಕೆ ಇದು ಎಚ್ಚರಿಕೆಯ ಕರೆಗಂಟೆಯಾ? – Kannada News | Sovereign AI for India: Sridhar Vembu on US Anthropic Restrictions & Tech Nationalism Warning

ನವದೆಹಲಿ, ಜೂನ್ 14: ಅಮೆರಿಕದ ಪ್ರಮುಖ AI ಸಂಸ್ಥೆಯಾದ ‘ಆಂತ್ರೊಪಿಕ್’, ಭದ್ರತಾ ಕಾರಣಗಳನ್ನು ನೀಡಿ ತನ್ನ ಅತ್ಯಾಧುನಿಕ ‘ಫೇಬಲ್ 5’ (Fable 5) ಮತ್ತು ‘ಮೈಥೋಸ್ 5’ (Mythos 5) ಮಾಡೆಲ್‌ಗಳನ್ನು ಅಮೆರಿಕದ ಹೊರಗಿನವರು ಹಾಗೂ ಅಮೆರಿಕದಲ್ಲಿರುವ ವಿದೇಶಿ ಪ್ರಜೆಗಳು ಬಳಸದಂತೆ ನಿರ್ಬಂಧ ಹೇರಿದೆ. ಅಮೆರಿಕ ಸರ್ಕಾರದ ಆದೇಶದ ಮೇರೆಗೆ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಆಂತ್ರೊಪಿಕ್ ಹೇಳಿಕೊಂಡಿದೆ. ಈ ಬೆಳವಣಿಗೆ ಬಗ್ಗೆ ಕೆಲ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ತಂತ್ರಜ್ಞಾನ ವಿಚಾರದಲ್ಲಿ ಜಾಗತೀಕರಣ ಸತ್ತಿದೆ ಎಂಬರ್ಥದಲ್ಲಿ ಭಾರತೀಯ ಉದ್ಯಮಿ ಶ್ರೀಧರ್ ವೆಂಬು (Sridhar Vembu) ಪ್ರತಿಕ್ರಿಯಿಸಿದ್ದಾರೆ. ಆಂತ್ರೊಪಿಕ್ ಕ್ರಮವು ಭಾರತದಂತಹ ದೇಶಗಳಿಗೆ ಒಂದು ದೊಡ್ಡ ಎಚ್ಚರಿಕೆ ಗಂಟೆಯಾಗಿದೆ ಎಂದಿದ್ದಾರೆ.

ಅಮೆರಿಕದ ವಾಣಿಜ್ಯ ಇಲಾಖೆಯ ಆದೇಶದ ಮೇರೆಗೆ, ಆಂತ್ರೊಪಿಕ್ ಕಂಪನಿಯು ತನ್ನ ಅತ್ಯಂತ ಶಕ್ತಿಶಾಲಿ AI ಮಾದರಿಗಳನ್ನು ವಿದೇಶಿಯರಿಗೆ ನಿಷೇಧಿಸಿದೆ. ಸಾರ್ವಜನಿಕರಿಗೆ ಲಭ್ಯವಾಗಿದ್ದ ಕ್ಲಾಡ್ ಫೇಬಲ್ 5 ಮತ್ತು ವಿಶೇಷ ಮಂದಿಗೆ ಸೀಮಿತವಾಗಿದ್ದ ಕ್ಲಾಡ್ ಮೈಥೋಸ್ 5 ಎಐ ಮಾಡಲ್​ಗಳೆರಡನ್ನೂ ಈಗ ನಿರ್ಬಂಧಿಸಲಾಗಿದೆ. ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಂಪನಿ ಹೇಳಿದೆ. ಅಮೆರಿಕದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳು (ಆಂತ್ರೊಪಿಕ್‌ನಲ್ಲಿ ಕೆಲಸ ಮಾಡುವವರು ಸೇರಿದಂತೆ) ಕೂಡ ಈ ತಂತ್ರಜ್ಞಾನವನ್ನು ಬಳಸುವಂತಿಲ್ಲ.

ಶ್ರೀಧರ್ ವೇಂಬು ಅವರ ಎಚ್ಚರಿಕೆ

ಈ ಬೆಳವಣಿಗೆಯ ನಂತರ ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಪೋಸ್ಟ್ ಮಾಡಿರುವ ಶ್ರೀಧರ್ ವೇಂಬು, ಕೆಲ ಪ್ರಮುಖ ಅಂಶಗಳನ್ನು ಒತ್ತಿ ಹೇಳಿದ್ದಾರೆ. “ಇಂದಿನ ಜಗತ್ತಿನಲ್ಲಿ ತಂತ್ರಜ್ಞಾನವು ಅತಿ ದೊಡ್ಡ ಶಕ್ತಿಯಾಗಿದೆ. ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತ್ವವು ಈಗ ತಂತ್ರಜ್ಞಾನದ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ. ಜಾಗತೀಕರಣ ಸತ್ತಿದೆ, ಭಾರತವು ತನ್ನದೇ ಆದ ಸ್ವತಂತ್ರ ಹಾದಿಯನ್ನು ಕಂಡುಕೊಳ್ಳಬೇಕು,” ಎಂದು ಅವರು ಕರೆ ನೀಡಿದ್ದಾರೆ.

ಭಾರತವು ವಿದೇಶಿ ತಂತ್ರಜ್ಞಾನಗಳ ಮೇಲೆ ಅವಲಂಬಿತವಾಗುವ ಬದಲು, ಸ್ವಂತದ AI ಸಾಮರ್ಥ್ಯವನ್ನು (Sovereign AI) ಬೆಳೆಸಿಕೊಳ್ಳುವುದು ತುರ್ತು ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ವಿಶ್ವದಲ್ಲೇ ಅತಿದೊಡ್ಡ ರಸ್ತೆ ಜಾಲ ಹೊಂದಿದ ದೇಶವೆಂಬ ದಾಖಲೆ ಭಾರತಕ್ಕೆ

ಭಾರತಕ್ಕೆ ಪರಿಹಾರವೇನು?

ಭಾರತವು ದೊಡ್ಡ ಪ್ರಮಾಣದ ಬಂಡವಾಳ ಬೇಕಾಗುವ ಮತ್ತು ಜಿಪಿಯು (GPU) ಕೊರತೆ ಎದುರಿಸುತ್ತಿರುವ ಬೃಹತ್ AI ಮಾಡೆಲ್‌ಗಳ ಹಿಂದೆಯೇ ಬಿದ್ದಿರಬಾರದು ಎಂದು ವೇಂಬು ಸಲಹೆ ನೀಡಿದ್ದಾರೆ. ಬದಲಾಗಿ ಭಾರತೀಯ ಸಂಸ್ಥೆಗಳು ಸಣ್ಣ ಗಾತ್ರದ, ದಕ್ಷತೆಯುಳ್ಳ ‘ಓಪನ್ ಸೋರ್ಸ್’ (Open Source) ಮಾದರಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಭಾರತ ಮತ್ತು ಚೀನಾದಲ್ಲಿ ಲಭ್ಯವಿರುವ ಓಪನ್ ಸೋರ್ಸ್ ಮಾದರಿಗಳನ್ನು ಬಳಸಿಕೊಂಡು ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಹೆಚ್ಚಿಸಬೇಕು. ನಮಗೆ ಮಾರಾಟ ಮಾಡಲು ಇಷ್ಟಪಡದವರಿಗೆ ಏಕೆ ಹಣ ನೀಡಬೇಕು? ಎಂದು ಪ್ರಶ್ನಿಸಿರುವ ಅವರು, ಸ್ವದೇಶಿ ತಂತ್ರಜ್ಞಾನ ಅಭಿವೃದ್ಧಿಗೆ ಒತ್ತು ನೀಡುವಂತೆ ಸರ್ಕಾರಕ್ಕೆ ಪರೋಕ್ಷವಾಗಿ ಸೂಚಿಸಿದ್ದಾರೆ.

ಏನಿವು ಕ್ಲಾಡ್ ಫೇಬಲ್, ಮೈಥೋಸ್ ಎಐ ಮಾಡಲ್​ಗಳು?

ಕ್ಲಾಡ್​ನ ಜನರಲ್ ಎಐ ಮಾಡಲ್​ಗಳಲ್ಲಿ ಮೈಥೋಸ್ ಕ್ಲಾಸ್ ಮಾಡಲ್​ಗಳು ಪ್ರಮುಖವಾದುವು. ಸಾಫ್ಟ್​ವೇರ್ ಎಂಜಿನಿಯರಿಂಗ್, ವೈಜ್ಞಾನಿಕ ಸಂಶೋಧನೆ, ಸಂಕೀರ್ಣ ಸಮಸ್ಯೆ ಪರಿಹರಿಸುವುದು, ಜ್ಞಾನದ ಅಗತ್ಯ ಇರುವ ವರ್ಕ್​ಫ್ಲೋ ಇತ್ಯಾದಿ ಕಠಿಣ ಕಾರ್ಯಗಳಿಗೆ ಮೈಥೋಸ್ ಮಾಡಲ್​ಗಳು ಸೂಕ್ತವಾಗಿವೆ. ಆಂತ್ರೋಪಿಕ್​ನ ಕ್ಲಾಡ್ ಎಐ ಮಾಡಲ್​ಗಳಲ್ಲೇ ಅತ್ಯಂತ ಸಾಮರ್ಥ್ಯ ಇರುವ ಮಾಡಲ್​ಗಳು ಇವು. ಸಾಫ್ಟ್​ವೇರ್ ಡೆವಲಪರ್ಸ್, ಸಂಶೋಧಕರು ಮೊದಲಾದ ನುರಿತರಿಗೆ ಇವು ಸಹಾಯವಾಗುತ್ತವೆ.

ಇದನ್ನೂ ಓದಿ: ಎಚ್​ಎಎಲ್​ಗೆಯೇ ಚಳ್ಳೆಹಣ್ಣು ತಿನಿಸಲು ಯತ್ನಿಸಿದ ಹೈದರಾಬಾದ್ ಕಂಪನಿ; ತೇಜಸ್ ಯುದ್ಧವಿಮಾನದ ಬಿಡಿಭಾಗ ಪೂರೈಕೆಯಲ್ಲಿ ವಂಚನೆ; ದೂರು ದಾಖಲು

ಮೈಥೋಸ್ ದರ್ಜೆಯ ಎಐ ಮಾಡಲ್​ಗಳ ಪೈಕಿ ಫೇಬಲ್ 5 ಮಾತ್ರವೇ ಸಾರ್ವಜನಿಕರಿಗೆ ಲಭ್ಯವಾಗಿಸಿರುವುದು. ಇದು ಅತ್ಯಂತ ಶಕ್ತಿಶಾಲಿ ಮೈಥೋಸ್ ಕ್ಲಾಸ್ ಮಾಡಲ್. ಆದರೆ, ಕೆಲ ಸುರಕ್ಷತಾ ಫೀಚರ್​ಗಳಿವೆ. ಆದರೆ, ಮೈಥೋಸ್ 5 ಮಾಡಲ್​ನಲ್ಲಿ ಈ ನಿರ್ಬಂಧಗಳಿಲ್ಲ. ಆಯ್ದ ಗ್ರಾಹಕರಿಗೆ ಮಾತ್ರವೇ ಇದನ್ನು ನೀಡಲಾಗುತ್ತದೆ. ಈಗ ಅಮೆರಿಕ ಸರ್ಕಾರವು ಈ ಮೈಥೋಸ್ ಮಾಡಲ್​ಗಳನ್ನು ಹೊರ ದೇಶದವರು ದುರ್ಬಳಕೆ ಮಾಡಿಕೊಳ್ಳಬಹುದು ಎನ್ನುವ ಕಾರಣವೊಡ್ಡಿ ನಿರ್ಬಂಧ ಹಾಕಿದೆ.

ತಂತ್ರಜ್ಞಾನದ ಮೇಲಿನ ಹಿಡಿತ

ಈ ನಿರ್ಬಂಧಗಳು ಕೇವಲ ಸಾಫ್ಟ್‌ವೇರ್‌ಗೆ ಸೀಮಿತವಾಗಿಲ್ಲ; AI ತರಬೇತಿಗೆ ಅಗತ್ಯವಾದ ಉನ್ನತ ಮಟ್ಟದ ಜಿಪಿಯು (GPUs) ಚಿಪ್‌ಗಳ ರಫ್ತಿನ ಮೇಲೂ ಅಮೆರಿಕ ನಿಯಂತ್ರಣ ಹೊಂದಿದೆ. ಈ ಹಿನ್ನೆಲೆಯಲ್ಲಿ, ತಂತ್ರಜ್ಞಾನದ ವಿಷಯದಲ್ಲಿ ಸ್ವಾವಲಂಬನೆಯೇ ಮುಂದಿನ ದಿನಗಳಲ್ಲಿ ದೇಶದ ಭದ್ರತೆಗೆ ಕೀಲಿಕೈ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *