ತುಮಕೂರು, ಜುಲೈ 17: ಅತ್ತ ಆಂಧ್ರದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿನಿಂದ (Coronavirus) ಸಾವನ್ನಪ್ಪಿರುವವರ ಸಂಖ್ಯೆ ಹೆಚ್ಚುತ್ತಿದೆ. ಇತ್ತ ರಾಜ್ಯದ ಗಡಿಭಾಗದಲ್ಲೂ ಕೊರೋನಾ ಭೀತಿ ಸೃಷ್ಟಿಯಾಗಿದೆ. ಈ ಬೆನ್ನಲ್ಲೇ ಕೊವಿಡ್ ವೈರಸ್ ರಾಜ್ಯಕ್ಕೆ ಹರಡದಂತೆ ಕ್ರಮವಹಿಸುವ ನಿಟ್ಟಿನಲ್ಲಿ ಗಡಿಯಲ್ಲಿ ನಿಗಾ ವಹಿಸಲಾಗಿದೆ. ಪಾವಗಡ ಮತ್ತು ಆಂಧ್ರದ 8 ಗಡಿ ಮಾರ್ಗಗಳಲ್ಲಿ ತಪಾಸಣೆ ಮಾಡಲಾಗುತ್ತಿದೆ. ಅಗತ್ಯ ಚಿಕಿತ್ಸಾ ಕೇಂದ್ರಗಳನ್ನ ಈಗಾಗಲೇ ತೆರೆಯಲಾಗಿದೆ.
ಕರ್ನಾಟಕದ ಗಡಿ ಭಾಗಿವಾದ ಪಾವಗಡದಲ್ಲಿ ಮತ್ತಷ್ಟು ಆತಂಕ
ದಿನದಿಂದ ದಿನಕ್ಕೆ ಆಂಧ್ರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದೆ. ಇದರ ಜೊತೆಗೆ ಸಾವಿನ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಆಂಧ್ರ ಪ್ರದೇಶದ ಇಲಾಖೆಯ ಮಾಹಿತಿ ಪ್ರಕಾರ ಇಂದು ನಾಲ್ವರು ಕೊರೋನಾಗೆ ಮೃತಪಟ್ಟಿದ್ದಾರೆ. ಕಡಬದಲ್ಲೇ ಮೂವರು ಮೃತಪಟ್ಟಿದ್ದಾರೆ. ಹೀಗಾಗಿ ಕರ್ನಾಟಕದ ಗಡಿ ಭಾಗಿವಾದ ಪಾವಗಡದಲ್ಲಿ ಮತ್ತಷ್ಟು ಆತಂಕ ಸೃಷ್ಟಿಯಾಗಿದೆ.
ಪಾವಗಡ-ಆಂಧ್ರದ 8 ಗಡಿ ಮಾರ್ಗಗಳಲ್ಲಿ ತಪಾಸಣೆ
ಎರಡು ದಿನಗಳಿಂದ ಪಾವಗಡ ಗಡಿಭಾಗದಲ್ಲಿ ಹೈ ಅಲರ್ಟ್ ಆಗಿದ್ದು, ಪಾವಗಡ-ಆಂಧ್ರದ 8 ಗಡಿ ಮಾರ್ಗಗಳಲ್ಲಿ ತಪಾಸಣೆ ಮಾಡಲಾಗುತ್ತಿದೆ. ನಾಗಲಮಡಿಕೆ, ಕೊಡಮಡುಗು, ವಳ್ಳೂರಿ ಸೇರಿದಂತೆ 8 ಕಡೆ ಚೆಕ್ಪೊಸ್ಟ್ ನಿರ್ಮಿಸಿ ಥರ್ಮಲ್ ಸ್ಕ್ಯಾನಿಂಗ್ ಮೂಲಕ ಪ್ರಯಾಣಿಕರ ತಪಾಸಣೆ ಜೊತೆಗೆ ಪ್ರಯಾಣದ ವಿವರ ಸಂಗ್ರಹಿಸಲಾಗುತ್ತಿದೆ.
ಇದನ್ನೂ ಓದಿ: ಪಾವಗಡ – ಆಂಧ್ರ ಪ್ರದೇಶ ಗಡಿಯಲ್ಲಿ ಕೋವಿಡ್ ಚೆಕ್‌ಪೋಸ್ಟ್: ತಪಾಸಣೆ ಶುರು
ಇನ್ನು ಆಂಧ್ರ-ಪಾವಗಡಕ್ಕೆ ಬರುವ ರಸ್ತೆ ಮಾರ್ಗದಲ್ಲಿ ಆರೋಗ್ಯ ಕೇಂದ್ರ ಸಿಬ್ಬಂದಿ ಸಹಿತ ಆಶಾ ಕಾರ್ಯಕರ್ತಯರನ್ನ ನಿಯೋಜಿಸಲಾಗಿದೆ. ಯಾವುದೇ ಹಂತದಲ್ಲೂ ರಾಜ್ಯಕ್ಕೆ ಕೊರೋನಾ ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಅಧಿಕಾರಿಗಳು ಇನ್ನು 11 ದಿನಗಳ ಕಾಲ ಪ್ರಯಾಣಿಕರ ತಪಾಸಣೆ ಹಾಗೂ ಮಾಹಿತಿ ಸಂಗ್ರಹ ಮುಂದುವರಿಸಲಿದ್ದಾರೆ.
ಕಳೆದ ಎರಡು ದಿನಗಳಿಂದ ಗಡಿಯಲ್ಲಿ ನಿರಂತರ ಪರಿಶೀಲನೆ ನಡೆಯುತಿದ್ದು, ಈವರೆಗೂ ಯಾವುದೇ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ. ಮುಂಜಾಗ್ರತಾ ಕ್ರಮವಾಗಿ ಪಾವಗಡ ತಾಲೂಕಾಸ್ಪತ್ರೆಯಲ್ಲಿ ಜಿಲ್ಲಾಡಳಿತ ಕೊವಿಡ್ ಕೇರ್ ಸೆಂಟರ್ ಸಹ ತೆರೆಯಲಾಗಿದೆ. ಅಗತ್ಯ ಹಾಗೂ ತುರ್ತು ಸಂದರ್ಭಕ್ಕೆ ಬೆಡ್ ಹಾಗೂ ಆಕ್ಸಿಜನ್ ವ್ಯವಸ್ಥೆ ಸಹ ಮಾಡಿಕೊಂಡಿದ್ದು, ಸಾರ್ವಜನಿಕರಿಗೆ ಎಚ್ಚರಿಕೆ ವಹಿಸಲು ಸೂಚಿಸಿದ್ದಾರೆ.
ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಿಷ್ಟು
ಆಂಧ್ರದಲ್ಲಿ ಕೊವಿಡ್ ಸೋಂಕಿನಿಂದ ನಾಲ್ವರು ಸಾವು ವಿಚಾರವಾಗಿ ತುಮಕೂರಿನಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿದ್ದು, ‘‘ನೆರೆಯ ಅನಂತಪುರದಲ್ಲೂ ಕೊವಿಡ್‌ಗೆ ಇಬ್ಬರು ಬಲಿಯಾಗಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಡೆಂಘೀ, ಚಿಕುನ್ ಗುನ್ಯಾ ವರದಿಯಾಗಿದೆ. ಅನಂತಪುರದಿಂದ ಜಿಲ್ಲೆಗೆ ಬರಬಾರದೆಂದು ಚೆಕ್‌ಪೋಸ್ಟ್ ಹಾಕಲಾಗಿದೆ. ಆ ರೀತಿ ಯಾರಾದರೂ ಬಂದರೆ ಐಸೋಲೇಟ್ ಮಾಡಲು ಸೂಚಿಸಿದ್ದೇನೆ. ಕಲುಷಿತ ನೀರು ಪೂರೈಸದಂತೆಯೂ ಸೂಚನೆ ನೀಡಲಾಗಿದೆ. ಹಲವು ವರ್ಷಗಳಾದರೂ ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಲ್ಲ. ಇದರಿಂದ ಬ್ಯಾಕ್ಟೀರಿಯಾ ಉತ್ಪತ್ತಿಯಾಗಿ ಸಮಸ್ಯೆಯಾಗುವ ಸಾಧ್ಯತೆಯಿದೆ. ಹಿಂದೆಲ್ಲಾ ಆ ರೀತಿ ಆಗಿದೆ, ನೀರಿನ ಟ್ಯಾಂಕ್ ಸ್ವಚ್ಛಗೊಳಿಸಲು ಸೂಚಿಸಿದ್ದೇನೆ’’ ಎಂದಿದ್ದಾರೆ.
ಇದನ್ನೂ ಓದಿ: Coronavirus Returns: ಕರ್ನಾಟಕಕ್ಕೆ ಮತ್ತೆ ಒಕ್ಕರಿಸಲಿದೆಯೇ ಕೋವಿಡ್ ಮಹಾಮಾರಿ?
ಒಟ್ಟಾರೆ ಆಂಧ್ರಪ್ರದೇಶದಲ್ಲಿ ಕೊರೋನಾ ಕೇಕೆ ಹಾಕಲು ಆರಂಭಿಸಿದೆ. ಇದರ ನಡುವೆ ರಾಜ್ಯಕ್ಕೆ ವೈರಸ್ ಎಂಟ್ರಿಯಾಗುವ ಭೀತಿ ಮೂಡಿದ್ದು, ಗಡಿಯಲ್ಲಿ ಅಗತ್ಯ ಕ್ರಮವಹಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
