ಆಗಸ್ಟ್‌ 1ರಂದು ಮೈಸೂರಿಗೆ ಪ್ರಧಾನಿ ಮೋದಿ ಭೇಟಿ: 45 ಕೋಟಿ ರೂ ವೆಚ್ಚದ ವಿವೇಕಾನಂದ ಸ್ಮಾರಕ ಲೋಕಾರ್ಪಣೆ – Kannada News | PM Narendra Modi to Inaugurate Rs 45 Crore Swami Vivekananda Memorial in Mysuru on August 1

ಮೈಸೂರು, ಜುಲೈ 28: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಆಗಸ್ಟ್‌ 1ರಂದು ಮೈಸೂರಿಗೆ (Mysuru) ಭೇಟಿ ನೀಡಲಿದ್ದು, 45 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸ್ವಾಮಿ ವಿವೇಕಾನಂದ ಸ್ಮಾರಕ ಹಾಗೂ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಮೈಸೂರಿನ ದೇವರಾಜ ಮೊಹಲ್ಲಾದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಈ ಸ್ಮಾರಕದಲ್ಲಿ ಸ್ವಾಮಿ ವಿವೇಕಾನಂದರು ತಂಗಿದ್ದ ಐತಿಹಾಸಿಕ ಹಿನ್ನೆಲೆಯಿದ್ದು, ಅದನ್ನು ಸಾಂಸ್ಕೃತಿಕ ಮತ್ತು ಯುವಜನ ಚಟುವಟಿಕೆಗಳ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸಿದ ಬಳಿಕ ಮೊದಲು ಸ್ವಾಮಿ ವಿವೇಕಾನಂದ ಸ್ಮಾರಕ ಹಾಗೂ ಸಾಂಸ್ಕೃತಿಕ ಯುವ ಕೇಂದ್ರವನ್ನು ಲೋಕಾರ್ಪಣೆ ಮಾಡಲಿದ್ದಾರೆ. ನಂತರ ರಾಮಕೃಷ್ಣ ಆಶ್ರಮಕ್ಕೆ ತೆರಳಿ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲಿದ್ದಾರೆ.

ರಾಮಕೃಷ್ಣ ಆಶ್ರಮದಲ್ಲಿ ವಿಶೇಷ ಕಾರ್ಯಕ್ರಮ

ರಾಮಕೃಷ್ಣ ಆಶ್ರಮದ ಆಡಿಟೋರಿಯಂನಲ್ಲಿ ವಿಶೇಷ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಪ್ರಧಾನಿ ಮೋದಿ ಸುಮಾರು 30 ನಿಮಿಷಗಳ ಕಾಲ ಆಶ್ರಮದಲ್ಲಿ ಇರಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸುಮಾರು 6 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ವಿಶೇಷ ಪಾಸ್ ವಿತರಿಸಲಾಗುತ್ತದೆ. ಪಾಸ್ ಹೊಂದಿರುವವರಿಗೆ ಮಾತ್ರ ಪ್ರವೇಶ ನೀಡಲಾಗುವುದು. ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಮೋದಿಗೆ ಅರುಣ್ ಯೋಗಿರಾಜ್ ಕೆತ್ತನೆಯ ವಿಶೇಷ ನೆನಪಿನ ಕಾಣಿಕೆ

ಈ ಸಂದರ್ಭದಲ್ಲಿ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಪ್ರಧಾನಿ ಮೋದಿಯವರಿಗೆ ಉಡುಗೊರೆಯಾಗಿ ನೀಡಲಾಗುತ್ತದೆ. ಜೊತೆಗೆ ಮೈಸೂರಿನ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ವಿಶೇಷ ನೆನಪಿನ ಕಾಣಿಕೆಯನ್ನೂ ಪ್ರಧಾನಿಗೆ ಅರ್ಪಿಸಲಾಗುತ್ತದೆ ಎಂದು ಮೈಸೂರು ರಾಮಕೃಷ್ಣ ಆಶ್ರಮದ ಮುಕ್ತಿದಾನಂದ ಜೀ ಮಹಾರಾಜ್ ತಿಳಿಸಿದ್ದಾರೆ.

ಮೋದಿ ಜತೆ ಯಾರು ವೇದಿಕೆ ಹಂಚಿಕೊಳ್ಳಲಿದ್ದಾರೆ?

ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಸಂಸದ ಯದುವೀರ್, ಶಾಸಕ ಹರೀಶ್ ಗೌಡ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವೇದಿಕೆ ಹಂಚಿಕೊಳ್ಳಲಿದ್ದಾರೆ. ವೇದಿಕೆಯಲ್ಲಿ ಕೆಲವೇ ಗಣ್ಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಇತ್ತೀಚೆಗೆ ಬೆಂಗಳೂರಿಗೂ ಭೇಟಿ ನೀಡಿದ್ದ ಪ್ರಧಾನಿ

ಮೇ 10 ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಭೇಟಿ ನೀಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45ನೇ ವಾರ್ಷಿಕೋತ್ಸವ, ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ 70ನೇ ಜನ್ಮೋತ್ಸವ ಹಾಗೂ ನೂತನ ಧ್ಯಾನ ಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ವಿಕಸಿತ್ ವೈಬ್ರೆಂಟ್‌ ವಿಲೇಜ್‌-2026: ಯುವಕರೊಂದಿಗೆ ನರೇಂದ್ರ ಮೋದಿ ಸಂವಾದ ನೇರ ಪ್ರಸಾರ

ಇದೀಗ ಮೈಸೂರಿನಲ್ಲಿ ಸ್ವಾಮಿ ವಿವೇಕಾನಂದ ಸ್ಮಾರಕ ಉದ್ಘಾಟನೆ ಹಾಗೂ ರಾಮಕೃಷ್ಣ ಆಶ್ರಮದ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ಮತ್ತೊಮ್ಮೆ ಕರ್ನಾಟಕ ಪ್ರವಾಸ ಕೈಗೊಳ್ಳುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *