ಕಿರುತೆರೆಯಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋಗೆ ಇರುವ ಜನಪ್ರಿಯತೆ ಅಪಾರ. ಕನ್ನಡದಲ್ಲಿ ಈಗಾಗಲೇ 12 ಸೀಸನ್ಗಳು ಯಶಸ್ವಿಯಾಗಿ ಮುಗಿದಿವೆ. 13ನೇ ಸೀಸನ್ ಆರಂಭಕ್ಕೆ ಸಕಲ ಸಿದ್ಧತೆ ನಡೆದಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 13’ (Bigg Boss Kannada Season 13) ಆರಂಭಕ್ಕಾಗಿ ಕಾದಿದ್ದ ವೀಕ್ಷಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಈ ಬಾರಿ ಬಿಗ್ ಬಾಸ್ ಯಾವಾಗ ಪ್ರಾರಂಭ ಆಗಲಿದೆ ಎಂಬ ಪ್ರಶ್ನೆಗೆ ‘ಕಲರ್ಸ್ ಕನ್ನಡ’ (Colors Kannada) ವಾಹಿನಿ ಉತ್ತರ ನೀಡಿದೆ. ಹೊಸ ಪ್ರೋಮೋ ಮೂಲಕ ಮಾಹಿತಿ ಹಂಚಿಕೊಳ್ಳಲಾಗಿದೆ. ಆಗಸ್ಟ್ 16ರಿಂದ ‘ಬಿಗ್ ಬಾಸ್’ ಶುರು ಆಗಲಿದೆ.
ಈ ಬಾರಿ ‘ಬಿಗ್ ಬಾಸ್ ಕನ್ನಡ’ ರಿಯಾಲಿಟಿ ಶೋ ಸಂಪೂರ್ಣ ಭಿನ್ನವಾಗಿ ಇರಲಿದೆ. ಸೆಲೆಬ್ರಿಟಿಗಳು ಮಾತ್ರವಲ್ಲದೇ ಸಾಮಾನ್ಯ ಜನರಿಗೂ ದೊಡ್ಮನೆಗೆ ಕಾಲಿಡುವ ಅವಕಾಶವನ್ನು ನೀಡಲಾಗುತ್ತಿದೆ. ತಮ್ಮ ಪ್ರತಿಭೆಯನ್ನು ತೋರಿಸುವ ಮೂಲಕ ಆಡಿಷನ್ ನೀಡುವಂತೆ ಈ ಹಿಂದೆ ಜನರಿಗೆ ಅವಕಾಶ ಕಲ್ಪಿಸಲಾಗಿತ್ತು. ಲಕ್ಷಾಂತರ ಜನರು ಆಸಕ್ತಿ ತೋರಿಸಿದ್ದಾರೆ.
ಆಗಸ್ಟ್ 16ರಿಂದ ಬಿಗ್ ಬಾಸ್ ಅಗ್ನಿಪರೀಕ್ಷೆ:
ಬಿಗ್ ಬಾಸ್ ಮನೆಗೆ ಬರುವ ಉತ್ಸಾಹದಲ್ಲಿ ಇರುವವರಿಗೆ ವೇದಿಕೆ ಸಜ್ಜುಗೊಳಿಸಲಾಗಿದೆ. ಆಡಿಷನ್ ನೀಡಿರುವವರಿಗೆ ಅಗ್ನಿಪರೀಕ್ಷೆ ಏರ್ಪಡಿಸಲಾಗುತ್ತದೆ. ಯಶಸ್ವಿಯಾಗಿ ಅಗ್ನಿಪರೀಕ್ಷೆ ಎದುರಿಸುವವರಿಗೆ ಬಿಗ್ ಬಾಸ್ ಮನೆಯೊಳಗೆ ಕಾಲಿಡುವ ಅವಕಾಶ ಸಿಗಲಿದೆ. ಈ ಅಗ್ನಿಪರೀಕ್ಷೆಯ ಸಂಚಿಕೆಗಳು ಆಗಸ್ಟ್ 16ರಿಂದ ಪ್ರಸಾರ ಆಗಲಿವೆ. ಅಂದು ರಾತ್ರಿ 9 ಗಂಟೆಗೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಬಳಿಕ ಪ್ರತಿ ಸೋಮವಾರದಿಂದ ಶುಕ್ರವಾರ ರಾತ್ರಿ 9.30ಕ್ಕೆ ಎಪಿಸೋಡ್ಗಳು ಪ್ರಸಾರವಾಗಲಿದೆ.
ಬಿಗ್ ಬಾಸ್ ಕನ್ನಡ ಹೊಸ ಪ್ರೋಮೋ:
ವೀಕ್ಷಕರಿಗೂ ಇದು ಹೊಸ ಅನುಭವ:
ಈ ರೀತಿ ಅಗ್ನಿಪರೀಕ್ಷೆ ಮಾಡುವ ಮೂಲಕ ಸ್ಪರ್ಧಿಗಳನ್ನು ಆಯ್ಕೆ ಮಾಡುತ್ತಿರುವುದು ಬಿಗ್ ಬಾಸ್ ಶೋನಲ್ಲಿ ಹೊಸ ಕಾನ್ಸೆಪ್ಟ್. ಹಾಗಾಗಿ ವೀಕ್ಷಕರಿಗೆ ಸಖತ್ ಕುತೂಹಲ ಇದೆ. ಈ ಸಂಚಿಕೆಗಳು ಹೇಗಿರಲಿವೆ? ನಿರೂಪಣೆ ಯಾರು ಮಾಡಲಿದ್ದಾರೆ? ವಿಡಿಯೋ ಕಳಿಸಿದ ಎಷ್ಟು ಮಂದಿಗೆ ಅಗ್ನಿಪರೀಕ್ಷೆಯಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ? ಅಂತಿಮವಾಗಿ ಯಾರು ಬಿಗ್ ಬಾಸ್ ಮನೆಗೆ ಕಾಲಿಡುತ್ತಾರೆ ಎಂಬುದನ್ನು ನೋಡಲು ಜನರು ಉತ್ಸುಕರಾಗಿದ್ದಾರೆ.
ಇದನ್ನೂ ಓದಿ: ‘ಬಿಗ್ ಬಾಸ್’ ಭಾವಿ ಸ್ಪರ್ಧಿಗಳಿಗೆ ‘ಅಗ್ನಿಪರೀಕ್ಷೆ’; ಜಡ್ಜ್ ಸ್ಥಾನದಲ್ಲಿ ಗಿಲ್ಲಿ, ಸಂಗೀತಾ?
ಇತ್ತೀಚೆಗಷ್ಟೇ ‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಹೊಸ ಪ್ರೋಮೋ ಬಿಡುಗಡೆ ಮಾಡಲಾಗಿತ್ತು. ಕಿಚ್ಚ ಸುದೀಪ್ ಅವರು ಎಂದಿನ ಗತ್ತಿನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಥ್ರಿಲ್ ನೀಡಿದ್ದರು. ಆ ಪ್ರೋಮೋದ ಬೆನ್ನಲ್ಲೇ ‘ಅಗ್ನಿಪರೀಕ್ಷೆ’ಯ ಪ್ರೋಮೋ ಅನಾವರಣ ಮಾಡಲಾಗಿದೆ. ‘ಕಲರ್ಸ್ ಕನ್ನಡ’ ವಾಹಿನಿಯ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಪ್ರೋಮೋ ರಿಲೀಸ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
