ಆಟವಲ್ಲ… ಹೊಡೆದಾಟ… ಕೈಕೈ ಮಿಲಾಯಿಸಿದ  ಫ್ರಾನ್ಸ್ vs ಪರಾಗ್ವೆ ಆಟಗಾರರು! – Kannada News | Huge Fight Between France and Paraguay Players in FIFA World Cup 2026

ಫಿಫಾ ವಿಶ್ವಕಪ್​ 2026ರ ನಾಕೌಟ್ ಹಂತದ ಪಂದ್ಯದಲ್ಲಿ ಅಹಿತಕರ ಘಟನೆ ನಡೆದಿದೆ. ಫಿಲಡೆಲ್ಫಿಯಾದ ಲಿಂಕನ್ ಫೈನಾನ್ಷಿಯಲ್ ಫೀಲ್ಡ್ ಮೈದಾನದಲ್ಲಿ ನಡೆದ ಪ್ರಿ-ಕ್ವಾರ್ಟರ್​ ಪಂದ್ಯದಲ್ಲಿ ಫ್ರಾನ್ಸ್ ಹಾಗೂ ಪರಾಗ್ವೆ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್ ಮುಗಿಯುತ್ತಿದ್ದಂತೆ ಮೈದಾನದಲ್ಲೇ ಆಟಗಾರರು ರಣರಂಗ ಸೃಷ್ಟಿಸಿದರು.

ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯವನ್ನು ಫ್ರಾನ್ಸ್ ತಂಡವು 1-0 ಅಂತರದಿಂದ ಮುನ್ನಡೆ ಸಾಧಿಸಿದ್ದರು. ಅಲ್ಲದೆ ಅಂತಿಮ ವಿಸ್ಲ್ ಮೊಳಗುತ್ತಿದ್ದಂತೆ, ಉಭಯ ದೇಶಗಳ ಆಟಗಾರರು ಹಾಗೂ ಸಿಬ್ಬಂದಿ ಪರಸ್ಪರ ಕೈಕೈ ಮಿಲಾಯಿಸಲು ಮುಂದಾದರು. ಇದಕ್ಕೆ ಮುಖ್ಯ ಕಾರಣ ಪಂದ್ಯದದ್ದಕ್ಕೂ ಕಂಡು ಬಂದ ದೈಹಿಕ ಆಕ್ರಮಣ.

  • ಪಂದ್ಯದ ವೇಳೆ ಪರಾಗ್ವೆಯ ಮಟಿಯಾಸ್ ಗಲಾರ್ಜಾ, ಎಂಬಾಪೆಯನ್ನು ಮೊಣಕೈಯಿಂದ ಬಲವಾಗಿ ಗುದ್ದಿ ಕೆಳಗೆ ಬೀಳಿಸಿದ್ದರು.
  • ಫ್ರಾನ್ಸ್‌ಗೆ ಪೆನಾಲ್ಟಿ ಸಿಕ್ಕಾಗ, ಪರಾಗ್ವೆ ಆಟಗಾರರು ಎಂಬಾಪೆ ಕಿಕ್ ಹೊಡೆಯದಂತೆ ತಡೆಯಲು ತಮ್ಮ ಬೂಟುಗಳಿಂದ ಪೆನಾಲ್ಟಿ ಸ್ಪಾಟ್ ಗುರುತನ್ನು ಹಾಳು ಮಾಡಲು ಯತ್ನಿಸಿದ್ದರು.
  • ಪಂದ್ಯದದ್ದಕ್ಕೂ ಪರಾಗ್ವೆ ಆಟಗಾರರು ಉದ್ದೇಶಪೂರ್ವಕವಾಗಿಯೇ ಫ್ರಾನ್ಸ್ ಆಟಗಾರರ ಮೇಲೆ ದೈಹಿಕ ಹಲ್ಲೆ ನಡೆಸುತ್ತಿರುವುದು ಕಂಡು ಬಂದಿತ್ತು.
  • ಪರಾಗ್ವೆ ಆಟಗಾರರು ಸರಣಿ ಫೌಲ್‌ಗಳನ್ನು ಮಾಡುತ್ತಿದ್ದರೂ ಅಂಪೈರ್ ಅವರಿಗೆ ಯಾವುದೇ ಕಾರ್ಡ್ ನೀಡಿರಲಿಲ್ಲ.
  • ಫ್ರಾನ್ಸ್ ಆಟಗಾರರಿಗೆ ಮೂರು ಎಲ್ಲೋ ಕಾರ್ಡ್ ನೀಡಿದ್ದು ಫ್ರೆಂಚ್ ಪಾಳಯದ ಆಕ್ರೋಶಕ್ಕೆ ಕಾರಣವಾಗಿತ್ತು.

ಈ ಎಲ್ಲಾ ಆಕ್ರೋಶಗಳು ಪಂದ್ಯ ಮುಗಿದ ಬಳಿಕ ಕೂಡ ಮುಂದುವರೆಯಿತು. ಪರಿಣಾಮ ಉಭಯ ತಂಡಗಳ ಆಟಗಾರರು ಮೈದಾನದಲ್ಲೇ ಕೈಕೈ ಮಿಲಾಯಿಸಿದರು.

ಕೈಕುಲುಕಲು ನಿರಾಕರಿಸಿದ ಎಂಬಾಪೆ!

ಮೊದಲೇ ಪರಾಗ್ವೆ ಆಟಗಾರರ ಆಕ್ರಮಣಕಾರಿ ಮನಸ್ಥಿತಿಯಿಂದ ಕುಪಿತಗೊಂಡಿದ್ದ ಕಿಲಿಯನ್ ಎಂಬಾಪೆ ಪಂದ್ಯದ ಬಳಿಕ ಪರಾಗ್ವೆಯ ಗೋಲ್‌ಕೀಪರ್ ಒರ್ಲಾಂಡೊ ಗಿಲ್ ಅವರೊಂದಿಗೆ ಹಸ್ತಲಾಘವ ಮಾಡಲು ನಿರಾಕರಿಸಿದರು.

ಎಂಬಾಪೆ ಅವರ ಈ ವರ್ತನೆಯಿಂದ ಪರಾಗ್ವೆ ಆಟಗಾರರು ಕೆರಳಿದರು. ಇದೇ ವೇಳೆ ಒರ್ಲಾಂಡೊ ಗಿಲ್, ನೇರವಾಗಿ ಎಂಬಾಪೆ ಅವರತ್ತ ಫುಟ್‌ಬಾಲ್ ಎಸೆದು ಆಕ್ರೋಶ ಹೊರಹಾಕಿದರು.

ಮತ್ತೊಂದು ಕಡೆಯಿಂದ ಬಂದ ಪರಾಗ್ವೆ ರಕ್ಷಣಾತ್ಮಕ ಆಟಗಾರ ಗುಸ್ಟಾವೊ ವೆಲಾಜ್ಕ್ವೆಜ್ ಫ್ರಾನ್ಸ್‌ನ ಜೂಲ್ಸ್ ಕೌಂಡೆ ಅವರನ್ನು ಹಿಂದಿನಿಂದ ಜೋರಾಗಿ ತಳ್ಳಿ ಜಗಳಕ್ಕಿಳಿದರು.

ಕ್ಷಣಾರ್ಧದಲ್ಲೇ ಉಭಯ ತಂಡಗಳ ಸಬ್‌ಸ್ಟಿಟ್ಯೂಟ್ ಆಟಗಾರರು ಮತ್ತು ತರಬೇತುದಾರರು ಮೈದಾನಕ್ಕೆ ನುಗ್ಗಿದ್ದರಿಂದ ಫಿಲಡೆಲ್ಫಿಯಾದ ಕ್ರೀಡಾಂಗಣವು ಕುಸ್ತಿ ಅಖಾಡವಾಗಿ ಮಾರ್ಪಟ್ಟಿತು.

ಕ್ವಾರ್ಟರ್​ ಫೈನಲ್​ಗೇರಿದ ಫ್ರಾನ್ಸ್​:

ಪರಾಗ್ವೆ ತಂಡದ ತೀವ್ರ ಆಕ್ರಮಣಕಾರಿ ಮತ್ತು ದೈಹಿಕ ಆಟದ ನಡುವೆಯೂ ಫ್ರಾನ್ಸ್ ತಂಡವು ಕಿಲಿಯನ್ ಎಂಬಾಪೆ 70ನೇ ನಿಮಿಷದಲ್ಲಿ ಹೊಡೆದ ಪೆನಾಲ್ಟಿ ಗೋಲಿನ ನೆರವಿನಿಂದ 1-0 ಅಂತರದಲ್ಲಿ ರೋಚಕ ಜಯ ಸಾಧಿಸಿತು.

ಈ ಗೆಲುವಿನೊಂದಿಗೆ ಫ್ರಾನ್ಸ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು, ಗುರುವಾರ ನಡೆಯಲಿರುವ ಪಂದ್ಯದಲ್ಲಿ ಮೊರಾಕೊ ತಂಡವನ್ನು ಎದುರಿಸಲಿದೆ.

ಕಠಿಣ ಕ್ರಮದ ಸಾಧ್ಯತೆ:

ಮೈದಾನದಲ್ಲಿ ಕಂಡು ಬಂದ ಈ ಘರ್ಷಣೆಯನ್ನು ಫಿಫಾ ಗಂಭೀರವಾಗಿ ಪರಿಗಣಿಸಿದೆ. ಅಲ್ಲದೆ ಮೈದಾನದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಉಭಯ ತಂಡಗಳ ಆಟಗಾರರ ಮೇಲೆ ಕಠಿಣ ಶಿಸ್ತು ಕ್ರಮಗೊಳ್ಳುವ ಮತ್ತು ನಿಷೇಧ ಹೇರುವ ಸಾಧ್ಯತೆಯಿದೆ.

Source link

Leave a Reply

Your email address will not be published. Required fields are marked *