ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಮಕ್ಕಳು ಸಾವುImage Credit source: Tv9 Kannada
ದೊಡ್ಡಬಳ್ಳಾಪುರ, ಜೂನ್ 14: ಆಕಸ್ಮಿಕವಾಗಿ ನೀರಲ್ಲಿ ಮುಳುಗಿ ಪ್ರಾಣ ಕಳೆದುಕೊಳ್ಳುವವರ ಸರಣಿ ರಾಜ್ಯದಲ್ಲಿ ಮುಂದುರಿದಿದೆ. ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಮಕ್ಕಳು ದಾರುಣವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ತೊಗರಿಘಟ್ಟ ಗ್ರಾಮದಲ್ಲಿ ನಡೆದಿದೆ. ಮನೆಯಲ್ಲಿ ಪೋಷಕರು ಇಲ್ಲದಿದ್ದಾಗ ಆಟ ಆಡಲು ಹೋಗಿದ್ದ ದಕ್ಷಾ(11), ಧನುಷ್(4) ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದು, ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮುಖ್ಯಾಂಶಗಳು
- ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಮಕ್ಕಳು ದಾರುಣ ಸಾವು
- ದೊಡ್ಡಬಳ್ಳಾಪುರ ತಾಲೂಕಿನ ತೊಗರಿಘಟ್ಟದಲ್ಲಿ ಘಟನೆ
- ಪೋಷಕರಿಲ್ಲದ ವೇಲೆ ಆಡಲು ಹೋಗಿ ಭಾರಿ ದುರಂತ
ಕೃಷಿ ಹೊಂಡಕ್ಕಿರಲಿಲ್ಲ ಬೇಲಿ!
ಇನ್ನು ಮಕ್ಕಳು ಮೃತಪಟ್ಟಿರುವ ಕೃಷಿ ಹೊಂಡ ರೈತ ಗುರುಮೂರ್ತಿ ಎಂಬುವವರಿಗೆ ಸೇರಿದ್ದು, ಇದಕ್ಕೆ ಕನಿಷ್ಠ ಬೇಲಿಯನ್ನೂ ಹಾಕಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಗುರುಮೂರ್ತಿ ವಿರುದ್ಧ ದೊಡ್ಡಬಳ್ಳಾಪುರ ಗ್ರಾಮಾಂತರ ಫೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಬೇಟೆ; ಬೆಂಗಳೂರು ಏರ್ಪೋರ್ಟ್ನಲ್ಲಿ 1.37 ಕೋಟಿ ಮೌಲ್ಯದ ಬಂಗಾರ ವಶಕ್ಕೆ
ಮೇಲಿಂದ ಮೇಲೆ ದುರಂತ
ಕೃಷಿ ಹೊಂಡ, ಕೆರೆ, ಸಂಪ್ ಮುಂತಾದವುಗಳಿಗೆ ಬಿದ್ದು ಮಕ್ಕಳೇ ಬಲಿಯಾಗುತ್ತಿರುವ ಪ್ರಕರಣಗಳು ರಾಜ್ಯದಲ್ಲಿ ಇತ್ತೀಚೆಗೆ ಹೆಚ್ಚುತ್ತಿವೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಲಕ್ಷ್ಮೀಸಾಗರದಲ್ಲಿ ಮನೆ ಮುಂದಿನ ನೀರಿನ ಸಂಪ್ಗೆ ಬಿದ್ದು 2 ವರ್ಷದ ಮಗು ಮೃತಪಟ್ಟಿರುವ ಘಟನೆ ನಿನ್ನೆ (ಜೂನ್ 13) ವರದಿಯಾಗಿತ್ತು. ಅತ್ತ ಬಾಗಲಕೋಟೆಯಲ್ಲಿಯೂ ನೀರಿನ ಟ್ಯಾಂಕ್ನಲ್ಲಿ ಮುಳುಗಿ 18 ತಿಂಗಳ ಹೆಣ್ಣು ಮಗು ದಾರುಣ ಅಂತ್ಯ ಕಂಡ ಘಟನೆ ಜೂನ್ 8ರಂದು ನಡೆದಿತ್ತು. ಈ ಘಟನೆಗಳು ಮಾಸುವ ಮುನ್ನವೇ ಮತ್ತೊಂದು ದುರಂತವೀಗ ರಾಜ್ಯದಲ್ಲಿ ನಡೆದಿರೋದು ಆತಂಕ ಹೆಚ್ಚಿಸಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
