ಬೆಂಗಳೂರು, ಮೇ 07: ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪರಿಣಾಮ ಆಟೋ ಎಲ್ಪಿಜಿ ದರ ನಿರಂತರವಾಗಿ ಏರಿಕೆ ಕಂಡಿದೆ. ಹೀಗಾಗಿ ಆಟೋ ಮೀಟರ್ ದರ ಏರಿಕೆ ಮಾಡುವಂತೆ ಆಗ್ರಹಿಸಿ ಆಟೋ ಚಾಲಕ ಸಂಘಟನೆಗಳು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಯುದ್ಧಕ್ಕೂ ಮುನ್ನ ಒಂದು ಲೀಟರ್ ಆಟೋ ಎಲ್ಪಿಜಿ ದರ 56 ರೂ. ಇತ್ತು. ಬಳಿಕ ಅದು ಕಳೆದ ಒಂದು ವಾರದ ಹಿಂದೆ 90 ರೂ.ಗಳಿಗೆ ಏರಿತ್ತು. ಆದರೆ ಸದ್ಯ ಬೆಂಗಳೂರಲ್ಲಿ ಒಂದು ಲೀಟರ್ ಆಟೋ ಎಲ್ಪಿಜಿ ದರವೀಗ 95 ರೂಪಾಯಿಗಳಿಗೆ ತಲುಪಿದೆ. ಹೀಗಾಗಿ ಮೀಟರ್ ದರ ಏರಿಕೆ ಅನಿವಾರ್ಯ ಎಂಬುದು ಆಟೋ ಚಾಲಕರ ಅಭಿಪ್ರಾಯ.
- ಯುದ್ಧದ ಪರಿಣಾಮ ಆಟೋ ಎಲ್ಪಿಜಿ ದರ ನಿರಂತರವಾಗಿ ಏರಿಕೆ
- ಆಟೋ ಮೀಟರ್ ದರ ಏರಿಕೆಗೆ ಚಾಲಕ ಸಂಘಟನೆಗಳಿಂದ ಮನವಿ
- ಮೀಟರ್ ದರ ಎಷ್ಟು ಹೆಚ್ಚಳಕ್ಕೆ ಆಟೋ ಚಾಕರಿಂದ ಪ್ರಸ್ತಾಪ?
ಇದನ್ನೂ ಓದಿ: ಬೆಂಗಳೂರು ಆಟೋ ಪ್ರಯಾಣಿಕರಿಗೆ ದರ ಏರಿಕೆ ಬಿಸಿ? ಎಲ್.ಪಿ.ಜಿ ದರ ಹೆಚ್ಚಳಕ್ಕೆ ಚಾಲಕರ ಆಕ್ರೋಶ!
ಎಷ್ಟು ದರ ಹೆಚ್ಚಳಕ್ಕೆ ಮನವಿ?
ಆಟೋ ಮೀಟರ್ ಕನಿಷ್ಠ ದರವನ್ನು 50 ರೂ. ಹಾಗೂ ಆ ನಂತರ ಕಿಲೋ ಮೀಟರ್ಗೆ 25 ರೂ. ಹೆಚ್ಚಿಸಲು ಆಟೋ ಚಾಲಕ ಸಂಘಟನೆಗಳು ಬೇಡಿಕೆ ಇಟ್ಟಿವೆ. ಬೆಂಗಳೂರಲ್ಲಿ ಸದ್ಯ ಆಟೋ ಮೀಟರ್ ಕನಿಷ್ಠ ದರ 36 ರೂ. ಇದ್ದು, ಆ ನಂತರದ ಪ್ರತಿ ಕಿಲೋ ಮೀಟರ್ಗೆ 18 ರೂ. ನಿಗದಿಪಡಿಸಲಾಗಿದೆ. ಮೊದಲೇ ಆಟೋ ಎಲ್ಪಿಜಿ ಅಗತ್ಯಕ್ಕೆ ತಕ್ಕಂತೆ ಸಿಗ್ತಿಲ್ಲ. ಈ ನಡುವೆ ಗ್ಯಾಸ್ ದರವನ್ನೂ ಕೇಂದ್ರ ಸರ್ಕಾರ ದಿಢೀರ್ ಏರಿಸಿರೋದು ಚಾಲಕರನ್ನು ಸಂಕಷ್ಟ ತಳ್ಳಿದೆ ಎಂಬ ಮಾತುಗಳು ಕೇಳಿಬಂದಿವೆ.
ಇನ್ನು ಚಾಲಕ ಸಂಘಟನೆಗಳ ಆಗ್ರಹದ ಬಗ್ಗೆ ಪ್ರಯಾಣಿಕರಿಂದಲೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗ್ಯಾಸ್ ರೇಟ್ ಹೆಚ್ಚಳದ ಕಾರಣಕ್ಕೆ ಆಟೋ ಚಾಲಕರ ಬೇಡಿಕೆಯೇನೋ ಸರಿಯಿದೆ. ಆದರೆ ದರ ಏರಿಕೆ ಮಾಡಿದಲ್ಲಿ ಅದು ಪ್ರಯಾಣಿಕರಿಗೆ ಹೊರೆಯಾಗಲಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದರೆ, ಇನ್ನು ಹಲವರು ಆಟೋ ಎಲ್ಪಿಜಿ ದರ ದುಪ್ಪಟ್ಟಾಗಿರುವ ಕಾರಣ ದರ ಏರಿಕೆ ಆಗಲಿ ಎಂದು ತಿಳಿಸಿದ್ದಾರೆ. ಈ ನಡುವೆ ಸಾರಿಗೆ ಸಚಿವರಿಗೂ ತಮ್ಮ ಬೇಡಿಕೆ ಒಳಗೊಂಡ ಮನವಿಯನ್ನು ನೀಡೋದಾಗಿ ಆಟೋ ಚಾಲಕ ಸಂಘಟನೆಗಳು ತಿಳಿಸಿವೆ. ಅಂತಿಮವಾಗಿ ನಿರ್ಧಾರ ಏನಾಗುತ್ತೆ ಎಂಬುದನ್ನು ಕಾದುನೋಡಬೇಕಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.