ನವದೆಹಲಿ, ಜುಲೈ 13: ಭಾರತದ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೇಷಿ ಅವರು ತಮ್ಮ ಹೊಸ ಪುಸ್ತಕದಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ (Manmohan Singh) ಅವರಿಗೆ ಸಂಬಂಧಿಸಿದ ಕೆಲವು ಕುತೂಹಲಕಾರಿ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. 2012ರ ಉತ್ತರ ಪ್ರದೇಶದ ಚುನಾವಣೆಯ ಸಂದರ್ಭದಲ್ಲಿ ತಮ್ಮದೇ ಸರ್ಕಾರದ ಸಚಿವರು ಚುನಾವಣಾ ಆಯೋಗದ ವಿರುದ್ಧ ಆಡುತ್ತಿದ್ದ ಹಗುರವಾದ ಮಾತುಗಳಿಂದ ಬೇಸತ್ತಿದ್ದ ಮನಮೋಹನ್ ಸಿಂಗ್, “ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದು ಕೂಡ ಹೇಳಿದ್ದರು ಎಂದು ಖುರೇಷಿ ನೆನಪಿಸಿಕೊಂಡಿದ್ದಾರೆ.
ಖುರೇಷಿ ಅವರ ‘India and I: A Hundred Memories, Not a Memoir’ (ಇಂಡಿಯಾ ಆ್ಯಂಡ್ ಐ: ಎ ಹಂಡ್ರೆಡ್ ಮೆಮೊರಿಸ್, ನಾಟ್ ಎ ಮೆಮೊಯಿರ್) ಎಂಬ ಪುಸ್ತಕದಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ.
ಏನಿದು ಘಟನೆ?:
2012ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ಅಂದಿನ ಕೇಂದ್ರ ಸಚಿವರಾಗಿದ್ದ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರು, “ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಉದ್ಯೋಗಗಳಲ್ಲಿ ಮುಸ್ಲಿಮರ ಕೋಟಾವನ್ನು ಶೇ. 4.5ರಿಂದ 9ಕ್ಕೆ ಹೆಚ್ಚಿಸಲಾಗುವುದು” ಎಂದು ಭರವಸೆ ನೀಡಿದ್ದರು. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಯಾವುದೇ ಹೊಸ ಯೋಜನೆ ಅಥವಾ ಕೋಟಾವನ್ನು ಪ್ರಕಟಿಸುವಂತಿಲ್ಲ ಎಂದು ಆರೋಪಿಸಿ ಬಿಜೆಪಿ ತಕ್ಷಣವೇ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.
ಇದನ್ನೂ ಓದಿ: ಹಾರ್ಟ್ ಸರ್ಜರಿ ಬಳಿಕ ಮನಮೋಹನ್ ಸಿಂಗ್ ವೈದ್ಯರ ಬಳಿ ತಮ್ಮ ಆರೋಗ್ಯದ ವಿಚಾರ ಬಿಟ್ಟು ಬೇರೇನೋ ಕೇಳಿದ್ದರಂತೆ
“ಈ ಕುರಿತು ನಾವು 4 ದಿನಗಳ ಕಾಲ ಸುದೀರ್ಘ ವಿಚಾರಣೆ ನಡೆಸಿದೆವು. ಕಾಂಗ್ರೆಸ್ ಪರವಾಗಿ ಅಭಿಷೇಕ್ ಮನು ಸಿಂಘ್ವಿ ಮತ್ತು ಬಿಜೆಪಿ ಪರವಾಗಿ ಅರುಣ್ ಜೇಟ್ಲಿ ಅವರಂತಹ ಇಬ್ಬರು ಘಟಾನುಘಟಿ ತಜ್ಞರು ವಾದ-ಪ್ರತಿವಾದ ನಡೆಸಿದರು. ಅಂತಿಮವಾಗಿ, ನೀತಿ ಸಂಹಿತೆಯ ಅಡಿಯಲ್ಲಿ ಲಭ್ಯವಿರುವ ಅತ್ಯಂತ ಕಠಿಣ ಕ್ರಮವಾಗಿ ನಾವು ಸಲ್ಮಾನ್ ಖುರ್ಷಿದ್ ಅವರಿಗೆ ಎಚ್ಚರಿಕೆ ನೀಡಿದೆವು” ಎಂದು ಖುರೇಷಿ ಬರೆದಿದ್ದಾರೆ.
#WATCH | Delhi: “… I got a panic call from Prime Minister Dr. Manmohan Singh saying, Quraishi ji, I want to meet you immediately… I’ll commit suicide…” says Former Chief Election Commissioner SY Quraishi
He says, “When we were doing elections in UP, that was the time when… pic.twitter.com/t5AYWfImaY
— ANI (@ANI) July 13, 2026
ಸಚಿವರಿಂದ ಚುನಾವಣಾ ಆಯೋಗದ ವಿರುದ್ಧ ಆಕ್ರೋಶ:
ಚುನಾವಣಾ ಆಯೋಗದ ಈ ಎಚ್ಚರಿಕೆಯಿಂದ ಕೆರಳಿದ ಅಂದಿನ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಕೆಲವು ಸಚಿವರು ಬಹಿರಂಗವಾಗಿಯೇ ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಟೀಕಿಸಿದ್ದರು. ಚುನಾವಣಾ ಆಯೋಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಇದರಿಂದ ಆಗ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಎಸ್.ವೈ. ಖುರೇಷಿ ತೀವ್ರ ಬೇಸರಗೊಂಡಿದ್ದರು. ಕೇಂದ್ರ ಸಚಿವರ ಬೇಜವಾಬ್ದಾರಿ ವರ್ತನೆಯಿಂದ ಮನನೊಂದ ಖುರೇಷಿ ಪ್ರಧಾನಮಂತ್ರಿಗಳ ಆಪ್ತ ಕಾರ್ಯದರ್ಶಿಯ ಬಳಿ ಈ ಬಗ್ಗೆ ಬೇಸರ ತೋಡಿಕೊಂಡಿದ್ದರು.
ಅದೇ ದಿನ ಪ್ರಧಾನಿ ಮನಮೋಹನ್ ಸಿಂಗ್ ಕರೆ ಮಾಡಿ ಖುರೇಷಿಯವರಿಗೆ ಮನೆಗೆ ಬರಲು ಸೂಚಿಸಿದ್ದರಂತೆ. ಸಂಜೆ 7 ಗಂಟೆಗೆ ನಮ್ಮ ಮನೆಗೆ ಬನ್ನಿ ಎಂದಿದ್ದರಂತೆ. ಅದರಂತೆ ಖುರೇಷಿ ಅವರು ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಲು ಅವರ ನಿವಾಸಕ್ಕೆ ತೆರಳಿದ್ದರು.
ಆತ್ಮಹತ್ಯೆಯ ಮಾತನ್ನಾಡಿದ್ದರು ಮನಮೋಹನ್ ಸಿಂಗ್:
ಆಗ ತಮ್ಮ ಸರ್ಕಾರದ ಸಚಿವರ ವರ್ತನೆಯಿಂದ ಪ್ರಧಾನಿ ಮನಮೋಹನ್ ಸಿಂಗ್ ಕೂಡ ಬಹಳ ಮುಜುಗರಕ್ಕೊಳಗಾಗಿದ್ದರು ಮತ್ತು ನೊಂದಿದ್ದರು. ಈ ಬಗ್ಗೆ ಖುರೇಷಿ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. “ನಾನು ಪ್ರಧಾನಿಗಳ ನಿವಾಸಕ್ಕೆ ಹೋದಾಗ ಡಾ. ಮನಮೋಹನ್ ಸಿಂಗ್ ಅವರು ಅತ್ಯಂತ ಬೇಸರದಲ್ಲಿದ್ದರು. ನನ್ನನ್ನು ನೋಡಿದ ಕೂಡಲೆ ಅವರು, ಖುರೇಷಿ ಅವರೇ, ನನ್ನ ಸಚಿವರು ಈ ರೀತಿ ಮಾತನಾಡುತ್ತಿದ್ದರೆ ನಾನೇನು ಮಾಡಲಿ? ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದರು. ಅವರ ಬಾಯಿಂದ ಅಂತಹ ಮಾತುಗಳನ್ನು ಕೇಳಿ ನನಗೆ ತೀವ್ರ ಆಘಾತವಾಯಿತು. ನಂತರ ನಾನೇ ಅವರಿಗೆ ಸಾಂತ್ವನ ಹೇಳಿ ಮನೆಗೆ ಬಂದಿದ್ದೆ” ಎಂದು ಅವರು ಬರೆದಿದ್ದಾರೆ.
ಇದನ್ನೂ ಓದಿ: ಮನಮೋಹನ್ ಸಿಂಗ್ ನಿಧನದ ಬಳಿಕ ಪ್ರಮುಖ ನಿರ್ಧಾರ ತೆಗೆದುಕೊಂಡ ಸಲ್ಮಾನ್ ಖಾನ್
“ನನಗೆ ಈ ವಿಷಯದ ಬಗ್ಗೆ ಅರಿವೇ ಇರಲಿಲ್ಲ. ಒಂದು ವೇಳೆ ಗೊತ್ತಿದ್ದಿದ್ದರೆ ಅವರಿಗೆ ನಾನೇ ತರಾಟೆಗೆ ತೆಗೆದುಕೊಳ್ಳುತ್ತಿದ್ದೆ. ಇನ್ನು ಮುಂದೆ ಏನೇ ಇದ್ದರೂ ನೇರವಾಗಿ ನನಗೆ ಫೋನ್ ಮಾಡಿ ತಿಳಿಸಿ” ಎಂದು ಮನಮೋಹನ್ ಸಿಂಗ್ ಹೇಳಿದ್ದರೆಂದು ಖುರೇಷಿ ಬರೆದಿದ್ದಾರೆ.
“ಚುನಾವಣಾ ಆಯೋಗವು ಕೇವಲ ಭಾರತದ ಹೆಮ್ಮೆ ಮಾತ್ರವಲ್ಲ, ಅದು ನಮ್ಮ ಪ್ರಜಾಪ್ರಭುತ್ವದ ಆತ್ಮ. ಅದನ್ನು ನಾವು ಕಳೆದುಕೊಂಡರೆ, ಎಲ್ಲವನ್ನೂ ಕಳೆದುಕೊಂಡಂತೆ.” ಎಂದು ಮನಮೋಹನ್ ಸಿಂಗ್ ಹೇಳಿದ್ದ ಮಾತು ನನಗೆ ಇನ್ನೂ ನೆನಪಿದೆ. “ರಾಜಕೀಯದ ಕಾರಣಕ್ಕಾಗಿ ಅಲ್ಲ, ಬದಲಿಗೆ ಸಾಂವಿಧಾನಿಕ ಶಿಷ್ಟಾಚಾರವನ್ನು ಕೇವಲ ಭಾಷಣಕ್ಕೆ ಸೀಮಿತಗೊಳಿಸದೆ ತಮ್ಮ ಜೀವನದ ತತ್ವವಾಗಿಸಿಕೊಂಡಿದ್ದ ಒಬ್ಬ ನಾಯಕನನ್ನು ನೋಡಿ ನಾನು ಭಾವುಕನಾಗಿದ್ದೆ” ಎಂದು ಖುರೇಷಿ ನೆನಪಿಸಿಕೊಂಡಿದ್ದಾರೆ.
ಡಾ. ಮನಮೋಹನ್ ಸಿಂಗ್ ಅತ್ಯಂತ ಸೌಮ್ಯ ಸ್ವಭಾವದ ಮತ್ತು ಗೌರವಾನ್ವಿತ ರಾಜಕಾರಣಿಯಾಗಿದ್ದರು. ತಮ್ಮದೇ ಸಂಪುಟದ ಸಹೋದ್ಯೋಗಿಗಳು ಚುನಾವಣಾ ಆಯೋಗದಂತಹ ಸ್ವತಂತ್ರ ಸಾಂವಿಧಾನಿಕ ಸಂಸ್ಥೆಯ ಘನತೆಗೆ ಧಕ್ಕೆ ತರುತ್ತಿರುವುದನ್ನು ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಪ್ರಧಾನಿಯವರ ಈ ಭಾವುಕ ಪ್ರತಿಕ್ರಿಯೆಯು ಅವರು ಸಾಂವಿಧಾನಿಕ ಸಂಸ್ಥೆಗಳಿಗೆ ನೀಡುತ್ತಿದ್ದ ಗೌರವ ಮತ್ತು ಅವರ ಪ್ರಾಮಾಣಿಕತೆಯನ್ನು ತೋರಿಸುತ್ತದೆ ಎಂದು ಖುರೇಷಿ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 9:04 pm, Mon, 13 July 26
