
ನವದೆಹಲಿ, ಮಾರ್ಚ್ 31: ಕೇಂದ್ರ ಸರ್ಕಾರ 2021ರ ಮಾಹಿತಿ ತಂತ್ರಜ್ಞಾನ ಮಾರ್ಗಸೂಚಿ ಮತ್ತು ಡಿಜಿಟಲ್ ಮೀಡಿಯಾ ನೈತಿಕ ಸಂಹಿತೆ ನಿಯಮಗಳನ್ನು ಪರಿಷ್ಕರಿಸುತ್ತಿದೆ. ಈ ಸಂಬಂಧ ತಿದ್ದುಪಡಿ ತರುತ್ತಿದ್ದು ಅದರ ಕರಡು ನಿಯಮಗಳನ್ನು ನಿನ್ನೆ ಸೋಮವಾರ ಬಹಿರಂಗಪಡಿಸಿದೆ. ಸಾಮಾನ್ಯ ಸೋಷಿಯಲ್ ಮೀಡಿಯಾ ಬಳಕೆದಾರನ (social media user) ಮೇಲೆ ಪರಿಣಾಮ ಬೀರಲಿರುವುದು ಸೇರಿದಂತೆ ಕೆಲ ಪ್ರಮುಖ ಸಂಗತಿಗಳು ಈ ಪ್ರಸ್ತಾವಿತ ನಿಯಮಗಳಲ್ಲಿವೆ.
ಗಮನಿಸಬೇಕಾದ ಹೊಸ ಐಟಿ ನಿಯಮಗಳಿವು…
ಆನ್ಲೈನ್ನಲ್ಲಿ ಸಾಮಾನ್ಯ ಬಳಕೆದಾರರು ಹಾಕುವ ಪೋಸ್ಟ್ಗಳು ಸೂಕ್ಷ್ಮವಿದ್ದರೆ, ಅವರಿಗೆ ಸರ್ಕಾರದಿಂದಲೇ ನೇರವಾಗಿ ನೋಟೀಸ್ ಹೋಗಬಹುದು.
ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಿಗೆ ಸರ್ಕಾರ ನೀಡುವ ಸೂಚನೆಗಳು ಗೈಡ್ಲೈನ್ಸ್ ಮಾತ್ರವೇ ಆಗದೆ, ಕಾನೂನಾತ್ಮಕವಾಗಿ ಪಾಲಿಸುವಂಥದ್ದಿರುತ್ತವೆ. ಇವನ್ನು ಪಾಲಿಸದಿದ್ದರೆ ಕಾನೂನು ಪ್ರಕ್ರಿಯೆ ಎದುರಿಸಬೇಕಾಗುತ್ತದೆ.
ಇದನ್ನೂ ಓದಿ: ವಿವಿಧ ಪೋಸ್ಟ್ ಆಫೀಸ್ ಸ್ಕೀಮ್ಸ್; ಏಪ್ರಿಲ್-ಜೂನ್ ಕ್ವಾರ್ಟರ್ಗೆ ಬಡ್ಡಿದರ ಘೋಷಣೆ; ಇಲ್ಲಿದೆ ಪಟ್ಟಿ
ಸಾಮಾನ್ಯ ಬಳಕೆದಾರರ ಮೇಲೆ ಯಾಕೆ ಸರ್ಕಾರದ ಕಣ್ಣು?
ಇವತ್ತು ಸೋಷಿಯಲ್ ಮೀಡಿಯಾ ಮತ್ತು ಆನ್ಲೈನ್ ಪ್ಲಾಟ್ಫಾರ್ಮ್ಗಳು ಗಣನೀಯವಾಗಿ ವಿಸ್ತರಣೆ ಕಂಡಿವೆ. ಮಾಧ್ಯಮ ಸಂಸ್ಥೆಗಳಿಗಿಂತ ಹೆಚ್ಚು ಪ್ರಭಾವಶಾಲಿಯಾದ ಪೋಸ್ಟ್ಗಳು ಸಾಮಾನ್ಯ ಯೂಸರ್ಗಳಿಂದ ಬರುತ್ತವೆ. ಸೋಷಿಯಲ್ ಮೀಡಿಯಾದಲ್ಲಿ ತಪ್ಪು ಮಾಹಿತಿ ಸುಲಭವಾಗಿ ಹರಡಬಹುದು. ಇನ್ಸ್ಟಾಗ್ರಾಮ್ ಇನ್ಫ್ಲುಯೆನ್ಸರ್ಗಳು, ಯೂಟ್ಯೂಬ್ ಚಾನಲ್ ನಡೆಸುವವರು ಮೊದಲಾದವರು ಪ್ರಸಕ್ತ ವಿದ್ಯಮಾನಗಳ ಬಗ್ಗೆ ವ್ಯಕ್ತಪಡಿಸುವ ಅಭಿಪ್ರಾಯಗಳು ಇತರರನ್ನು ಪ್ರಭಾವಿತಗೊಳಿಸಬಹುದು. ಹೀಗಾಗಿ, ಸರ್ಕಾರವು ಈ ಬಳಕೆದಾರರ ಪೋಸ್ಟ್ಗಳ ಮೇಲೆ ನಿಗಾ ಇರಿಸಲು ಹೊರಟಿರಬಹುದು.
ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಿಗೆ ಹೆಚ್ಚಿನ ಜವಾಬ್ದಾರಿ
ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳು ಇಂತಿಂತಹ ಕಂಟೆಂಟ್ಗಳ ಮೇಲೆ ನಿಗಾ ಇರಿಸಬೇಕು ಎಂದು ಸರ್ಕಾರದಿಂದ ಸಲಹೆ, ಸೂಚನೆಗಳು, ಮಾರ್ಗಸೂಚಿಗಳು ಇವೆ. ಆದರೆ, ಈ ಮಾರ್ಗಸೂಚಿಗಳನ್ನು ಪಾಲಿಸಲೇಬೇಕು ಎನ್ನುವ ಕಟ್ಟುಪಾಡು ಇರಲಿಲ್ಲ. ಈಗ ಪ್ರಸ್ತಾವಿತ ನಿಯಮಗಳ ಪ್ರಕಾರ, ಸರ್ಕಾರ ನೀಡುವ ಮಾರ್ಗಸೂಚಿಗಳನ್ನು ಕಟ್ಟುಪಾಡುಗಳಂತೆ ಭಾವಿಸಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಇಂಥ ತಪ್ಪು ಪೋಸ್ಟ್ ಅನ್ನು ತೆಗೆದುಹಾಕಬೇಕೆಂದರೆ ಅದನ್ನು ತೆಗೆಯುವುದು ಅನಿವಾರ್ಯ. ಇಲ್ಲದಿದ್ದರೆ ಕಾನೂನು ಪ್ರಕ್ರಿಯೆ ಎದುರಿಸಬೇಕಾಗುತ್ತದೆ.
ಇದನ್ನೂ ಓದಿ: ಹೆಚ್ಚು ನಾಮಿನಿಗಳು, ಸೊನ್ನೆ ಲೋನ್ ಪ್ರೀಪೇಮೆಂಟ್ ಚಾರ್ಜ್; ಜನಸಾಮಾನ್ಯರು ಗಮನಿಸಬೇಕಾದ ಹೊಸ ನಿಯಮಗಳಿವು
ಕೆಲ ವಾರಗಳ ಹಿಂದೆ ಸರ್ಕಾರವು ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಿಗೆ ನೀಡಿದ ನಿರ್ದೇಶನದ ಪ್ರಕಾರ, ಒಂದು ಪೋಸ್ಟ್ ಅನ್ನು ತೆಗೆದುಹಾಕುವಂತೆ ಸೂಚನೆ ನೀಡಿದರೆ ಅದನ್ನು ಪಾಲಿಸುವ ಅವಧಿಯನ್ನು 24-36 ಗಂಟೆಗಳಿಂದ ಕೇವಲ 2-3 ಗಂಟೆಗೆ ಇಳಿಸಲಾಗಿದೆ.
ಸದ್ಯ ಸರ್ಕಾರದ ಕರಡು ನಿಯಮಗಳ ಬಗ್ಗೆ ಯಾರಿಗೇ ಆದರೂ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಏಪ್ರಿಲ್ 14ರವರೆಗೂ ಕಾಲಾವಕಾಶ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ