ಮುಂಬೈ, ಜುಲೈ 3: ಅಯೋಧ್ಯೆಯ ರಾಮ ಮಂದಿರಕ್ಕೆ ಬಂದ ದೇಣಿಗೆಯನ್ನು ಆರ್‌ಎಸ್‌ಎಸ್ (RSS) ಮತ್ತು ಬಿಜೆಪಿ ಲೂಟಿ ಮಾಡಿವೆ ಎಂದು ಉದ್ಧವ್ ಠಾಕ್ರೆ (Uddhav Thackeray) ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ಈ ಹಣವನ್ನು ವಿರೋಧ ಪಕ್ಷದ ಸಂಸದರು ಮತ್ತು ಶಾಸಕರನ್ನು ಖರೀದಿಸಿ, ಪಕ್ಷಾಂತರ ಮಾಡಿಸಲು ಬಳಸಲಾಗಿದೆ ಎಂದು ಅವರು ದೂರಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕಾಗಿ ಸಾವಿರಾರು ಭಕ್ತರು ಹಣ, ಚಿನ್ನ ಮತ್ತು ಬೆಳ್ಳಿಯ ಇಟ್ಟಿಗೆಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಆದರೆ ಮಂದಿರದ ಉಸ್ತುವಾರಿಗಾಗಿ ರಚಿಸಲಾದ ಟ್ರಸ್ಟ್‌ನವರು ಕೋಟ್ಯಂತರ ರೂಪಾಯಿಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
“ಶಾಸಕರು ಮತ್ತು ಸಂಸದರನ್ನು ಮಾರುಕಟ್ಟೆಯಲ್ಲಿ ಪ್ರಾಣಿಗಳಂತೆ ಮಾರಾಟ ಮಾಡಲಾಗುತ್ತಿದೆ ಮತ್ತು ಖರೀದಿಸಲಾಗುತ್ತಿದೆ. ರಾಮ ಮಂದಿರದಲ್ಲಿ ಸಂಗ್ರಹವಾದ ದೇಣಿಗೆಯನ್ನು ರಾಮ ಮಂದಿರ ಟ್ರಸ್ಟ್‌ನ ಜನರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ನಡೆಸಲು ಬಳಸಲಾಗುತ್ತಿದೆ. ಮಂದಿರದ ದೇಣಿಗೆ ಹಣವನ್ನು ಲೂಟಿ ಮಾಡುವ ಮೂಲಕ ಬಿಜೆಪಿ ರಾಮ ಮಂದಿರದಲ್ಲೇ ಒಂದು ಕಾರ್ಯಾಚರಣೆ ನಡೆಸಿದೆ” ಎಂದು ಉದ್ಧವ್ ಠಾಕ್ರೆ ಆರೋಪಿಸಿದ್ದಾರೆ.
ಇದನ್ನೂ ಓದಿ: ಶೀಘ್ರದಲ್ಲೇ ಮತ್ತೊಮ್ಮೆ ಆಪರೇಷನ್ ಟೈಗರ್?; ಠಾಕ್ರೆ ಬಣದ 14 ಶಾಸಕರು ಬಂಡಾಯಕ್ಕೆ ಸಿದ್ಧವೆಂದ ಏಕನಾಥ್ ಶಿಂಧೆ
ಉದ್ಧವ್ ಠಾಕ್ರೆ ಅವರ ಶಿವಸೇನಾ (UBT) ಪಕ್ಷದ 9 ಲೋಕಸಭಾ ಸಂಸದರ ಪೈಕಿ 6 ಮಂದಿ ಇತ್ತೀಚೆಗಷ್ಟೇ ಏಕನಾಥ್ ಶಿಂಧೆ ಬಣಕ್ಕೆ ಜಿಗಿದ ಬೆನ್ನಲ್ಲೇ ಈ ರಾಜಕೀಯ ಆರೋಪ ಹೊರಬಿದ್ದಿದೆ. ರಾಮ ಮಂದಿರದ ದೇಣಿಗೆ ಲೂಟಿ ಖಂಡಿಸಿ ಜುಲೈ 5ರ ಭಾನುವಾರದಿಂದ ಮುಂಬೈನ ದಾದರ್‌ನಲ್ಲಿ ರಾಜ್ಯವ್ಯಾಪಿ ‘ರಾಮರಕ್ಷಾ ಆಂದೋಲನ’ ಹಮ್ಮಿಕೊಳ್ಳುವುದಾಗಿ ಉದ್ಧವ್ ಠಾಕ್ರೆ ಘೋಷಿಸಿದ್ದಾರೆ. ಪಕ್ಷಗಳನ್ನು ಒಡೆಯಲು ರಾಮ ಮಂದಿರದ ಹಣ ಬಳಕೆ ಮಾಡಲಾಗುತ್ತಿದೆಯೇ? ಎಂಬ ಪ್ರಶ್ನೆಯನ್ನು ಅವರು ಎತ್ತಿದ್ದಾರೆ.
ಮುಂಬೈನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಉದ್ಧವ್ ಠಾಕ್ರೆ, ಬಿಜೆಪಿಯ “ಆಪರೇಷನ್ ಕಮಲ” ರಣತಂತ್ರವನ್ನು ಲೇವಡಿ ಮಾಡಿದರು. “ವಿರೋಧ ಪಕ್ಷಗಳ ಶಾಸಕರು ಮತ್ತು ಸಂಸದರನ್ನು ಒಡೆದು ತಮ್ಮತ್ತ ಸೆಳೆಯಲು ಬಿಜೆಪಿ ಈಗ ‘ಆಪರೇಷನ್ ರಾಮ ಮಂದಿರ್’ ನಡೆಸುತ್ತಿದೆಯೇ? ರಾಮ ಮಂದಿರದ ದೇಣಿಗೆಯಿಂದ ಕದ್ದ ಹಣವನ್ನು ರಾಜಕೀಯ ಪಕ್ಷಗಳನ್ನು ಒಡೆಯಲು ಬಳಸಲಾಗುತ್ತಿದೆ ಎಂದು ಕೆಲವು ಜನರು ಹೇಳುತ್ತಿದ್ದಾರೆ. ಇದಕ್ಕೆ ಸಾಕಷ್ಟು ಪುರಾವೆಗಳೂ ಇವೆ” ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ; ಒಂದೇ ವಿಮಾನದಲ್ಲಿ ಪ್ರಯಾಣಿಸಿದ ಫಡ್ನವಿಸ್ – ಉದ್ಧವ್ ಠಾಕ್ರೆ
ಹಿಂದೂಗಳು ಯಾರನ್ನೂ ಕ್ಷಮಿಸುವುದಿಲ್ಲ:
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹಳೆಯ ಹೇಳಿಕೆಯಾದ “ಇನ್ನು ಮುಂದೆ ಹಿಂದೂಗಳು ಯಾವುದೇ ದೌರ್ಜನ್ಯಕ್ಕೆ ಬಲಿಯಾಗುವುದಿಲ್ಲ” ಎಂದು ಉಲ್ಲೇಖಿಸಿದ ಉದ್ಧವ್ ಠಾಕ್ರೆ, “ಇಂದು ನಾನು ಹೇಳುತ್ತಿದ್ದೇನೆ— ಹಿಂದೂಗಳು ಇನ್ನು ಮುಂದೆ ಮಂದಿರಗಳನ್ನು ಲೂಟಿ ಮಾಡುವವರನ್ನು ಕ್ಷಮಿಸುವುದಿಲ್ಲ” ಎಂದು ಆಕ್ರೋಶ ಹೊರಹಾಕಿದ್ದಾರೆ. ರಾಮ ಮಂದಿರ ಚಳವಳಿಯಲ್ಲಿ ಶಿವಸೈನಿಕರು ರಕ್ತ ಹರಿಸಿದ್ದಾರೆ, ಆದರೆ ಬಿಜೆಪಿ ಮಾತ್ರ ಇದನ್ನು ಕೇವಲ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದಿದ್ದಾರೆ.
ಉದ್ಧವ್ ಬಣಕ್ಕೆ ಭಾರಿ ಆಘಾತ ನೀಡಿದ ಸಂಸದರ ವಲಸೆ:
ಉದ್ಧವ್ ಠಾಕ್ರೆ ಅವರ ಈ ತೀಕ್ಷ್ಣ ಪ್ರತಿಕ್ರಿಯೆಗೆ ಮುಖ್ಯ ಕಾರಣ ಮಹಾರಾಷ್ಟ್ರ ರಾಜಕೀಯದಲ್ಲಿ ಇತ್ತೀಚೆಗೆ ನಡೆದ ಹಠಾತ್ ಬೆಳವಣಿಗೆಗಳು. ಶಿವಸೇನಾ (UBT) ಪಕ್ಷದ ಒಟ್ಟು 9 ಲೋಕಸಭಾ ಸಂಸದರಲ್ಲಿ 6 ಮಂದಿ ಒಟ್ಟಾಗಿ ಬಂಡಾಯವೆದ್ದು, ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಬಣ ಸೇರಿಕೊಂಡಿದ್ದಾರೆ. 3ನೇ 2ರಷ್ಟು ಸಂಸದರು ಒಟ್ಟಿಗೆ ವಲಸೆ ಹೋಗಿರುವುದರಿಂದ ಅವರು ಪಕ್ಷಾಂತರ ನಿಷೇಧ ಕಾಯ್ದೆಯಿಂದ ಪಾರಾಗಿದ್ದಾರೆ. ಇದರ ಬೆನ್ನಲ್ಲೇ ಆದಿತ್ಯ ಠಾಕ್ರೆ ಅವರ ಆಪ್ತ ಸಚಿನ್ ಅಹೀರ್ ಕೂಡ ಶಿಂಧೆ ಬಣ ಸೇರಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
