ನವದೆಹಲಿ, ಮೇ 08: ಭಾರತೀಯ ಸಶಸ್ತ್ರ ಪಡೆಗಳ ಶೌರ್ಯ ಮತ್ತು ದೇಶದ ದೃಢ ಸಂಕಲ್ಪದ ಸಂಕೇತವಾದ ‘ಆಪರೇಷನ್ ಸಿಂಧೂರ್’ (Operation Sindoor)ನಡೆದು ಇಂದು ಭರ್ತಿ ಒಂದು ವರ್ಷ. ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಹೇಯ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ಈ ನಿಖರವಾದ ದಾಳಿಯು ಆಧುನಿಕ ಮಿಲಿಟರಿ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.
ರಕ್ಷಣಾ ಸಚಿವರ ನಮನ ಮತ್ತು ಎಚ್ಚರಿಕೆ
ಈ ವಿಶೇಷ ಸಂದರ್ಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾರತೀಯ ಸೇನೆಯ ಸಾಹಸಕ್ಕೆ ನಮಿಸಿದ್ದಾರೆ. ಆಪರೇಷನ್ ಸಿಂಧೂರ್ ರಾಷ್ಟ್ರೀಯ ಸಂಕಲ್ಪದ ಸಂಕೇತ. ಇದೇ ವೇಳೆ ಪಾಕಿಸ್ತಾನಕ್ಕೆ ಕಠಿಣ ಸಂದೇಶ ರವಾನಿಸಿದ ಅವರು, ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತಂದರೆ ಸಶಸ್ತ್ರ ಪಡೆಗಳು ನಿರ್ಣಾಯಕವಾಗಿ ಉತ್ತರಿಸಲು ಸದಾ ಸಿದ್ಧ ಎಂದು ಎಚ್ಚರಿಸಿದ್ದಾರೆ.
ಆಪರೇಷನ್ ಸಿಂಧೂರ್ ಹಿನ್ನೆಲೆ
ಕಳೆದ ವರ್ಷ ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ದಾಳಿಯಲ್ಲಿ 26 ಅಮಾಯಕ ನಾಗರಿಕರು ಬಲಿಯಾಗಿದ್ದರು. ಈ ರಕ್ತಪಾತಕ್ಕೆ ತಕ್ಕ ಪಾಠ ಕಲಿಸಲು ಭಾರತ ಮೇ 7 ರಂದು ‘ಆಪರೇಷನ್ ಸಿಂಧೂರ್’ ಆರಂಭಿಸಿತು. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ (PoK) ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ಭಾರತ ದಾಳಿ ನಡೆಸಿತು.
ಮತ್ತಷ್ಟು ಓದಿ: ಆಪರೇಷನ್ ಸಿಂಧೂರ್ ಅಬ್ಬರ, ಪಾಕ್ ಉಗ್ರರ ಕೋಟೆಗೆ ಲಗ್ಗೆ, ಒಂದು ವರ್ಷವಾದ್ರೂ ಹೊರಬರಲು ಹೆದರುತ್ತಿದ್ದಾರೆ ಸಯೀದ್-ಅಜರ್
ಜೈಶ್-ಎ-ಮೊಹಮ್ಮದ್ (JeM) ಮತ್ತು ಲಷ್ಕರ್-ಎ-ತೊಯ್ಬಾ (LeT) ಸಂಘಟನೆಗಳಿಗೆ ಸೇರಿದ 9ಕ್ಕೂ ಹೆಚ್ಚು ಪ್ರಮುಖ ಕಮಾಂಡ್ ಕೇಂದ್ರಗಳನ್ನು ಭಾರತೀಯ ಸೇನೆ ಧೂಳೀಪಟ ಮಾಡಿತು. ಈ ದಾಳಿಯಲ್ಲಿ 100ಕ್ಕೂ ಹೆಚ್ಚು ಭಯೋತ್ಪಾದಕರು ಹತರಾದರು.
On the anniversary of Operation Sindoor, we salute the valour and sacrifices of our armed forces, whose courage and dedication continue to safeguard the nation. Their actions during the operation reflected unmatched precision, seamless jointness and deep synergy across services,… pic.twitter.com/r8pVDnEoYV
— Rajnath Singh (@rajnathsingh) May 7, 2026
ಭಾರತೀಯ ವಾಯುಪಡೆಯು ಕಾರ್ಯಾಚರಣೆಯ ರೋಚಕ ವೀಡಿಯೋವನ್ನು ಹಂಚಿಕೊಂಡಿದ್ದು, ಭಾರತ ಯಾವುದನ್ನೂ ಮರೆಯುವುದಿಲ್ಲ, ಯಾವುದನ್ನೂ ಕ್ಷಮಿಸುವುದಿಲ್ಲ ಎಂದು ಗುಡುಗಿದೆ.
ನಾಲ್ಕು ದಿನಗಳ ಸುದೀರ್ಘ ಸಂಘರ್ಷ
ಭಾರತದ ದಾಳಿಗೆ ಬೆಚ್ಚಿಬಿದ್ದ ಪಾಕಿಸ್ತಾನ ಮೇ 8 ರಿಂದ 10 ರವರೆಗೆ ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು. ಆದರೆ, ಭಾರತವು ಕ್ಷಿಪಣಿ ಮತ್ತು ಡ್ರೋನ್ ದಾಳಿಗಳ ಮೂಲಕ ಪಾಕಿಸ್ತಾನದ ಸೇನಾ ನೆಲೆಗಳಿಗೇ ತಿರುಗೇಟು ನೀಡಿತು. ನಾಲ್ಕು ದಿನಗಳ ಕಾಲ ಗಡಿಯಲ್ಲಿ ಭೀಕರ ಘರ್ಷಣೆ ನಡೆದ ನಂತರ, ಪಾಕಿಸ್ತಾನದ ಕೋರಿಕೆಯ ಮೇರೆಗೆ ಮೇ 10 ರಂದು ಶಾಂತಿ ಸ್ಥಾಪನೆಯಾಯಿತು.
ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಭಾರತವು ತನ್ನ ಗಡಿ ಮತ್ತು ಜನರ ರಕ್ಷಣೆಗಾಗಿ ಗಡಿಯಾಚೆ ನುಗ್ಗಿ ದಾಳಿ ನಡೆಸಲು ಹಿಂಜರಿಯುವುದಿಲ್ಲ ಎಂಬುದನ್ನು ಆಪರೇಷನ್ ಸಿಂಧೂರ್ ಜಗತ್ತಿಗೆ ಸಾರಿದೆ. ಆತ್ಮನಿರ್ಭರತೆಯತ್ತ ಹೆಜ್ಜೆ ಹಾಕುತ್ತಿರುವ ಭಾರತಕ್ಕೆ ಈ ಕಾರ್ಯಾಚರಣೆಯು ಮಿಲಿಟರಿ ಸಾಮರ್ಥ್ಯದ ದೊಡ್ಡ ಸಾಕ್ಷಿಯಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
