ನುಹ್, ಜುಲೈ 30: ಆರು ದಿನಗಳ ಕಾಲ ಸೈಕಲ್ ಹಾಗೂ ಬೈಕ್(Bike) ಮೇಲೆ ವಿಚಿತ್ರ ಸಾಹಸಗಳನ್ನು ಪ್ರದರ್ಶಿಸಿ, ಒಂದೇ ಒಂದು ಸಣ್ಣ ಗೀರೂ ಇಲ್ಲದೆ ಸಾವಿರಾರು ಜನರನ್ನು ರಂಜಿಸಿದ್ದ ಆ ಯುವಕ, 7ನೇ ದಿನ ನಡೆಸಿದ ಒಂದೇ ಒಂದು ದುರಂತ ಸಾಹಸಕ್ಕೆ ಪ್ರಾಣವನ್ನೇ ತೆತ್ತಿದ್ದಾರೆ. ಹರಿಯಾಣದ ನುಹ್ ಜಿಲ್ಲೆಯ ಖೋರಿ ಕಲಾನ್ ಗ್ರಾಮದಲ್ಲಿ ನಡೆದ ಸೈಕಲ್ ಸರ್ಕಸ್ ಬಳಿಕ 27 ವರ್ಷದ ಸಾಹಸಿ ದೀಪಕ್,ನೆಲದಡಿಯಲ್ಲಿ ಸಮಾಧಿಯಾಗುವ ಸಾಹಸ ಪ್ರದರ್ಶನ ನಡೆಸುವಾಗ ಉಸಿರುಗಟ್ಟಿ ಕೊನೆಯುಸಿರೆಳೆದಿದ್ದಾರೆ.
ಫರಿದಾಬಾದ್ ಜಿಲ್ಲೆಯ ಗೌಂಚಿ ಗ್ರಾಮದ ನಿವಾಸಿಯಾದ ದೀಪಕ್, ಚಲಿಸುವ ಸೈಕಲ್ ಮೇಲೆ ನೇರವಾಗಿ ನಿಲ್ಲುವುದು, ಹ್ಯಾಂಡಲ್‌ಬಾರ್‌ಗಳ ಮೇಲೆ ಸಮತೋಲನ ಸಾಧಿಸುವುದು ಹಾಗೂ ಕಣ್ಣು ಮುಚ್ಚಿ ಸವಾರಿ ಮಾಡುವಂತಹ ಸಾಹಸಗಳಿಗೆ ಹೆಸರಾಗಿದ್ದರು. ಖೋರಿ ಕಲಾನ್ ಗ್ರಾಮದಲ್ಲಿ ಸರ್ಕಸ್‌ನ ಕೊನೆಯ ದಿನದ ಅಂಗವಾಗಿ ದೀಪಕ್ ಅವರನ್ನು ವಿಶೇಷ ಚೀಲದೊಳಗೆ ಇರಿಸಿ, ಅಗೆಯಲಾಗಿದ್ದ ಗುಂಡಿಯಲ್ಲಿ ಮುಚ್ಚಿ ಸಮಾಧಿ ಮಾಡಲಾಯಿತು. 24 ಗಂಟೆಗಳ ನಂತರ ಅವರನ್ನು ಸಮಾಧಿಯಿಂದ ಜೀವಂತವಾಗಿ ಹೊರತರಲಾಗುವುದು ಎಂದು ಸರ್ಕಸ್ ಆಯೋಜಕರು ಪ್ರೇಕ್ಷಕರಿಗೆ ಭರವಸೆ ನೀಡಿದ್ದರು.
ಹೊರಬರಲೇ ಇಲ್ಲ ಸಾಹಸಿ
ಭರವಸೆ ನೀಡಿದಂತೆ 24 ಗಂಟೆಗಳ ನಂತರ ದೀಪಕ್ ಅವರನ್ನು ಹೊರಗೆ ತೆಗೆಯಲಿಲ್ಲ. ಪ್ರತ್ಯಕ್ಷದರ್ಶಿ ಸಂಚಿತ್ ಸಿಂಗ್ ಅವರ ಪ್ರಕಾರ, ಪ್ರೇಕ್ಷಕರಿಂದ ಒಟ್ಟು 7,100 ರೂ. ದೇಣಿಗೆ ಸಂಗ್ರಹವಾಗುವವರೆಗೆ ದೀಪಕ್ ಅವರನ್ನು ಹೊರಗೆ ತೆಗೆಯುವುದಿಲ್ಲ ಎಂದು ಆಯೋಜಕರು ಷರತ್ತು ವಿಧಿಸಿದ್ದರು. ಹಣ ಸಂಗ್ರಹಿಸುವ ಹುಚ್ಚಿನಲ್ಲಿ ದೀಪಕ್ ಅವರನ್ನು ಸುಮಾರು 36 ಗಂಟೆಗಳ ಕಾಲ ನೆಲದಡಿಯಲ್ಲೇ ಬಿಡಲಾಯಿತು. ಕೊನೆಗೆ ಸಾರ್ವಜನಿಕರು ಮತ್ತು ಪೊಲೀಸರ ಸಮ್ಮುಖದಲ್ಲಿ ಗುಂಡಿಯನ್ನು ಅಗೆದು ತೆರೆದಾಗ, ದೀಪಕ್ ಉಸಿರುಗಟ್ಟಿ ಮೃತಪಟ್ಟಿರುವುದು ಕಂಡುಬಂದಿದೆ.
ಮತ್ತಷ್ಟು ಓದಿ: ಪೆಟ್ರೋಲ್ ಬಂಕ್ ಸಂಬಳ ಸಾಕಾಗದೆ ಬೈಕ್ ಕಳ್ಳನಾದ ಭೂಪ! 42 ಬೈಕ್ ಜಪ್ತಿ ಮಾಡಿ ಮಾಲೀಕರಿಗೆ ನೀಡಿದ ವಿಜಯಪುರ ಪೊಲೀಸರು
ಆರು ದಿನಗಳ ಕಾಲ ತಮ್ಮನ್ನು ನಗಿಸಿ ರಂಜಿಸಿದ ಯುವಕ, ಆಯೋಜಕರ ನಿರ್ಲಕ್ಷ್ಯ ಹಾಗೂ ಹಣದಾಸೆಯಿಂದಾಗಿ ಹೆಣವಾಗಿ ಹೊರಬಂದಿದ್ದನ್ನು ಕಂಡು ಇಡೀ ಗ್ರಾಮವೇ ಕಣ್ಣೀರಿಟ್ಟಿದೆ. ಇಂತಹ ಪ್ರಾಣಾಪಾಯವಿರುವ ಸಾಹಸ ಪ್ರದರ್ಶನಗಳಿಗೆ ಕನಿಷ್ಠ ಆಮ್ಲಜನಕ ವ್ಯವಸ್ಥೆ ಅಥವಾ ಸುರಕ್ಷತಾ ಕ್ರಮ ಕೈಗೊಳ್ಳದ ಆಯೋಜಕರ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯನ್ನು ದೃಢಪಡಿಸಿರುವ ಜಿಲ್ಲಾ ಪೊಲೀಸ್ ವಕ್ತಾರ ಕೃಷ್ಣ ಕುಮಾರ್, ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಯ್ದೆಯಡಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದು, ಸಮಯಕ್ಕೆ ಸರಿಯಾಗಿ ರಕ್ಷಣೆ ಮಾಡದಿರಲು ಕಾರಣರಾದವರ ವಿರುದ್ಧ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
