
ಬೆಂಗಳೂರು, ಮಾರ್ಚ್ 26: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಬುಧವಾರ ಭಾರಿ ಆಲಿಕಲ್ಲು ಮಳೆ ಸುರಿದಿದೆ. ಬಿಸಿಲು ನಾಡು ಎಂದೇ ಹೆಸರಾದ ಕಲಬುರಗಿ ಮತ್ತು ಧಾರವಾಡ ಜಿಲ್ಲೆಗಳು ಜಮ್ಮು ಕಾಶ್ಮೀರದಂತಹ ಹಿಮಾವೃತ ಪ್ರದೇಶಗಳಂತೆ ಕಾಣಿಸಿ ಗಮನ ಸೆಳೆದಿವೆ. ಕಲಬುರಗಿ ಜಿಲ್ಲೆಯ ಚನ್ನೂರು ಗ್ರಾಮದಲ್ಲಿ ಸುರಿದ ಆಲಿಕಲ್ಲು ಮಳೆಯಿಂದಾಗಿ ಇಡೀ ಪ್ರದೇಶವು ಹಿಮದ ರಾಶಿಯಿಂದ ಆವರಿಸಿತ್ತು. ರಸ್ತೆಗಳ ಮೇಲೆಲ್ಲ ಮಂಜುಗಡ್ಡೆ ರಾಶಿ ಕಾಣಿಸಿದೆ. ಸಾಮಾನ್ಯವಾಗಿ ಕಾಣಸಿಗದ ಈ ಪ್ರಮಾಣದ ಆಲಿಕಲ್ಲು ಮಳೆಯು ಸ್ಥಳೀಯ ಜನಜೀವನದ ಮೇಲೆ ಪರಿಣಾಮ ಬೀರಿದೆ. ವಿಜಯಪುರ ಜಿಲ್ಲೆಯಲ್ಲಿ ಈ ಮಳೆಯಿಂದಾಗಿ ದ್ರಾಕ್ಷಿ ಬೆಳೆ ವ್ಯಾಪಕವಾಗಿ ನಾಶವಾಗಿದ್ದು, ರೈತರಿಗೆ ದೊಡ್ಡ ನಷ್ಟವನ್ನುಂಟು ಮಾಡಿದೆ.