‘ಯಶ್ ರಾಜ್ ಫಿಲ್ಮ್ಸ್’ ನಿರ್ಮಾಣದ ಬಹುನಿರೀಕ್ಷಿತ ‘ಆಲ್ಫಾ’ (Alpha) ಚಿತ್ರದ ಭರ್ಜರಿ ಟ್ರೇಲರ್ ಬುಧವಾರ (ಜೂನ್ 17) ಬಿಡುಗಡೆಯಾಗಿದೆ. ಆಲಿಯಾ ಭಟ್ (Alia Bhatt), ಬಾಬಿ ಡಿಯೋಲ್, ಅನಿಲ್ ಕಪೂರ್ ಮತ್ತು ಶರ್ವರಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಆ್ಯಕ್ಷನ್ ಥ್ರಿಲ್ಲರ್ ಚಿತ್ರದ ಟ್ರೇಲರ್ (Alpha Movie Trailer) ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸುತ್ತಿದೆ. ಇದರೊಂದಿಗೆ ವೈಆರ್‌ಎಫ್ ಸ್ಪೈ ಯೂನಿವರ್ಸ್‌ನ ಪ್ರಮುಖ ಕೊಂಡಿಯಾದ ಹೃತಿಕ್ ರೋಷನ್ (ಕಬೀರ್) ಅವರ ವಿಶೇಷ ಅತಿಥಿ ಪಾತ್ರವೂ ಈ ಟ್ರೇಲರ್ ಮೂಲಕ ರಿವೀಲ್ ಆಗಿದೆ.
ಟ್ರೇಲರ್‌ನಲ್ಲಿ ಆಲಿಯಾ ಭಟ್ ಅವರನ್ನು ‘ಸೀತಾ’ ಎಂಬ ಅತ್ಯಂತ ಅಪಾಯಕಾರಿ ಹುಡುಗಿಯ ಪಾತ್ರದಲ್ಲಿ ಪರಿಚಯಿಸಲಾಗಿದೆ. ಕೇವಲ ಕೊಲ್ಲುವುದಕ್ಕಾಗಿಯೇ ಬೆಳೆದಿರುವ ಸೀತಾ, ತನ್ನದೇ ಗುರು ಹಾಗೂ ಚಿತ್ರದ ಮುಖ್ಯ ವಿಲನ್ ಬಾಬಿ ಡಿಯೋಲ್ ಎದುರು ಸೆಣಸಾಡಲು ನಿಲ್ಲುತ್ತಾಳೆ. ಉಸಿರು ಬಿಗಿಹಿಡಿಯುವಂತಹ ಆ್ಯಕ್ಷನ್ ಸೀನ್‌ಗಳು, ರೇಸಿಂಗ್ ದೃಶ್ಯಗಳನ್ನು ಹೊಂದಿರುವ ‘ಆಲ್ಫಾ’ ಚಿತ್ರವು ಇಬ್ಬರು ಮಹಿಳಾ ಪಾತ್ರಗಳ ಸುತ್ತ ಸುತ್ತುವ ಪಕ್ಕಾ ಕಮರ್ಷಿಯಲ್ ಎಂಟರ್‌ಟೈನರ್ ಆಗಿರಲಿದೆ.
ಟ್ರೇಲರ್‌ನಲ್ಲಿ ಆಲಿಯಾ ಭಟ್ ಜೊತೆಗೆ ನಟಿ ಶರ್ವರಿ ಕೂಡ ಸಾಹಸ ದೃಶ್ಯಗಳಲ್ಲಿ ಅಬ್ಬರಿಸಿದ್ದಾರೆ. ಶರ್ವರಿ ಅವರ ಪಾತ್ರದ ಹಿನ್ನೆಲೆಯನ್ನು ಸಸ್ಪೆನ್ಸ್ ಆಗಿ ಇಡಲಾಗಿದ್ದರೂ, ಬಾಬಿ ಡಿಯೋಲ್‌ನನ್ನು ಮಟ್ಟಹಾಕಲು ಅವರು ಸೀತಾ ಜೊತೆ ಕೈಜೋಡಿಸುವುದು ಸ್ಪಷ್ಟವಾಗಿದೆ. ಇನ್ನು ‘ವಾರ್ 2’ ಚಿತ್ರದಲ್ಲಿ ರಾ ಮುಖ್ಯಸ್ಥ ವಿಕ್ರಾಂತ್ ಕೌಲ್ ಆಗಿ ಕಾಣಿಸಿಕೊಂಡಿದ್ದ ಅನಿಲ್ ಕಪೂರ್ ಇಲ್ಲೂ ಕಾಣಿಸಿಕೊಂಡಿದ್ದು, ಚಿತ್ರದ ರಹಸ್ಯ ‘ಆಲ್ಫಾ ಪ್ರೋಗ್ರಾಂ’ ಜೊತೆಗೆ ನಂಟು ಹೊಂದಿರುವುದು ಕುತೂಹಲ ಮೂಡಿಸಿದೆ.
‘ಆಲ್ಫಾ’ ಚಿತ್ರದ ಟ್ರೇಲರ್:
ಈ ಚಿತ್ರದ ಕಥೆ ಆಧುನಿಕವಾಗಿದ್ದರೂ, ಟ್ರೇಲರ್ ತುಂಬಾ ರಾಮಾಯಣದ ರೂಪಕಗಳನ್ನು ಬಳಸಲಾಗಿದೆ. ಆಲಿಯಾ ಭಟ್ ತನ್ನನ್ನು ತಾನು ಆಧುನಿಕ ಕಾಲದ ಸೀತೆ ಎಂದು ಬಣ್ಣಿಸಿಕೊಳ್ಳುತ್ತಾರೆ. ಲಂಕೆಯನ್ನು ಸುಡಲು ಮತ್ತು ಅಗ್ನಿಪರೀಕ್ಷೆ ಎದುರಿಸಲು ತಾವು ಸಿದ್ಧ ಎಂದು ಸಾರುತ್ತಾರೆ. ಟ್ರೇಲರ್‌ನಲ್ಲಿ ಬರುವ ‘ಈ ಬಾರಿ ಸೀತೆಯೇ ಲಂಕೆ ಸುಡಲು ಬಂದಿದ್ದಾಳೆ’ ಎಂಬ ಡೈಲಾಗ್ ಗಮನ ಸೆಳೆದಿದೆ.
ಇದನ್ನೂ ಓದಿ: ‘ಧುರಂಧರ್’ ಬಗ್ಗೆ ಮೌನ, ಆದ್ರೆ ಆಲಿಯಾ ಸಿನಿಮಾಗೆ ಹೊಗಳಿಕೆ: ಟ್ರೋಲ್ ಆದ ಶಾರುಖ್ ಖಾನ್
ಏಕ್ ಥಾ ಟೈಗರ್, ಟೈಗರ್ ಜಿಂದಾ ಹೈ, ಟೈಗರ್ 3, ವಾರ್, ವಾರ್ 2 ಮತ್ತು ಪಠಾಣ್ ಚಿತ್ರಗಳ ನಂತರ ವೈಆರ್‌ಎಫ್ ಸ್ಪೈ ಯೂನಿವರ್ಸ್‌ನ 7ನೇ ಚಿತ್ರವಾಗಿ ‘ಆಲ್ಫಾ’ ಮೂಡಿಬರುತ್ತಿದೆ. ಉದಯ್ ಚೋಪ್ರಾ ಅವರು ಬರೆದ ಕಥೆ ಹೊಂದಿರುವ ಈ ಚಿತ್ರಕ್ಕೆ ಸೌಮಿಲ್ ಶುಕ್ಲಾ ಮತ್ತು ಶ್ರೀಧರ್ ರಾಘವನ್ ಚಿತ್ರಕಥೆ ಬರೆದಿದ್ದಾರೆ. ಹಿರಿಯ ನಿರ್ದೇಶಕ ರಾಹುಲ್ ರವೈಲ್ ಅವರ ಪುತ್ರ ಶಿವ ರವೈಲ್ ಈ ಚಿತ್ರವನ್ನು ನಿರ್ದೇಶಿಸಿದ್ದು, ಜುಲೈ 3ರಂದು ಚಿತ್ರಮಂದಿರಗಳಲ್ಲಿ ಅಬ್ಬರಿಸಲು ಸಜ್ಜಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.