ಭಾರತ ಮತ್ತು ಆಸ್ಟ್ರೇಲಿಯಾ ದೇಶಗಳ ಕ್ರೀಡಾ ಇತಿಹಾಸದಲ್ಲಿ ಅತ್ಯಂತ ಮಹತ್ವದ ಹಾಗೂ ರೋಮಾಂಚನಕಾರಿ ಜಂಟಿ ಒಪ್ಪಂದವೊಂದು ಪ್ರಕಟವಾಗಿದೆ. ಆಸ್ಟ್ರೇಲಿಯಾದ ಅತ್ಯಂತ ಯಶಸ್ವಿ ಟಿ20 ಟೂರ್ನಿಯಾದ ‘ಬಿಗ್ ಬ್ಯಾಷ್ ಲೀಗ್’ (BBL) ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತದ ಮಣ್ಣಿನಲ್ಲಿ ಪಂದ್ಯವಾಡಲು ಸಜ್ಜಾಗಿದೆ. ಇದಕ್ಕೆ ಪ್ರತಿಯಾಗಿ ಭಾರತದ ಪ್ರತಿಷ್ಠಿತ ಟೂರ್ನಿ ‘ಇಂಡಿಯನ್ ಪ್ರೀಮಿಯರ್ ಲೀಗ್‘ (IPL) ಪಂದ್ಯಗಳನ್ನು ಆಸ್ಟ್ರೇಲಿಯಾದಲ್ಲಿ ಆಯೋಜಿಸಲು ಅಲ್ಲಿನ ಕ್ರಿಕೆಟ್ ಮಂಡಳಿ ಮುಕ್ತ ಆಹ್ವಾನ ನೀಡಿದೆ ಎಂದು ಆಸ್ಟ್ರೇಲಿಯಾದ ಖ್ಯಾತ ಪತ್ರಿಕೆ ದಿ ಏಜ್ ವರದಿ ಮಾಡಿದೆ.
ಚೆನ್ನೈನಲ್ಲಿ ಬಿಬಿಎಲ್!
ಮೆಲ್ಬೋರ್ನ್ ಕ್ರಿಕೆಟ್ ಮಂಡಳಿಯಲ್ಲಿ (MCG) ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಈ ಐತಿಹಾಸಿಕ ಒಪ್ಪಂದವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಈ ಒಪ್ಪಂದದ ಪ್ರಕಾರ, ಬಿಗ್ ಬ್ಯಾಷ್ ಲೀಗ್ನ ಉದ್ಘಾಟನಾ ಪಂದ್ಯ ಭಾರತದಲ್ಲಿ ನಡೆಯುವುದು ಖಚಿತವಾಗಿದೆ.
- ಬಿಬಿಎಲ್ನ ಬಲಿಷ್ಠ ತಂಡಗಳಾದ ಮೆಲ್ಬೋರ್ನ್ ರೆನೆಗೇಡ್ಸ್ ಮತ್ತು ಪರ್ತ್ ಸ್ಕಾರ್ಚರ್ಸ್ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
- ಡಿಸೆಂಬರ್ 12, 2026 ರಂದು ಭಾರತೀಯ ಕಾಲಮಾನ ಮಧ್ಯಾಹ್ನ 2:40ಕ್ಕೆ ಭಾರತದಲ್ಲಿ ಬಿಗ್ ಬ್ಯಾಷ್ ಲೀಗ್ನ ಉದ್ಘಾಟನಾ ಪಂದ್ಯ ನಡೆಯಲಿದೆ.
- ಚೆನ್ನೈ ಸೂಪರ್ ಕಿಂಗ್ಸ್ ತಂಡದ ತವರಾದ ಎಂ.ಎ. ಚಿದಂಬರಂ (ಚೆಪಾಕ್) ಸ್ಟೇಡಿಯಂ ಬಿಗ್ ಬ್ಯಾಷ್ ಲೀಗ್ನ ಉದ್ಘಾಟನಾ ಪಂದ್ಯಕ್ಕೆ ಆತಿಥ್ಯವಹಿಸಲಿದೆ.
- ವಿದೇಶಿ ಫ್ರಾಂಚೈಸಿ ಕ್ರಿಕೆಟ್ ಲೀಗ್ನ ಅಧಿಕೃತ ಪಂದ್ಯವೊಂದು ಭಾರತದಲ್ಲಿ ಆಯೋಜನೆಗೊಳ್ಳುತ್ತಿರುವುದು ಇದೇ ಮೊಟ್ಟಮೊದಲ ಬಾರಿ ಎಂಬುದು ವಿಶೇಷ.
ಕ್ರಿಕೆಟ್ ಆಸ್ಟ್ರೇಲಿಯಾ ಈ ಪಂದ್ಯವನ್ನು ಕೇವಲ ಒಂದು ಪ್ರದರ್ಶನ ಪಂದ್ಯವನ್ನಾಗಿ ಪರಿಗಣಿಸುತ್ತಿಲ್ಲ. ಬದಲಾಗಿ ಭಾರತದ ಭಾರಿ ದೊಡ್ಡ ಕ್ರಿಕೆಟ್ ಮಾರುಕಟ್ಟೆಯನ್ನು ತಲುಪಲು ಇದನ್ನು ವಾರ್ಷಿಕ ಸರಣಿಯನ್ನಾಗಿ ಮಾಡಲು ಚಿಂತನೆ ನಡೆಸಿದೆ. ಈ ಮೂಲಕ ಉಭಯ ದೇಶಗಳ ನಡುವಿನ ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಸಂಬಂಧಗಳನ್ನು ವೃದ್ಧಿಸುವ “G’day Namaste” ಉತ್ಸವದ ಭಾಗವಾಗಿ ಈ ಪಂದ್ಯವನ್ನು ವಿನ್ಯಾಸಗೊಳಿಸಲು ನಿರ್ಧರಿಸಿದೆ.
ಆಸ್ಟ್ರೇಲಿಯಾದಲ್ಲಿ ಐಪಿಎಲ್!
ಬಿಬಿಎಲ್ ಪಂದ್ಯವನ್ನು ಭಾರತದಲ್ಲಿ ನಡೆಸುತ್ತಿರುವ ಹಿನ್ನಲೆ, ಕ್ರಿಕೆಟ್ ಆಸ್ಟ್ರೇಲಿಯಾ ಸಂಸ್ಥೆಯು “ಭಾರತದ ಐಪಿಎಲ್ ಪಂದ್ಯವೊಂದನ್ನು ನಮ್ಮ ದೇಶದಲ್ಲಿ ನಡೆಸಿ” ಎಂದು ಬಿಸಿಸಿಐ ಮುಂದೆ ಮುಕ್ತ ಪ್ರಸ್ತಾಪ ಇಟ್ಟಿದೆ. ಮೂಲಗಳ ಪ್ರಕಾರ, ಆಸ್ಟ್ರೇಲಿಯಾದ ಪ್ರಸಿದ್ಧ ಅಡಿಲೇಡ್ ಓವಲ್ ಮೈದಾನದಲ್ಲಿ ಐಪಿಎಲ್ ಪಂದ್ಯ ನಡೆಸಲು ಮಾತುಕತೆಗಳು ನಡೆಯುತ್ತಿವೆ.
ಇದನ್ನೂ ಓದಿ: ಅರ್ಜೆಂಟೀನಾ ಪರ ‘ಆಡುತ್ತಿರುವ’ ರೆಫರಿ… ಗಂಭೀರ ಆರೋಪ!
ಆದರೆ, ಬಿಸಿಸಿಐ ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಗ್ರೀನ್ ಸಿಗ್ನಲ್ ನೀಡಿಲ್ಲ. ಇದಾಗ್ಯೂ ಆಸ್ಟ್ರೇಲಿಯನ್ ಪ್ರತಿಕೆಗಳು ಮುಂಬರುವ ದಿನಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನ ಪಂದ್ಯವೊಂದು ಕಾಂಗರೂನಾಡಿನಲ್ಲಿ ನಡೆಯಲಿದೆ ಎಂದು ವರದಿ ಮಾಡಿದೆ. ಹೀಗಾಗಿ ಐಪಿಎಲ್ ಸೀಸನ್-20ರ ಪಂದ್ಯವೊಂದು ಆಸ್ಟ್ರೇಲಿಯಾದಲ್ಲಿ, ಅದರಲ್ಲೂ ಅಡಿಲೇಡ್ನಲ್ಲಿ ನಡೆದರೂ ಅಚ್ಚರಿಪಡಬೇಕಿಲ್ಲ.