ಭಾನುವಾರ ನಡೆದ ಮಹಿಳಾ ಟಿ20 ವಿಶ್ವಕಪ್ 2026 ರ 30 ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಭಾರತ ಮಹಿಳಾ ತಂಡಗಳು ಮುಖಾಮುಖಿಯಾಗಿದ್ದವು. ಸೆಮಿಫೈನಲ್ ದೃಷ್ಟಿಯಿಂದ ಈ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲಲೇಬೇಕಿತ್ತು. ಆದರೆ ಬಲಿಷ್ಠ ಆಸ್ಟ್ರೇಲಿಯಾದ ವಿರುದ್ಧ ಮುಗ್ಗರಿಸಿದ ಹರ್ಮನ್ಪ್ರೀತ್ ಕೌರ್ ಪಡೆ 6 ವಿಕೆಟ್‌ಗಳ ಸೋಲು ಅನುಭವಿಸಿತು. ಈ ಸೋಲಿನೊಂದಿಗೆ ಭಾರತ ಟಿ20 ವಿಶ್ವಕಪ್ ಫೈನಲ್ ರೇಸ್ನಿಂದ ಹೊರಬಿದ್ದರೆ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಎ ಗುಂಪಿನಿಂದ ಸೆಮಿಫೈನಲ್‌ಗೆ ಅರ್ಹತೆ ಪಡೆದವು. ಗುಂಪು ಹಂತದಲ್ಲಿ ಆಸ್ಟ್ರೇಲಿಯಾ ಅಜೇಯವಾಗಿ ಉಳಿದರೆ, ದಕ್ಷಿಣ ಆಫ್ರಿಕಾ 8 ಅಂಕಗಳೊಂದಿಗೆ ಎರಡನೇ ಸ್ಥಾನ ಮತ್ತು ಭಾರತ 6 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದವು. ಇದೀಗ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಿದರೆ, ದಕ್ಷಿಣ ಆಫ್ರಿಕಾ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
