ಬೆಂಗಳೂರು, (ಏಪ್ರಿಲ್ 25): ಯೋಜನೆ ಮತ್ತು ಸಾಂಖಿತ ಇಲಾಖೆ ಸಚಿವ ಡಿ ಸುಧಾಕರ್ (Minister D Sudhakar) ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಸದ್ಯ ಬೆಂಗಳೂರಿನ (Bengaluru) ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶ್ವಾಸಕೋಶ ಸೋಂಕಿನಿಂದ ಬಳಲುತ್ತಿರುವ ಸುಧಾಕರ್ ಅವರ ಆರೋಗ್ಯ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಇಂದು ಏಪ್ರಿಲ್ 25) ಕಿಮ್ಸ್ ಆಸ್ಪತ್ರಗೆ ಭೇಟಿ ನೀಡಿ ಸುಧಾಕರ್ ಅವರ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದುಕೊಂಡರು.
ಡಿ.ಸುಧಾಕರ್ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸಚಿವ ಡಿ.ಸುಧಾಕರ್ಗೆ ಇನ್ನೂ ಪ್ರಜ್ಞೆ ಬಂದಿಲ್ಲ. ಶ್ವಾಸಕೋಶ ಕಸಿ ಮಾಡಬೇಕಾದರೆ ಬ್ರೈನ್ ಕಾನ್ಸಿಯಸ್ ಇರಬೇಕು. ಡಿ.ಸುಧಾಕರ್ಗೆ ಪ್ರಜ್ಞೆ ಬಂದಮೇಲೆ ವೈದ್ಯರು ನಿರ್ಧಾರ ಮಾಡಲಿದ್ದಾರೆ.ವೆಂಟಿಲೇಷನ್ನಲ್ಲಿ ಬೇರೆ ಎಲ್ಲಾ ಆರ್ಗನ್ಸ್ ಸ್ಟೇಬಲ್ ಆಗಿವೆ. ಆದ್ರೆ, ಬ್ರೈನ್ ಮಾತ್ರ ಕಾನ್ಸಿಯಸ್ ಆಗಿಲ್ಲ.ನಾಳೆ (ಏಪ್ರಿಲ್ 26) ಕಿಮ್ಸ್ ಆಸ್ಪತ್ರೆಯ ವೈದ್ಯರು ಸಿಟಿ ಸ್ಕ್ಯಾನ್ ಮಾಡಲಿದ್ದು, ಸಿಟಿ ಸ್ಕ್ಯಾನ್ ನಂತರ ಕಂಡಿಷನ್ ಏನು ಅಂತಾ ಗೊತ್ತಾಗುತ್ತದೆ ಎಂದು ತಿಳಿಸಿದರು.
