ಆಹಾರ ಕಲಬೆರಕೆ ಕುರಿತ ‘ದಿ ಇಂಡಿಯಾ ಸ್ಟೋರಿ’ ಸಿನಿಮಾಗೆ ಲೀಗಲ್ ನೋಟಿಸ್; ಕಾರಣ ಏನು? – Kannada News | Legal Notice to The India Story Movie ft Shreyas Talpade Kajal Aggarwal

ಬಾಲಿವುಡ್‌ನ ಪ್ರಸಿದ್ಧ ನಟ ಶ್ರೇಯಸ್ ತಲ್ಪಾಡೆ (Shreyas Talpade) ಹಾಗೂ ನಟಿ ಕಾಜಲ್ ಅಗರ್ವಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ, ಬಿಡುಗಡೆಗೆ ಸಿದ್ಧವಾಗಿರುವ ‘ದಿ ಇಂಡಿಯಾ ಸ್ಟೋರಿ: ಸ್ಲೋ ಪಾಯ್ಸನ್ ಇನ್ ಪ್ರೋಗ್ರೆಸ್’ (The India Story) ಸಿನಿಮಾ ಈಗ ಕಾನೂನು ಸಂಕಷ್ಟಕ್ಕೆ ಸಿಲುಕಿದೆ. ಚಿತ್ರದ ಟೀಸರ್ ಮತ್ತು ಪ್ರಚಾರದ ಇತರೆ ಕಂಟೆಂಟ್​ಗಳಲ್ಲಿ ಭಾರತೀಯ ಕೃಷಿ ಮತ್ತು ಡೈರಿ ಉದ್ಯಮವನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿ ಚಿತ್ರತಂಡಕ್ಕೆ ಲೀಗಲ್ ನೋಟಿಸ್ (Legal Notice) ನೀಡಲಾಗಿದೆ. ‘ಅಗ್ರಿ ಬಿಸಿನೆಸ್ ಸೆಂಟರ್’ ಮಾಲೀಕರಾದ ಭವೇಶ್ ಸೋಧಾ ಅವರ ಪರವಾಗಿ ವಕೀಲ ಹಿರಣ್ಯ ಪಾಂಡೆ ಅವರು ಜೂನ್ 15ರಂದು ಜೀ ಸ್ಟುಡಿಯೋಸ್, ಎಂಐಜಿ ಪ್ರೊಡಕ್ಷನ್ & ಸ್ಟುಡಿಯೋಸ್ ಹಾಗೂ ಚಿತ್ರದ ನಿರ್ಮಾಪಕರಿಗೆ 18 ಪುಟಗಳ ಸುದೀರ್ಘ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.

ಭಾರತದ ಕೃಷಿ ವ್ಯವಸ್ಥೆಯನ್ನು ‘ಸ್ಲೋ ಪಾಯ್ಸನ್’ ಎಂದು ಚಿತ್ರೀಕರಿಸಿರುವುದು, ಕೀಟನಾಶಕಗಳ ಬಳಕೆ, ಆಹಾರ ಕಲಬೆರಕೆ ಮತ್ತು ಕ್ಯಾನ್ಸರ್ ಪ್ರಕರಣಗಳ ಹೆಚ್ಚಳದ ಬಗ್ಗೆ ಸಿನಿಮಾದಲ್ಲಿ ವೈಜ್ಞಾನಿಕ ಆಧಾರವಿಲ್ಲದ ಅಂಕಿ-ಅಂಶಗಳನ್ನು ನೀಡಿ ಉತ್ಪ್ರೇಕ್ಷೆ ಮಾಡಲಾಗಿದೆ ಎಂದು ನೋಟಿಸ್‌ನಲ್ಲಿ ಗಂಭೀರವಾಗಿ ಆಕ್ಷೇಪಿಸಲಾಗಿದೆ. ಇಂತಹ ದೃಶ್ಯಗಳು ದೇಶದ ಲಕ್ಷಾಂತರ ರೈತರು, ಹೈನುಗಾರರು, ಕೋಳಿ ಸಾಕಾಣಿಕೆದಾರರು ಮತ್ತು ಕೃಷಿ ಉದ್ಯಮಿಗಳ ಗೌರವಕ್ಕೆ ಧಕ್ಕೆ ತರುತ್ತವೆ ಹಾಗೂ ಸಾರ್ವಜನಿಕರಲ್ಲಿ ಅನಗತ್ಯ ಭೀತಿ ಹುಟ್ಟಿಸುತ್ತವೆ ಎಂದು ದೂರುದಾರರು ವಾದಿಸಿದ್ದಾರೆ.

ಪ್ರಮುಖವಾಗಿ ಮೂರು ದೃಶ್ಯ ಹಾಗೂ ಪ್ರತಿಪಾದನೆಗಳನ್ನು ನೋಟಿಸ್‌ನಲ್ಲಿ ಪ್ರಶ್ನಿಸಲಾಗಿದೆ. ಭಾರತದಲ್ಲಿ ಕೀಟನಾಶಕಗಳನ್ನು ಅತಿಯಾಗಿ ಬಳಸಲಾಗುತ್ತಿದೆ ಎಂದು ಟೀಸರ್‌ನಲ್ಲಿ ಬಿಂಬಿಸಲಾಗಿದೆ. ಆದರೆ, ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಪ್ರತಿ ಹೆಕ್ಟೇರ್‌ಗೆ ಬಳಸುವ ಕೀಟನಾಶಕದ ಪ್ರಮಾಣ ಗಣನೀಯವಾಗಿ ಕಡಿಮೆಯಿದೆ ಎಂದು ಲೀಗಲ್ ನೋಟಿಸ್​ನಲ್ಲಿ ಹೇಳಲಾಗಿದೆ. ಭಾರತದಲ್ಲಿ ಸಿಗುವ ಬಹುತೇಕ ಹಾಲು ಕಲಬೆರಕೆಯಾಗಿದೆ ಎಂದು ಸಿನಿಮಾದಲ್ಲಿ ತೋರಿಸಿರುವುದನ್ನು ದೂರುದಾರರು ವಿರೋಧಿಸಿದ್ದಾರೆ. ಸತ್ತ ಕೋಳಿಗೆ ಇಂಜೆಕ್ಷನ್ ನೀಡುತ್ತಿರುವ ದೃಶ್ಯ ಟೀಸರ್‌ನಲ್ಲಿದ್ದು, ಇದು ವೈಜ್ಞಾನಿಕವಾಗಿ ಅಸಾಧ್ಯ ಮತ್ತು ಜನರನ್ನು ದಾರಿ ತಪ್ಪಿಸುವಂತಿದೆ ಎಂದು ಹೇಳಲಾಗಿದೆ. ಅಲ್ಲದೆ, ಕೃಷಿ ಪದ್ಧತಿಗೂ ಕ್ಯಾನ್ಸರ್ ಹೆಚ್ಚಳಕ್ಕೂ ನೇರ ಸಂಬಂಧ ಕಲ್ಪಿಸಲು ಸೂಕ್ತ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಚಿತ್ರದಲ್ಲಿ ಬಳಸಿರುವ ಅಂಕಿ-ಅಂಶಗಳು ಮತ್ತು ದೃಶ್ಯಗಳಿಗೆ ಇರುವ ಮೂಲ ಆಧಾರ ಹಾಗೂ ವೈಜ್ಞಾನಿಕ ಪುರಾವೆಗಳನ್ನು ಬಹಿರಂಗಪಡಿಸಬೇಕು ಎಂದು ನೋಟಿಸ್‌ನಲ್ಲಿ ಒತ್ತಾಯಿಸಲಾಗಿದೆ. ಇದರೊಂದಿಗೆ, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಂದ ಈ ಟೀಸರ್ ಅನ್ನು ತಕ್ಷಣವೇ ತೆಗೆದುಹಾಕಬೇಕು ಎಂದು ಕೋರಲಾಗಿದೆ. ಈ ನೋಟಿಸ್‌ನ ಪ್ರತಿಯನ್ನು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಅಂದರೆ, ಸೆನ್ಸಾರ್ ಮಂಡಳಿಗೂ ಕಳುಹಿಸಲಾಗಿದೆ. ವಿವಾದಿತ ದೃಶ್ಯಗಳನ್ನು ತೆಗೆದುಹಾಕುವವರೆಗೆ ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ನೀಡಬಾರದು. ಒಂದು ವೇಳೆ ಈಗಾಗಲೇ ನೀಡಿದ್ದರೆ ಅದನ್ನು ಹಿಂಪಡೆಯಬೇಕು ಎಂದು ಮನವಿ ಮಾಡಲಾಗಿದೆ.

ಇದನ್ನೂ ಓದಿ: ಭಾರತದ ಆಹಾರ ಕಲಬೆರಕೆ ದಂಧೆ ಬಿಚ್ಚಿಡಲಿದೆ ‘ದಿ ಇಂಡಿಯಾ ಸ್ಟೋರಿ’; ಗಮನ ಸೆಳೆದ ಟೀಸರ್

ಚಿತ್ರತಂಡಕ್ಕೆ ಈ ಬೇಡಿಕೆಗಳನ್ನು ಈಡೇರಿಸಲು 7 ದಿನಗಳ ಕಾಲಾವಕಾಶ ನೀಡಲಾಗಿದ್ದು, ತಪ್ಪಿದರೆ ಚಿತ್ರದ ಬಿಡುಗಡೆಗೆ ತಡೆ ಕೋರಿ ಹೈಕೋರ್ಟ್‌ನಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ದೂರುದಾರರು ಎಚ್ಚರಿಕೆ ನೀಡಿದ್ದಾರೆ. ಚೇತನ್ ಡಿ.ಕೆ. ನಿರ್ದೇಶನದ ಈ ಸಿನಿಮಾ ಜುಲೈ 24ರಂದು ಬಿಡುಗಡೆಯಾಗಲು ಸಜ್ಜಾಗಿದೆ. ಆದರೆ ಕಾನೂನಿನ ತೊಡಕು ಎದುರಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *