ಆಹಾರ ನಿಗಮದ ಗೋದಾಮುಗಳಿಗೆ ಲೋಕಾಯುಕ್ತ ಶಾಕ್! ಬಡವರ ಅಕ್ಕಿ ಲೂಟಿ ಮಾಡಿದ ಅಧಿಕಾರಿಗಳ ಕಳ್ಳಾಟ ಬಯಲು – Kannada News | Lokayukta Raid in Bengaluru: Massive Ration Rice Scam Unearthed at 27 Food Warehouses

ಆಹಾರ ನಿಗಮದ ಗೋದಾಮುಗಳಿಗೆ ಲೋಕಾಯುಕ್ತ ಶಾಕ್!Image Credit source: Deccan herald

ಬೆಂಗಳೂರು, ಜೂನ್ 13: ನಗರದಲ್ಲಿ (Bengaluru) ಪಡಿತರ ಅಕ್ಕಿ ಮತ್ತು ಆಹಾರ ಧಾನ್ಯಗಳ ವಿತರಣೆಯಲ್ಲಿ ನಡೆಯುತ್ತಿದ್ದ ಭಾರಿ ಅಕ್ರಮ ಹಾಗೂ ಕಳ್ಳಾಟವನ್ನು ಲೋಕಾಯುಕ್ತ ಪೊಲೀಸರು ಪತ್ತೆಹಚ್ಚಿದ್ದಾರೆ. ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಹಾಗೂ ಉಪಲೋಕಾಯುಕ್ತರಾದ ಕೆ.ಎನ್. ಫಣೀಂದ್ರ ಮತ್ತು ಬಿ. ವೀರಪ್ಪ ಅವರ ನೇತೃತ್ವದಲ್ಲಿ ಬೆಂಗಳೂರಿನ 22 ಹಾಗೂ ಬೆಂಗಳೂರು ಗ್ರಾಮಾಂತರದ 5 ಸೇರಿದಂತೆ ಒಟ್ಟು 27 ಕಡೆಗಳಲ್ಲಿ ಏಕಕಾಲಕ್ಕೆ ಆಹಾರ ಸರಬರಾಜು ನಿಗಮದ ಗೋದಾಮುಗಳ ಮೇಲೆ ಶುಕ್ರವಾರ ಭಾರಿ ದಾಳಿ ನಡೆಸಲಾಗಿದೆ.

ಮುಖ್ಯಾಂಶಗಳು

  • ಬೆಂಗಳೂರಿನ 27 ಆಹಾರ ಗೋದಾಮುಗಳ ಮೇಲೆ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ಭಾರಿ ದಾಳಿ ನಡೆಸಿದ್ದಾರೆ.
  • ಸಾವಿರಾರು ಮೂಟೆ ಪಡಿತರ ಅಕ್ಕಿ ನಾಪತ್ತೆಯಾಗಿದ್ದು, ಅಧಿಕಾರಿಗಳ ಭಾರಿ ಕಳ್ಳಾಟ ಬಯಲಾಗಿದೆ.
  • ಗೋದಾಮುಗಳಲ್ಲಿ ಹಮಾಲಿ ಕಾರ್ಮಿಕರಿಗೆ ಜೀವ ವಿಮೆ ಮತ್ತು ಇಎಸ್‌ಐ ನೀಡದೆ ವಂಚಿಸಲಾಗಿದೆ.

ಶಾಂತಿನಗರದ ಆಹಾರ ಇಲಾಖೆ ಗೋಡೌನ್

ಶಾಂತಿನಗರದ ಗೋದಾಮಿನಲ್ಲಿ ಪರಿಶೀಲನೆ ನಡೆಸಿದಾಗ ದಾಖಲೆಗಳಿಗೂ ಅಲ್ಲಿನ ದಾಸ್ತಾನಿಗೂ ಭಾರಿ ವ್ಯತ್ಯಾಸ ಕಂಡುಬಂದಿದೆ. ಇಲ್ಲಿ 50 ಕೆಜಿಯ ಸುಮಾರು 1,130 ಅಕ್ಕಿ ಮೂಟೆಗಳಿಗೂ ನೀಡಿರುವ ಲೆಕ್ಕಕ್ಕೂ ಸಂಬಂಧವೇ ಇಲ್ಲ. ಈ ಬಗ್ಗೆ ಸ್ಥಳದಲ್ಲಿದ್ದ ಅಧಿಕಾರಿಯನ್ನು ಕೇಳಿದರೆ ಅವರ ಬಳಿ ಉತ್ತರವೂ ಇಲ್ಲ. ಅಷ್ಟೇ ಅಲ್ಲದೆ, ಗೋದಾಮಿನಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದ 5 ಜನ ಹಮಾಲಿ ಕಾರ್ಮಿಕರಿಗೆ ಯಾವುದೇ ಜೀವ ವಿಮೆ ಸೌಲಭ್ಯ ಕಲ್ಪಿಸಿಲ್ಲ ಎಂಬುದು ಬೆಳಕಿಗೆ ಬಂದಿದೆ. ಈ ಮೂಲಕ ಕಾರ್ಮಿಕ ಇಲಾಖೆಯ ಅಧಿಕಾರಿಗಳು ತಮ್ಮ ಕರ್ತವ್ಯಲೋಪ ಎಸಗಿರುವುದು ಸ್ಪಷ್ಟವಾಗಿದೆ.

ಬೊಬ್ಬನಹಳ್ಳಿ ಸಗಟು ಮಳಿಗೆ

ಬೆಂಗಳೂರು ದಕ್ಷಿಣದ ಬೊಬ್ಬನಹಳ್ಳಿ ಗೋದಾಮಿನ ಮೇಲೆ ಲೋಕಾಯುಕ್ತ ದಾಳಿ ಮಾಡಿದ ವೇಳೆ ಉಸ್ತುವಾರಿ ಅಧಿಕಾರಿ ಅಚ್ಯುತ್ ಯಾವುದೇ ಮಾಹಿತಿ ನೀಡದೆ ಅನಧಿಕೃತವಾಗಿ ಗೈರುಹಾಜರಾಗಿದ್ದರು. ಸ್ಥಳದಲ್ಲಿದ್ದ ಮತ್ತೊಬ್ಬ ಸಿಬ್ಬಂದಿ ಶಿವಲಿಂಗಯ್ಯ ಸ್ವೀಕರಿಸಿದ ಅಕ್ಕಿ ಮೂಟೆಗಳ ಬಗ್ಗೆ ಸರಿಯಾದ ಮಾಹಿತಿ ನೀಡುವಲ್ಲಿ ವಿಫಲರಾಗಿದ್ದಾರೆ. ಇದೇ ವೇಳೆಗೆ ನಿಯಮಬಾಹಿರವಾಗಿ ಲಾರಿಯೊಂದಕ್ಕೆ 25 ಟನ್ ಅಕ್ಕಿ ಮೂಟೆಗಳನ್ನು ಲೋಡ್ ಮಾಡುತ್ತಿರುವುದು ಪತ್ತೆಯಾಗಿದೆ. ಇಲ್ಲಿ ಕೆಲಸ ಮಾಡುವ 10 ಜನ ಹಮಾಲಿ ಕಾರ್ಮಿಕರಿಗೂ ಯಾವುದೇ ಜೀವ ವಿಮೆಯ ರಕ್ಷಣೆ ಇರಲಿಲ್ಲ.

ಬಸವನಗುಡಿ ಗೋಡೌನ್

ಬಸವನಗುಡಿ ಗೋದಾಮಿನಲ್ಲಿ ಅಧಿಕಾರಿಗಳು ನೀಡಿದ ಲಿಖಿತ ಲೆಕ್ಕಕ್ಕಿಂತ ಅತ್ಯಂತ ಕಡಿಮೆ ಪ್ರಮಾಣದ ಅಕ್ಕಿ ಮೂಟೆಗಳು ಇರುವುದು ಪತ್ತೆಯಾಗಿದೆ. ದಾಳಿಯ ವೇಳೆ ಅಧಿಕಾರಿಗಳ ಬಳಿ ಇದ್ದ ನಗದಿಗೆ ಸಂಬಂಧಿಸಿದಂತೆ ಯಾವುದೇ ಸರಿಯಾದ ದಾಖಲೆ ಅಥವಾ ಸಮಜಾಯಿಷಿ ನೀಡಿಲ್ಲ. ಇದರೊಂದಿಗೆ ಗೋದಾಮಿನ ಹಮಾಲಿ ಕಾರ್ಮಿಕರಿಗೆ ಕನಿಷ್ಠ ಅಗತ್ಯಗಳಾದ ಜೀವ ವಿಮೆ, ಇ.ಎಸ್.ಐ (ESI) ಹಾಗೂ ಪಿ.ಎಫ್ (PF) ಸೌಲಭ್ಯಗಳನ್ನು ನೀಡದೆ ವಂಚಿಸಿರುವುದು ಕಂಡುಬಂದಿದೆ.

ಹನುಮಂತನಗರ ಗೋಡೌನ್

ಹನುಮಂತನಗರದ ಗೋದಾಮಿನಲ್ಲಿ ಲೋಕಾಯುಕ್ತ ಅಧಿಕಾರಿಗಳು ರಿಜಿಸ್ಟರ್ ಹಾಗೂ ದಾಸ್ತಾನು ಪರಿಶೀಲಿಸಿದಾಗ ದೊಡ್ಡ ಮಟ್ಟದ ವಂಚನೆ ಬೆಳಕಿಗೆ ಬಂದಿದೆ. ಸರ್ಕಾರಿ ದಾಖಲೆಗಳಲ್ಲಿ ಎಷ್ಟು ಪ್ರಮಾಣದ ಅಕ್ಕಿ ಹಾಗೂ ರಾಗಿ ಇದೆ ಎಂದು ಉಲ್ಲೇಖಿಸಲಾಗಿತ್ತೋ ಅಸಲಿಗೆ ಗೋದಾಮಿನಲ್ಲಿ ಅಷ್ಟು ಮೂಟೆಗಳು ಇರಲೇ ಇಲ್ಲ ಎಂಬುದು ಲೋಕಾಯುಕ್ತ ಅಧಿಕಾರಿಗಳ ಕಣ್ಣಿಗೆ ಬಿದ್ದಿದೆ. ಹೀಗಾಗಿ ಗೋಡೌನ್​ನಲ್ಲಿ ಪಡಿತರ ಧಾನ್ಯಗಳು ದುರಪಯೋಗಗೊಂದಡಿರುವುದು ದೃಢಪಟ್ಟಿದೆ. ಇದರ ಜೊತೆಗೆ ಇಲ್ಲಿ ಕೆಲಸ ಮಾಡುವ ನಾಲ್ಕು ಜನ ಹಮಾಲಿ ಕಾರ್ಮಿಕರಿಗೂ ಜೀವ ವಿಮೆ, ಇ.ಎಸ್.ಐ ಹಾಗೂ ಪಿ.ಎಫ್ ಸೌಲಭ್ಯಗಳನ್ನು ಒದಗಿಸದೆ ಶೋಷಣೆ ಮಾಡಲಾಗುತ್ತಿತ್ತು ಎಂಬುದು ದಾಳಿ ವೇಳೆ ತಿಳಿದುಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *