ಆ. 14ರ ಬದಲು ಇಂದೇ ರಾಜೀನಾಮೆ ನೀಡಿದ್ದೇಕೆ ಸಭಾಪತಿ?Image Credit source: Tv9 Kannada
ಬೆಂಗಳೂರು, ಆಗಸ್ಟ್ 07: ಕರ್ನಾಟಕ ವಿಧಾನ ಪರಿಷತ್ಗೆ ನೂತನ ಸಭಾಪತಿಯಾಗಿ ಸಲೀಂ ಅಹ್ಮದ್ ಹೆಸರನ್ನು ಎಐಸಿಸಿ ಘೋಷಣೆ ಮಾಡಿದ ಬಳಿಕ ನಡೆದ ರಾಜಕೀಯ ಬೆಳವಣಿಗಳ ನಡುವೆ, ಸಭಾಪತಿ ಸ್ಥಾನಕ್ಕೆ ಆಗಸ್ಟ್ 14ರಂದು ರಾಜೀನಾಮೆ ನೀಡೋದಾಗಿ ಬಸವರಾಜ ಹೊರಟ್ಟಿ ಘೋಷಿಸಿದ್ದರು. ಆದರೆ ಅಚ್ಚರಿಯ ಬೆಳವಣಿಗೆಗಳ ನಡುವೆ ಇಂದೇ ಅವರು ತಮ್ಮ ಹುದ್ದೆ ತೊರೆದಿದ್ದಾರೆ. ಸರ್ಕಾರದಿಂದ ಅವರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂಬ ವಿಪಕ್ಷಗಳ ಆರೋಪಗಳ ನಡುವೆಯೂ, ಸ್ವ ಇಚ್ಛೆಯಿಂದ ಹುದ್ದೆ ತೊರೆಯುತ್ತಿರೋದಾಗಿ ಅವರು ತಿಳಿಸಿದ್ದಾರೆ.
ಇವತ್ತೇ ಹೊರಟ್ಟಿ ರಾಜೀನಾಮೆ ಯಾಕೆ?
ಸಿಎಂ ಮತ್ತುಕೆಪಿಸಿಸಿ ಅಧ್ಯಕ್ಷರು ಇವತ್ತೇ ರಾಜೀನಾಮೆ ಕೊಡಿ ಎಂದ ಕಾರಣ ಕೊಟ್ಟಿದ್ದೇನೆ. ಯಾವಾಗ ಕೊಟ್ರು ಒಂದೇ, ಹಾಗಾಗಿ ಇಂದೇ ರಾಜೀನಾಮೆ ಕೊಟ್ಟೆ. ಪರಿಷತ್ ಸಭಾಪತಿಯಾಗಿ ಏನು ಕೆಲಸ ಮಾಡಬೇಕೋ ಮಾಡಿದ್ದೇನೆ. ರಾಜೀನಾಮೆ ಕೊಡಲಿಲ್ಲ ಅಂದ್ರೆ ಅವಿಶ್ವಾಸ ನಿರ್ಣಯ ಮಂಡಿಸುತ್ತಿದ್ದರು. ಹಂಗಾಮಿ ಸಭಾಪತಿ ಮಾಡ್ತಾರೋ ಬಿಡ್ತಾರೋ ಅವರಿಗೆ ಬಿಟ್ಟಿದ್ದು ಎಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸಿಗರ ಮನವೊಲಿಕೆಗೆ ಮಣಿದ ಬಸವರಾಜ ಹೊರಟ್ಟಿ: ಸಭಾಪತಿ ಸ್ಥಾನಕ್ಕೆ ರಾಜೀನಾಮೆ
ರಾಜೀನಾಮೆಗೂ ಮುನ್ನ ಸಿದ್ದರಾಮಯ್ಯ ಅವರ ಜೊತೆ ಮಾತನಾಡಿದ್ದೇನೆ. ಏನು ಮಾಡ್ತೀಯಾ ನೋಡಪ್ಪ ಎಂದು ಅವರು ಹೇಳಿದ್ದರು. ವಿಧಾನಪರಿಷತ್ನಲ್ಲಿ ನಾನು 10-12 ಸಭಾಪತಿಗಳನ್ನು ನೋಡಿದ್ದೇನೆ. ನಾನೂ ಸಭಾಪತಿ ಆಗಿ ಎಲ್ಲಾ ಕಾರ್ಯ ಕಲಾಪಗಳನ್ನು ಮಾಡಿದ್ದೇನೆ. ಸದನದಲ್ಲಿ ಎಲ್ಲರಿಗೂ ಅವಕಾಶ ನೀಡಿದ್ದೇನೆ. ರಾತ್ರಿ 2 ಗಂಟೆಯವರೆಗೂ ಸದನ ನಡೆಸಿರುವ ಉದಾಹರಣೆ ಇದೆ ಎಂದವರು ಹೇಳಿದ್ದಾರೆ. ಅಧಿಕಾರ ಪೂರ್ಣಗೊಳ್ಳದೆ ಮಧ್ಯದಲ್ಲಿಯೇ ಸ್ಥಾನ ಬಿಡುವಾಗ ನೋವು ಸಹಜ. ಆಕಸ್ಮಿಕ ಸಿನಿಮಾ ನೋಡಿದ್ದೆ, ಅದೇ ರೀತಿ ಈಗ ಆಗಿದೆ ಎಂದವರು ಬೇಸರ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 3:16 pm, Fri, 7 August 26
