ಬೆಂಗಳೂರು, ಆಗಸ್ಟ್ 13: ಸ್ವಾತಂತ್ರ್ಯ ದಿನಾಚರಣೆಯಂದು (Independence Day) ವಿಧಾನಸೌಧದ ಮುಂಭಾಗದಲ್ಲಿ ‘ಫ್ರೀಡಂ ಹಬ್ಬ’ ಕಾರ್ಯಕ್ರಮ ಆಯೋಜನೆಯಾಗಿದ್ದು, ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಡೆಯಲಿದೆ. ಈ ಹಬ್ಬಕ್ಕೆ ಸಾವಿರಾರು ಜನರು ಆಗಮಿಸುವ ನಿರೀಕ್ಷೆಯಿರುವುದರಿಂದ ವಿಧಾನಸೌಧದ ಸುತ್ತಮುತ್ತಲಿನ ರಸ್ತೆಗಳಲ್ಲಿ ಸುಗಮ ಸಂಚಾರಕ್ಕಾಗಿ ಬೆಂಗಳೂರು ಸಂಚಾರ ಪೊಲೀಸರು ವಾಹನ ಸಂಚಾರ ಮಾರ್ಗಗಳನ್ನು (traffic diversions) ಮಾರ್ಪಾಡು ಮಾಡಿದ್ದಾರೆ.
ಸಂಚಾರ ನಿರ್ಬಂಧ
ಫ್ರೀಡಂ ಹಬ್ಬ ಕಾರ್ಯಕ್ರಮ ಹಿನ್ನೆಲೆ ಅಂಬೇಡ್ಕರ್ ರಸ್ತೆಯ ಮೂಲಕ ಕೆ.ಆರ್. ಸರ್ಕಲ್ ಕಡೆಗೆ ಹೋಗುವ ಹಾಗೂ ಕೆ.ಆರ್. ಸರ್ಕಲ್‌ನಿಂದ ಅಂಬೇಡ್ಕರ್ ರಸ್ತೆಯ ಮೂಲಕ ಶಿವಾಜಿನಗರ ಮತ್ತು ವಸಂತನಗರ ಕಡೆಗೆ ತೆರಳುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. (ವಿಧಾನಸೌಧ ಮುಂಭಾಗದ ಎರಡು ಬದಿಯ ರಸ್ತೆಗಳನ್ನು ಬಂದ್ ಮಾಡಲಾಗುವುದು).
ಪರ್ಯಾಯ ಮಾರ್ಗಗಳು ಹೀಗಿವೆ
- ಅಂಬೇಡ್ಕರ್ ರಸ್ತೆಯಿಂದ ಕೆ.ಆರ್. ಸರ್ಕಲ್ ಕಡೆಗೆ ಹೋಗುವ ವಾಹನಗಳು ಬಾಳೆಕುಂದ್ರಿ ಜಂಕ್ಷನ್‌ನಿಂದ ಕನ್ನಿಂಗ್‌ಹ್ಯಾಮ್ ರಸ್ತೆಯ ಮೂಲಕ ಚಂದ್ರಿಕಾ ಸರ್ಕಲ್‌ನಲ್ಲಿ ಎಡತಿರುವು ಪಡೆದು ಬಸವೇಶ್ವರ ಜಂಕ್ಷನ್ ಹಾಗೂ ಪ್ಯಾಲೇಸ್ ರಸ್ತೆಯ ಮುಖಾಂತರ ಕೆ.ಆರ್. ಸರ್ಕಲ್ ಕಡೆಗೆ ಸಂಚರಿಸಬಹುದು.
- ಅಥವಾ ಬಾಳೆಕುಂದ್ರಿ ಜಂಕ್ಷನ್‌ನಿಂದ ಸಿಟಿಒ, ಕ್ವೀನ್ಸ್ ಜಂಕ್ಷನ್, ಸಿದ್ದಲಿಂಗಯ್ಯ ಜಂಕ್ಷನ್, ಆರ್.ಆರ್.ಎಂ.ಆರ್ ರಸ್ತೆ ಹಾಗೂ ಕಾರ್ಪೊರೇಷನ್ ಸರ್ಕಲ್ ಮುಖಾಂತರ ತೆರಳಬಹುದು.
- ಬಿಆರ್‌ವಿ ಕಡೆಯಿಂದ ಬರುವ ವಾಹನಗಳು ಬಿಆರ್‌ವಿ – ಅನಿಲ್ ಕುಂಬ್ಳೆ ಸರ್ಕಲ್ ಬಳಿ ಬಲತಿರುವು ಪಡೆದು ಕ್ವೀನ್ಸ್ ಜಂಕ್ಷನ್, ಸಿದ್ದಲಿಂಗಯ್ಯ ಜಂಕ್ಷನ್, ಆರ್.ಆರ್.ಎಂ.ಆರ್ ರಸ್ತೆ ಹಾಗೂ ಕಾರ್ಪೊರೇಷನ್ ಸರ್ಕಲ್ ಮುಖಾಂತರ ಸಂಚರಿಸಬಹುದು.
ಇದನ್ನೂ ಓದಿ: Video: ಸ್ವಾತಂತ್ರೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಭಾರತೀಯ ಕಲಾ ವೈವಿಧ್ಯದ ಅನಾವರಣ
- ಬಿಆರ್‌ವಿ ಕಡೆಯಿಂದ ಬರುವ ವಾಹನಗಳು ರಾಜಭವನ ರಸ್ತೆಯ ಮೂಲಕ ಚಾಲುಕ್ಯ ಸರ್ಕಲ್‌ನಲ್ಲಿ ಎಡತಿರುವು ಪಡೆದು ಪ್ಯಾಲೇಸ್ ರಸ್ತೆಯ ಮುಖಾಂತರ ಕೆ.ಆರ್. ಸರ್ಕಲ್ ಕಡೆಗೆ ಸಂಚರಿಸಲು ಸೂಚಿಸಲಾಗಿದೆ.
- ಅಂಬೇಡ್ಕರ್ ರಸ್ತೆಯ ಮೂಲಕ ಶಿವಾಜಿನಗರ ಕಡೆಗೆ ತೆರಳುವ ವಾಹನಗಳು ಮಹಾರಾಣಿ ಮೇಲ್ಸೇತುವೆ ಬಳಿ ಎಡತಿರುವು ಪಡೆದು ಪ್ಯಾಲೇಸ್ ರಸ್ತೆಯ ಬಸವೇಶ್ವರ ಸರ್ಕಲ್ ಮುಖಾಂತರ ವಸಂತನಗರ ಹಾಗೂ ಶಿವಾಜಿನಗರ ಕಡೆಗೆ ಸಂಚರಿಸಬಹುದು.
- ಅಥವಾ ಕೆ.ಆರ್. ಸರ್ಕಲ್‌ನಿಂದ ನೃಪತುಂಗ ರಸ್ತೆಯ ಮುಖಾಂತರ ಕಾರ್ಪೊರೇಷನ್ ಸರ್ಕಲ್ ಮತ್ತು ಕೆ.ಬಿ. ರಸ್ತೆ (ಖಾಸಾ ಸುಬಾರಾವ್ ರಸ್ತೆ) ಮುಖಾಂತರ ಶಿವಾಜಿನಗರ ಕಡೆಗೆ ತೆರಳಬಹುದು.
ಫ್ರೀಡಂ ಹಬ್ಬ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಸೀಮಂತ್ ಕುಮಾರ್ ಸಿಂಗ್
ಇನ್ನು ಫ್ರೀಡಂ ಹಬ್ಬ ಕಾರ್ಯಕ್ರಮ ವಿಚಾರವಾಗಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾಧ್ಯಮದವರೊಂದಿಗೆ ಮಾತನಾಡಿದ್ದು, ‘12 ವರ್ಷದ ಮಕ್ಕಳಿದ್ದರೆ ನೋಂದಣಿ ಇರಲಿದೆ. ಇದುವರೆಗೂ 18 ಸಾವಿರ ಜನರು ಆನ್ಲೈನ್ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಒಟ್ಟು ಮೂರು ಭಾಗಗಳಾಗಿ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12 ರಿಂದ 3 ಗಂಟೆ ಒಂದು ಭಾಗ, ಮಧ್ಯಾಹ್ನ 3 ರಿಂದ ಸಂಜೆ 6 ಗಂಟೆವರೆಗೂ ಎರಡನೇ ಭಾಗ ಮತ್ತು ಸಂಜೆ 6ರ ನಂತರ ಮೂರನೇ ಭಾಗ ಎಂದು ವಿಂಗಡನೆ ಮಾಡಲಾಗಿದ್ದು, ಒಂದೊಂದು ಭಾಗದಲ್ಲೂ ಒಂದೊಂದು ಬಗೆಯ ಕಾರ್ಯಕ್ರಮ ಇರಲಿದೆ’ ಎಂದು ಮಾಹಿತಿ ನೀಡಿದರು.
ಐಪಿಎಲ್ ಪಂದ್ಯ, ಹೊಸ ವರ್ಷದ ಸಂಭ್ರಮಾಚರಣೆ ರೀತಿ ಬಂದೋಬಸ್ತ್
ಇನ್ನು ‘ಭದ್ರತೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ‘ವಿಧಾನಸೌಧದ ಮುಂಭಾಗ ಬಿಗಿ ಪೊಲೀಸ್ ಬಂದೋಬಸ್ತ್ ಹೆಚ್ಚಿನ ಸಂಖ್ಯೆ ಇರಲಿದೆ. ಐಪಿಎಲ್ ಪಂದ್ಯ, ಹೊಸ ವರ್ಷದ ಸಂಭ್ರಮಾಚರಣೆ ರೀತಿ ಬಿಗಿ ಬಂದೋಬಸ್ತ್ ಭದ್ರತೆ ಇರಲಿದೆ. ಕ್ಯೂಆರ್ ಕೋಡ್ನಲ್ಲಿ ಇಂತಿಷ್ಟೇ ಸಮಯ ಎಂದು ನಮೂದಿಸಲಾಗಿರುತ್ತೆ. ಆ ಸಮಯದಲ್ಲಿ ಮಾತ್ರ ಅವರಿಗೆ ಅವಕಾಶ ನೀಡಲಾಗುವುದು. 3000ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತೆಗೆ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಆಗಸ್ಟ್ 15 ರಂದು ಬೆಳಗ್ಗೆ ಕೆ.ಆರ್. ವೃತ್ತದಿಂದ ತಿಮ್ಮಯ್ಯ ವೃತ್ತದವರೆಗೂ ಟ್ರಾಫಿಕ್ ನಿರ್ಬಂಧ ಇರಲಿದೆ. ಸಾರ್ವಜನಿಕರು ಪೊಲೀಸರು ಸೂಚಿಸಿದ ನಿಯಮ ಪಾಲಿಸುವಂತೆ ಮನವಿ’ ಮಾಡಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 5:34 pm, Thu, 13 August 26
