2026 ರ ಮಹಿಳಾ ಟಿ20 ವಿಶ್ವಕಪ್ (Women’s T20 World Cup 2026) ಜೂನ್ 12 ರಿಂದ ಇಂಗ್ಲೆಂಡ್ನಲ್ಲಿ ಆರಂಭವಾಗುತ್ತಿದೆ. ಈ ಪಂದ್ಯಾವಳಿಗಾಗಿ ಟೀಂ ಇಂಡಿಯಾ ಕೂಡ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ. ಅದರ ಭಾಗವಾಗಿ ಭಾರತ ವನಿತಾ ಪಡೆ, ಆತಿಥೇಯ ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಿತು. ಆದರೆ ಆ ಸರಣಿಯನ್ನು 2-1 ಅಂತರದಿಂದ ಕಳೆದುಕೊಂಡಿತು. ಇದಾದ ನಂತರ ಎರಡು ಅಭ್ಯಾಸ ಪಂದ್ಯಗಳನ್ನು ಆಡಿತು. ಅದರಲ್ಲಿ ಒಂದು ಪಂದ್ಯದಲ್ಲಿ ಗೆದ್ದು ಒಂದು ಪಂದ್ಯದಲ್ಲಿ ಸೋತಿತು. ಆ ಒಂದು ಸೋಲು ಇಂಗ್ಲೆಂಡ್ ತಂಡದ ವಿರುದ್ಧವೇ ಬಂದಿತು. ವಿಶ್ವಕಪ್ ಆರಂಭಕ್ಕೂ ಮುನ್ನ ಭಾರತ ವನಿತಾ ಪಡೆ ಸೋಲುಗಳಿಗೆ ಕೊರಳೊಡ್ಡಿರುವುದು ಆಡಳಿತ ಮಂಡಳಿಯ ಚಿಂತೆ ಹೆಚ್ಚಿಸಿದೆ. ಅದರಲ್ಲೂ ತಂಡದ ಉಪನಾಯಕಿ ಸ್ಮೃತಿ ಮಂಧಾನ (Smriti Mandhana) ಅವರ ಕಳಪೆ ಫಾರ್ಮ್ ಮ್ಯಾನೇಜ್ಮೆಂಟ್ನ ನಿದ್ದೆಗೆಡಿಸಿದೆ.
2026 ರ ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಆದರೆ ಅದಕ್ಕೂ ಮೊದಲು, ಮಂಧಾನ ಅವರ ಬ್ಯಾಟ್ ಸಂಪೂರ್ಣವಾಗಿ ಮೌನವಾಗಿರುವುದು ಹೊಸ ತಲೆನೋವು ತಂದಿದೆ. ಇಂಗ್ಲೆಂಡ್ ಪ್ರವಾಸದಿಂದ ಅಭ್ಯಾಸ ಪಂದ್ಯಗಳವರೆಗೆ, ಸ್ಮೃತಿ ಮಂಧಾನ ಪ್ರತಿ ರನ್ಗೂ ಕಷ್ಟಪಡುತ್ತಿರುವುದು ಕಂಡುಬಂದಿದೆ, ಇದು ಟೀಂ ಇಂಡಿಯಾಕ್ಕೆ ಎಚ್ಚರಿಕೆಯ ಸಂಕೇತವಾಗಿದೆ.
ಇಂಗ್ಲೆಂಡ್ ಪ್ರವಾಸದಲ್ಲಿ ಮಂಕಾದ ಮಂಧಾನ
ವಾಸ್ತವವಾಗಿ ಟಿ20 ವಿಶ್ವಕಪ್ಗೆ ಸಿದ್ಧರಾಗಲು ಮತ್ತು ಅಲ್ಲಿನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಹರ್ಮನ್ಪ್ರೀತ್ ಪಡೆ ಸಾಕಷ್ಟು ಮುಂಚಿತವಾಗಿಯೇ ಇಂಗ್ಲೆಂಡ್ಗೆ ತಲುಪಿತ್ತು. ಆದಾಗ್ಯೂ, ಈ ಪ್ರವಾಸ ಮಂಧಾನಾಗೆ ದುಃಸ್ವಪ್ನವಾಗಿ ಪರಿಣಮಿಸಿದೆ. ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಖಾತೆ ತೆರೆಯದೆ ಪೆವಿಲಿಯನ್ ಸೇರಿದ್ದ ಮಂಧಾನ, ಎರಡನೇ ಪಂದ್ಯದಲ್ಲಿ 32 ರನ್ ಗಳಿಸುವ ಮೂಲಕ ಹಳೆಯ ಫಾರ್ಮ್ಗೆ ಮರಳುವ ಭರವಸೆಯನ್ನು ಮೂಡಿಸಿದ್ದರು. ಆದರೆ ಮೂರನೇ ಮತ್ತು ಅಂತಿಮ ಟಿ20ಯಲ್ಲಿ ಕೇವಲ 8 ರನ್ ಕಲೆಹಾಕಲಷ್ಟೇ ಶಕ್ತರಾಗಿದ್ದರು. ಇದರ ನಂತರ, ವೆಸ್ಟ್ ಇಂಡೀಸ್ ವಿರುದ್ಧದ ವಿಶ್ವಕಪ್ನ ಮೊದಲ ಅಭ್ಯಾಸ ಪಂದ್ಯದಲ್ಲಿ 39 ರನ್ ಬಾರಿಸಿದ್ದ ಸ್ಮೃತಿ, ಇಂಗ್ಲೆಂಡ್ ವಿರುದ್ಧದ ಎರಡನೇ ಅಭ್ಯಾಸ ಪಂದ್ಯದಲ್ಲಿ ಕೇವಲ 1 ರನ್ ಗಳಿಸುವ ಮೂಲಕ ಮತ್ತೆ ನಿರಾಶೆ ಮೂಡಿಸಿದರು.
‘ಆ ಒಂದು ಪಂದ್ಯಕ್ಕೆ ಏಕೆ ಅಷ್ಟೊಂದು ಮನ್ನಣೆ’?; ವಿಶ್ವಕಪ್ಗೂ ಮುನ್ನ ಸ್ಮೃತಿ ಮನವಿ
ತಂಡಕ್ಕೆ ತಲೆನೋವಾದ ಮಂಧಾನ ಕಳಪೆ ಫಾರ್ಮ್
ಮಂಧಾನ ಅವರನ್ನು ಭಾರತೀಯ ಬ್ಯಾಟಿಂಗ್ ಕ್ರಮಾಂಕದ ಬೆನ್ನೆಲುಬು ಎಂದೇ ಪರಿಗಣಿಸಲಾಗಿದೆ. ಪವರ್ಪ್ಲೇನಲ್ಲಿ ತಂಡಕ್ಕೆ ಆಕ್ರಮಣಕಾರಿ ಮತ್ತು ಬಲವಾದ ಆರಂಭ ನೀಡುವ ಜವಾಬ್ದಾರಿ ಅವರ ಮೇಲಿದೆ. ಮಂಧಾನ ಒಂದೇ ಒಂದು ಅರ್ಧಶತಕ ಗಳಿಸದಿರುವುದು ಕ್ರೀಸ್ನಲ್ಲಿ ಸಮಯ ಕಳೆದರೂ ದೊಡ್ಡ ಇನ್ನಿಂಗ್ಸ್ಗಳನ್ನು ಪರಿವರ್ತಿಸುವಲ್ಲಿ ಅವರು ವಿಫಲರಾಗುತ್ತಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಮಂಧಾನ ಅವರ ಫಾರ್ಮ್ ಇದೇ ರೀತಿ ಮುಂದುವರಿದರೆ, ಟೀಂ ಇಂಡಿಯಾದ ಸಮಸ್ಯೆಗಳು ಹೆಚ್ಚಾಗಬಹುದು. ಹೀಗಾಗಿ ಮಂಧಾನ ಬೇಗನೇ ತಮ್ಮ ಹಳೆಯ ಲಯಕ್ಕೆ ಬರಲಿ, ತಂಡಕ್ಕೆ ಮತ್ತೊಂದು ವಿಶ್ವಕಪ್ ಗೆಲ್ಲಿಸಿಕೊಡಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.
