ಇಂದಿನಿಂದ ಜೂನ್ 11 ರವರೆಗೆ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ವರುಣನ ಅಬ್ಬರ: ಮೀನುಗಾರರಿಗೆ, ಪ್ರವಾಸಿಗರಿಗೆ ಬಿಗ್​​​ ಅಲರ್ಟ್ – Kannada News

ಬೆಂಗಳೂರು, ಜೂ5: ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರ ಆರಂಭವಾಗಿದ್ದು, ಮುಂದಿನ ಒಂದು ವಾರದ ಕಾಲ ವಿವಿಧ ಜಿಲ್ಲೆಗಳಲ್ಲಿ ವರುಣನ ಆರ್ಭಟ ಜೋರಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಜೂನ್ 5 ರಿಂದ ಅಂದರೆ ಇಂದಿನಿಂದಲ್ಲೇ ಜೂನ್ 11 ರವರೆಗೆ ಕರ್ನಾಟಕದ ಒಳನಾಡು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಹವಾಮಾನ ಇಲಾಖೆಯ ವರದಿಯ ಪ್ರಕಾರ, ಒಳನಾಡಿನ ಜಿಲ್ಲೆಗಳ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಕನಿಷ್ಠ 64.5 ಮಿಲಿಮೀಟರ್‌ನಿಂದ ಗರಿಷ್ಠ 115.4 ಮಿಲಿಮೀಟರ್‌ನಷ್ಟು ಭಾರಿ ಪ್ರಮಾಣದ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ಮಳೆಯ ತೀವ್ರತೆ ಹೆಚ್ಚಿರಲಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಮುನ್ನೆಚ್ಚರಿಕೆಯಾಗಿ ಈ ಭಾಗಗಳಲ್ಲಿ ‘ಯೆಲ್ಲೋ ಅಲರ್ಟ್’ ಘೋಷಿಸಿದೆ.

ಧಾರಾಕಾರ ಮಳೆಯ ಜೊತೆಗೆ ಸಿಡಿಲು, ಮಿಂಚು ಹಾಗೂ ಬಿರುಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಮತ್ತು ರೈತರು ಅನಗತ್ಯವಾಗಿ ಹೊರಗಡೆ ತಿರುಗಾಡದಂತೆ ಹಾಗೂ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ಕೋರಲಾಗಿದೆ. ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನ ಹಾಗೂ ನದಿ, ಹಳ್ಳ-ಕೊಳ್ಳಗಳ ಪಕ್ಕದಲ್ಲಿರುವ ನಾಗರಿಕರು ಹವಾಮಾನ ಇಲಾಖೆಯ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಿ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗಿ ಎಂದು ಹೇಳಿದೆ.

ಇನ್ನು ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮಿತಿಮೀರಲಿದ್ದು, ಜೂನ್ 5 ರಿಂದ ಜೂನ್ 11 ರವರೆಗೆ ಭಾರಿ ಹಾಗೂ ಅತಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಮುನ್ಸೂಚನೆ ನೀಡಿದೆ. ಕರಾವಳಿ ತೀರದಲ್ಲಿ ಹವಾಮಾನದ ಏರುಪೇರು ತೀವ್ರವಾಗಿರಲಿರುವ ಕಾರಣ ಮುನ್ನೆಚ್ಚರಿಕೆಯಾಗಿ ಈ ಭಾಗಗಳಲ್ಲಿ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಹವಾಮಾನ ಇಲಾಖೆಯ ವರದಿಯ ಪ್ರಕಾರ, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಕನಿಷ್ಠ 64.5 ಮಿಲಿಮೀಟರ್‌ನಿಂದ ಆರಂಭವಾಗಿ, ಗರಿಷ್ಠ 204.4 ಮಿಲಿಮೀಟರ್‌ನಷ್ಟು ಅತ್ಯಂತ ಭಾರಿ ಪ್ರಮಾಣದ ಮಳೆಯಾಗುವ ಅಪಾಯವಿದೆ. ಬಿರುಗಾಳಿಯ ವೇಗವು ಹೆಚ್ಚಿರಲಿದ್ದು, ಕಡಲ ತೀರದಲ್ಲಿ ಅಲೆಗಳ ಅಬ್ಬರ ಜೋರಾಗಿರಲಿದೆ.

ಇದನ್ನೂ ಓದಿ: ರಾಜ್ಯದ ಹಲವೆಡೆ ವರುಣನ ಅಬ್ಬರ, ವಿವಿಧ ಜಿಲ್ಲೆಗಳಿಗೆ ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ಘೋಷಣೆ!

ಮೀನುಗಾರರು ಹಾಗೂ ಸಾರ್ವಜನಿಕರಿಗೆ ಹವಾಮಾನ ಇಲಾಖೆ ನೀಡಿದ ಪ್ರಮುಖ ಸೂಚನೆಗಳು:

  • ಸಮುದ್ರದಲ್ಲಿ ಗಾಳಿಯ ವೇಗ ಮತ್ತು ಅಲೆಗಳ ಅಬ್ಬರ ಜೋರಾಗಿರುವುದರಿಂದ ಜೂನ್ 11 ರವರೆಗೆ ಮೀನುಗಾರರು ಯಾವುದೇ ಕಾರಣಕ್ಕೂ ಕಡಲಿಗೆ ಇಳಿಯಬಾರದು ಎಂದು ಸೂಚಿಸಲಾಗಿದೆ.
  • ಧಾರಾಕಾರ ಮಳೆಯಿಂದಾಗಿ ಹಠಾತ್ ಪ್ರವಾಹದ ಭೀತಿ ಎದುರಾಗುವ ಸಾಧ್ಯತೆ ಇರುವುದರಿಂದ ನದಿ ಪಾತ್ರದ ಹಾಗೂ ತಗ್ಗು ಪ್ರದೇಶಗಳ ನಿವಾಸಿಗಳು ತಕ್ಷಣವೇ ಸುರಕ್ಷಿತ ಸ್ಥಳಗಳತ್ತ ಗಮನ ಹರಿಸಬೇಕಾಗಿ ವಿನಂತಿಸಲಾಗಿದೆ.
  • ಕರಾವಳಿಯ ಪ್ರಸಿದ್ಧ ಬೀಚ್‌ಗಳಿಗೆ ಭೇಟಿ ನೀಡುವ ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಜಾಗರೂಕತೆ ವಹಿಸಲು ಮತ್ತು ಸ್ಥಳೀಯ ಜಿಲ್ಲಾಡಳಿತದ ನಿಯಮಗಳನ್ನು ಪಾಲಿಸಲು ಕೋರಲಾಗಿದೆ.
  • ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಕರಾವಳಿ ಜಿಲ್ಲೆಗಳ ಜಿಲ್ಲಾಡಳಿತಗಳು ಮತ್ತು ವಿಪತ್ತು ನಿರ್ವಹಣಾ ತಂಡಗಳು ಸಂಪೂರ್ಣ ಸನ್ನದ್ಧವಾಗಿವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *