ಇಂದು ಬಜೆಟ್ ಮಂಡನೆಗೆ ಸಚಿವೆ ನಿರ್ಮಲಾ ಸೀತಾರಾಮನ್ ಕಾಂಜೀವರಂ ಸೀರೆಯನ್ನೇ ಉಟ್ಟಿದ್ದೇಕೆ? – Kannada News | Why Finance Minister Nirmala Sitharaman wore Kanjeevaram Saree for Budget 2026 presentation

ನವದೆಹಲಿ, ಫೆಬ್ರವರಿ 1: ಕಳೆದ 8 ಬಾರಿ ಬಜೆಟ್ ಮಂಡನೆ ಮಾಡಿದಾಗಲೂ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರ ಸೀರೆಯ ಬಗ್ಗೆ ಬಹಳ ಚರ್ಚೆಗಳಾಗಿತ್ತು. ಅವರು ಉಡುವ ಸೀರೆಯ ಬಣ್ಣ, ವಿನ್ಯಾಸಕ್ಕೆ ಒಂದೊಂದು ಅರ್ಥವಿರುತ್ತಿತ್ತು. ಈ ಬಾರಿಯೂ ಅವರು ಯಾವ ಬಣ್ಣದ ಸೀರೆ ಉಡುತ್ತಾರೆ ಎಂಬುದರ ಬಗ್ಗೆ ಭಾರೀ ಕುತೂಹಲವಿತ್ತು. ಪ್ರತಿ ಬಾರಿಯೂ ಕೈಮಗ್ಗದ ಸೀರೆಗೆ ಆದ್ಯತೆ ನೀಡುವ ನಿರ್ಮಲಾ ಸೀತಾರಾಮನ್ ಇಂದು ಕೈಮಗ್ಗದ ಕಾಂಜೀವರಂ ರೇಷ್ಮೆ ಸೀರೆಯನ್ನು ಉಟ್ಟಿದ್ದರು. ನೇರಳೆ ಬಣ್ಣದ ಈ ಸೀರೆ ರಾಜಕೀಯವಾಗಿಯೂ ಬಹಳ ಪ್ರಾಮುಖ್ಯತೆ ಪಡೆದಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಬಜೆಟ್ ದಿನದಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉಡುವ ಸೀರೆ ಕೇವಲ ಫ್ಯಾಷನ್‌ ದೃಷ್ಟಿಯಿಂದ ಮಾತ್ರವಲ್ಲ ನಮ್ಮ ದೇಶದ ಸಂಸ್ಕೃತಿಯ ದೃಷ್ಟಿಯಿಂದಲೂ ಬಹಳ ಮುಖ್ಯವಾಗಿರುತ್ತದೆ. ಇಂದು ಅವರು ಉಟ್ಟಿದ್ದ ಕಾಂಜೀವರಂ ಸೀರೆಯು ಹಲವು ಶತಮಾನಗಳ ಭಾರತೀಯ ನೇಯ್ಗೆಯನ್ನು ಪ್ರತಿನಿಧಿಸುತ್ತದೆ. ಇದರ ಜೊತೆಗೆ ನಿರ್ಮಲಾ ಸೀತಾರಾಮನ್ ಉಡುವ ಸೀರೆಯ ಆಯ್ಕೆಗೆ ರಾಜಕೀಯದ ಮುಖವೂ ಇದೆ ಎಂಬುದು ನಿಮಗೆ ಗೊತ್ತಾ? ಅವರು ಪ್ರತಿ ಬಾರಿ ಬಜೆಟ್ ವೇಳೆ ಸೀರೆಯನ್ನು ಆಯ್ಕೆ ಮಾಡುವಾಗ ಯಾವ ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದೆಯೋ ಅದೇ ರಾಜ್ಯದ ಕೈಮಗ್ಗದ ಅಥವಾ ಸಾಂಪ್ರದಾಯಿಕ ಸೀರೆಯನ್ನು ಉಡುವ ಪದ್ಧತಿಯನ್ನು ರೂಢಿಸಿಕೊಂಡು ಬಂದಿದ್ದಾರೆ.

ತಮಿಳುನಾಡು ಅವರ ತವರು ರಾಜ್ಯವಾಗಿರುವುದರಿಂದ ಮತ್ತು ಈ ವರ್ಷದ ಕೊನೆಯಲ್ಲಿ ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವುದರಿಂದ ನಿರ್ಮಲಾ ಸೀತಾರಾಮನ್ ಈ ಬಾರಿ ತಮಿಳುನಾಡಿನ ಕಾಂಜೀವರಂ ಸೀರೆಯನ್ನು ಬಜೆಟ್ ಮಂಡನೆಗೆ ಆಯ್ಕೆ ಮಾಡಿಕೊಂಡಿದ್ದಾರೆ. ಮಂಗಳಗಿರಿ ಕಾಟನ್ ಸೀರೆಯಿಂದ ಕಾಂಜೀವರಂ ರೇಷ್ಮೆ ಸೀರೆಯವರೆಗೆ ಅವರು ಬಜೆಟ್ ಮಂಡನೆಗೆ ಉಟ್ಟಿರುವ ಪ್ರತಿ ಸೀರೆಯು ಕರಕುಶಲತೆ, ಸಂಸ್ಕೃತಿ ಮತ್ತು ರಾಜಕೀಯದ ಕಥೆಯನ್ನು ಹೇಳುತ್ತದೆ.

ಇದನ್ನೂ ಓದಿ: ಕೇಂದ್ರ ಬಜೆಟ್ 2026: ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ

ನೀವು ಗಮನಿಸುವುದಾದರೆ, 2026ರ ಕೊನೆಯಲ್ಲಿ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಹೀಗಾಗಿ, ನಿರ್ಮಲಾ ಸೀತಾರಾಮನ್ ಕಾಂಜೀವರಂ ರೇಷ್ಮೆ ಸೀರೆ ಉಟ್ಟಿದ್ದಾರೆ.

2025ರಲ್ಲಿ ಬಿಹಾರದಲ್ಲಿ ವಿಧಾನಸಭಾ ಚುನಾವಣೆ ನಡೆದಿತ್ತು. ಆ ವರ್ಷ ನಿರ್ಮಲಾ ಬಿಹಾರದ ಮಧುಬನಿ ಕಲಾಕೃತಿಯಿಂದ ಅಲಂಕರಿಸಲ್ಪಟ್ಟ ಕೈಮಗ್ಗದ ರೇಷ್ಮೆ ಸೀರೆ ಉಟ್ಟಿದ್ದರು.

2024ರ ಮಧ್ಯಂತರ ಬಜೆಟ್ ಮಂಡನೆಗೆ ನಿರ್ಮಲಾ ಸೀತಾರಾಮನ್ ಪಶ್ಚಿಮ ಬಂಗಾಳದ ಕಾಂತ ಕಸೂತಿಯಿದ್ದ ನೀಲಿ ಟಸ್ಸರ್ ರೇಷ್ಮೆ ಸೀರೆ ಉಟ್ಟಿದ್ದರು. ಆ ವರ್ಷ ಲೋಕಸಭಾ ಚುನಾವಣೆ ನಡೆದಿತ್ತು.

2024ರ ಪೂರ್ಣ ಬಜೆಟ್ ಮಂಡನೆಗೆ ಆಂಧ್ರ ಪ್ರದೇಶದ ಬಿಳಿಯ ಬಣ್ಣದ ಕೈಮಗ್ಗದ ಮಂಗಳಗಿರಿ ಕಾಟನ್ ಸೀರೆಯನ್ನು ಉಟ್ಟಿದ್ದರು. ಆ ವರ್ಷ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆ ನಡೆದಿತ್ತು.

2023ರಲ್ಲಿ ಕರ್ನಾಟಕದ ಸಾಂಪ್ರದಾಯಿಕ ಕಸೂತಿ ಇರುವ ರೇಷ್ಮೆ ಸೀರೆಯನ್ನು ಉಟ್ಟಿದ್ದರು. ಆ ವರ್ಷ ಕರ್ನಾಟಕ ವಿಧಾನಸಭಾ ಚುನಾವಣೆ ನಡೆದಿತ್ತು.

ಇದನ್ನೂ ಓದಿ: Union Budget 2026: 9 ಬಜೆಟ್​ 9 ಬಣ್ಣದ ಸೀರೆಗಳು; ನಿರ್ಮಲಾ ಸೀತಾರಾಮನ್ ‘ಬಜೆಟ್‌ ಸೀರೆ’ಯ ವೈಶಿಷ್ಟ್ಯ ಇಲ್ಲಿದೆ

2022ರಲ್ಲಿ ಒಡಿಶಾದ ಬೊಮ್ಕೈ ಸೀರೆ ಹಾಗೂ 2021ರಲ್ಲಿ ತೆಲಂಗಾಣದ ಪೋಚಂಪಲ್ಲಿ ಇಕಾಟ್ ಸೀರೆಯನ್ನು ಉಟ್ಟಿದ್ದರು. 2020ರಲ್ಲಿ ಗೋಲ್ಡನ್ ಕಲರ್ ರೇಷ್ಮೆ ಸೀರೆ ಉಟ್ಟಿದ್ದರು. ಆದರೆ, ಆ 3 ವರ್ಷಗಳು ಮಾತ್ರ ಯಾವುದೇ ಚುನಾವಣೆ ನಡೆದಿರಲಿಲ್ಲ.

2019ರಲ್ಲಿ ಆಂಧ್ರದ ಮಂಗಳಗಿರಿ ಕಾಟನ್ ಸೀರೆ ಉಟ್ಟಿದ್ದರು. ಆ ವರ್ಷ ಆಂಧ್ರ ಪ್ರದೇಶದ ವಿಧಾನಸಭಾ ಚುನಾವಣೆ ನಡೆದಿತ್ತು.

ಹೀಗಾಗಿ, ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ದಿನದ ಸೀರೆಗಳು ಕೇವಲ ಒಂದು ಉಡುಗೆ ಮಾತ್ರವಲ್ಲ. ಅದಕ್ಕಿಂತಲೂ ಹೆಚ್ಚಿನದಾಗಿ ರಾಜಕೀಯವಾಗಿಯೂ ಅವು ಮಹತ್ವ ಪಡೆದಿರುತ್ತದೆ. ಹಾಗೆಂದು ನಿರ್ಮಲಾ ಸೀತಾರಾಮನ್ ತಮ್ಮ ರಾಜ್ಯದ ಸೀರೆಯನ್ನು ಉಟ್ಟು ಬಜೆಟ್ ಮಂಡಿಸಿದ್ದಾರೆ ಎಂಬ ಕಾರಣಕ್ಕೆ ಜನ ಬಿಜೆಪಿಗೆ ಮತ ಹಾಕುವುದಿಲ್ಲ. ಬಜೆಟ್ ಮಂಡನೆ ವೇಳೆ ಹೇಗೆ ಚುನಾವಣಾ ರಾಜ್ಯಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆಯೋ ಹಾಗೆಯೇ ನಿರ್ಮಲಾ ಸೀತಾರಾಮನ್ ಕೂಡ ತಮ್ಮ ಸೀರೆಯ ಆಯ್ಕೆಯ ವಿಷಯದಲ್ಲಿ ಆ ರಾಜ್ಯಕ್ಕೆ ಮಹತ್ವ ನೀಡುತ್ತಾರೆ. ಇದು ಮತಗಳ ಮೇಲೆ ಪರಿಣಾಮ ಬೀರಲಿ ಅಥವಾ ಬೀರದೆ ಇರಲಿ; ತಮ್ಮ ರಾಜ್ಯಕ್ಕೆ ಆದ್ಯತೆ ನೀಡಿದ್ದಾರೆ ಎಂಬುದಂತೂ ಅವರ ಮನಸಲ್ಲಿ ದಾಖಲಾಗುತ್ತದೆ ಎಂಬ ಉದ್ದೇಶ ಸಚಿವರದ್ದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *