ಬೆಳಗಾವಿ, ಜೂ.9: ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ಸುರಿದ ಭಾರಿ ಮಳೆಯು ಹತ್ತಾರು ಕೋಟಿ ರೂಪಾಯಿಗಳಷ್ಟು ನಷ್ಟವನ್ನುಂಟು ಮಾಡಿದೆ. ವ್ಯಾಪಾರಸ್ಥರು ಮತ್ತು ಸ್ಥಳೀಯ ನಿವಾಸಿಗಳು ತೀವ್ರ ತೊಂದರೆಗೊಳಗಾಗಿದ್ದಾರೆ. ಮಳೆಯಿಂದಾಗಿ ಸುಮಾರು ಹತ್ತರಿಂದ ಹದಿನೈದು ಕೋಟಿಗೂ ಹೆಚ್ಚು ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಹಲವಾರು ಅಂಗಡಿಗಳು, ಗೋದಾಮುಗಳು, ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ವಸ್ತುಗಳು ನಾಶವಾಗಿವೆ. ಮೊಬೈಲ್ ಅಂಗಡಿಗಳು, ಹಣ್ಣಿನ ಅಂಗಡಿಗಳು, ಚಪ್ಪಲಿ ಅಂಗಡಿಗಳು ಮತ್ತು ಬಟ್ಟೆ ಗೋದಾಮುಗಳಿಗೆ ಹಾನಿಯಾಗಿದೆ. ಕೆಲವು ಮನೆಗಳು ಕುಸಿದು, ವಾಹನಗಳು ನೀರಿನಲ್ಲಿ ಸಿಲುಕಿವೆ. ಇಂತಹ ಭೀಕರ ಪರಿಸ್ಥಿತಿಯಲ್ಲೂ ಸ್ಥಳೀಯ ಶಾಸಕರು ಘಟನಾ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕರು ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿ, ಅವರನ್ನು ಹುಡುಕಿಕೊಡುವಂತೆ ಜನರು ಆಗ್ರಹಿಸಿದ್ದಾರೆ. ನಗರಸಭೆಯ ಅಧಿಕಾರಿಗಳು ಸರಿಯಾಗಿ ಚರಂಡಿ ವ್ಯವಸ್ಥೆ ಮಾಡದಿರುವುದು ಮತ್ತು ಅದರಲ್ಲಿ ಸಿಲುಕಿರುವ ಕಸವನ್ನು ತೆಗೆಯದೇ ನಿರ್ಲಕ್ಷ್ಯ ತೋರಿರುವುದು ಈ ದೊಡ್ಡ ಪ್ರಮಾಣದ ಹಾನಿಗೆ ಕಾರಣ ಎಂದು ವ್ಯಾಪಾರಸ್ಥರು ದೂಷಿಸಿದ್ದಾರೆ. ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವಂತೆ ಹಾಗೂ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
