ಇದು ಆಡಳಿತವಲ್ಲ, ಸಂಘಟಿತ ಲೂಟಿ: ಸಿಲಿಂಡರ್ ದರ ಏರಿಕೆ ವಿರುದ್ಧ ಸಿದ್ದರಾಮಯ್ಯ ಕಿಡಿ – Kannada News | Cm Siddaramaiah sparks on Central Government Over Commercial LPG Price Hike

ಸಿಎಂ ಸಿದ್ದರಾಮಯ್ಯImage Credit source: x.com/siddaramaiah

ಬೆಂಗಳೂರು, ಮೇ​ 01: ದೇಶಾದ್ಯಂತ ಕಮರ್ಷಿಯಲ್ ಸಿಲಿಂಡರ್ ದರ ಏರಿಕೆ ವಿಚಾರ ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ರಾಜ್ಯದ ಹೋಟೆಲ್ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೀಗ ಸಿಎಂ ಸಿದ್ದರಾಮಯ್ಯ (Siddaramaiah) ಕೇಂದ್ರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದು ಆಡಳಿತವಲ್ಲ, ಇದು ಸಂಘಟಿತ ಲೂಟಿ. ಚುನಾವಣೆಯ ಸಮಯದಲ್ಲಿ ಜನರನ್ನು ದಾರಿ ತಪ್ಪಿಸುವುದು ಮತ್ತು ನಂತರ ಅವರ ಮೇಲೆ ಹೊರೆ ಹಾಕುವುದು ಪ್ರಧಾನಿ ನರೇಂದ್ರ ಮೋದಿ (Narendra Modi) ಮಾದರಿ ಎಂದು ಸಿಎಂ ವಾಗ್ದಾಳಿ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ನಾವು ಮೊದಲೇ ಎಚ್ಚರಿಸಿದಂತೆ, ಚುನಾವಣೆಗಳು ಮುಗಿಯುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಮತ್ತೊಮ್ಮೆ ಬೆಲೆಯನ್ನು ಏರಿಕೆ ಮಾಡಿದೆ. ಚುನಾವಣೆಗಳ ಅವಧಿಯಲ್ಲಿ ದರ ಏರಿಕೆಯನ್ನು ಉದ್ದೇಶಪೂರ್ವಕವಾಗಿ ತಡೆಹಿಡಿದಿದ್ದ ಸರ್ಕಾರ, ಮೇ 1 ರಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 993 ರೂ ರಷ್ಟು ಹೆಚ್ಚಿಸಿದೆ. ಇದರಿಂದ ಈಗ ಒಂದು ಸಿಲಿಂಡರ್ ಬೆಲೆ 3,071.50 ರೂ.ಕ್ಕೆ ತಲುಪಿದೆ ಎಂದರು.

ಸಿಎಂ ಸಿದ್ದರಾಮಯ್ಯ ಟ್ವೀಟ್​

ಕೇವಲ 4 ತಿಂಗಳಲ್ಲಿ, ಮೋದಿ ಸರ್ಕಾರವು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಆರು ಬಾರಿ ಹೆಚ್ಚಿಸಿದೆ, ಇದರಿಂದ ಸಾಮಾನ್ಯ ಜನರ ಮೇಲೆ 1,518ರೂ ರಷ್ಟು ಹೆಚ್ಚುವರಿ ಹೊರೆ ಬಿದ್ದಿದೆ. ಜಾಗತಿಕವಾಗಿ ಸಮಸ್ಯೆ ಬಂದಾಗ ದೇಶದ ಜನರನ್ನ ರಕ್ಷಿಸುವ ಬದಲು, ಮೋದಿ ದೇಶದ ಜನರ ಮೇಲೆ ಹೊರೆ ಹಾಕುತ್ತಿದ್ದಾರೆ ಎಂದು ಸಿಎಂ ಹರಿಹಾಯ್ದಿದ್ದಾರೆ.

ಇದನ್ನೂ ಓದಿ: ಸಿಲಿಂಡರ್ ಬೆಲೆ ಏರಿಕೆ ವಿರುದ್ಧ ಸಿಡಿದೆದ್ದ ಹೋಟೆಲ್ ಮಾಲೀಕರ ಸಂಘ: ಗ್ರಾಹಕರ ಸಂಖ್ಯೆ ಇಳಿಕೆ ಆತಂಕ

ಟೊಳ್ಳಾದ ವಿದೇಶಾಂಗ ನೀತಿ ನಮ್ಮ ಆರ್ಥಿಕತೆ ರಕ್ಷಿಸಲು ವಿಫಲವಾಗಿದೆ. ಈಗ ಸಾಮಾನ್ಯ ಭಾರತೀಯರು ಅದಕ್ಕೆ ಬೆಲೆಯನ್ನು ಪಾವತಿಸುತ್ತಿದ್ದಾರೆ. ಈ ಹೆಚ್ಚಳವು ಕೇವಲ ವ್ಯವಹಾರಗಳ ಮೇಲೆ ಪರಿಣಾಮ ಬೀರುವುದಿಲ್ಲ, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಸಣ್ಣ ತಿನಿಸುಗಳು ಹಾಗೂ ಅಡುಗೆ ಸೇವೆಗಳು ಬೆಲೆಗಳನ್ನು ಹೆಚ್ಚಿಸಲು ಒತ್ತಾಯಿಸಲ್ಪಡುತ್ತವೆ ಎಂದಿದ್ದಾರೆ.

ಇದು ಕಾರ್ಮಿಕ ವರ್ಗಕ್ಕೆ ಪ್ರಧಾನಿ ಮೋದಿ ನೀಡಿರುವ ಉಡುಗೊರೆ ಎಂದ ಸಿಎಂ

ಇದು ದೈನಂದಿನ ಆಹಾರವನ್ನು ಮತ್ತಷ್ಟು ದುಬಾರಿಯನ್ನಾಗಿ ಮಾಡುತ್ತದೆ. ಕಾರ್ಮಿಕ ವರ್ಗ, ಸಣ್ಣ ವ್ಯಾಪಾರಿಗಳು ಹೆಚ್ಚು ತೊಂದರೆ ಅನುಭವಿಸ್ತಾರೆ. 1 ಕಪ್ ಚಹಾದಿಂದ ಹಿಡಿದು ಸಣ್ಣಪುಟ್ಟ ತಿಂಡಿ ಸಹ ದುಬಾರಿಯಾಗುತ್ತೆ, ಎಂತಹ ಕ್ರೂರ ಪರಿಸ್ಥಿತಿ ನೋಡಿ. ಕಾರ್ಮಿಕ ದಿನದಂದು, ಇದು ಕಾರ್ಮಿಕ ವರ್ಗಕ್ಕೆ ಪ್ರಧಾನಿ ಮೋದಿ ನೀಡಿರುವ ಉಡುಗೊರೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಕಮರ್ಷಿಲ್ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ಕಾಫಿ ಬೆಲೆ ಗಗನಕ್ಕೇರುತ್ತಾ?

ಇದು ಕೇವಲ ಆರಂಭವಷ್ಟೇ, ಇಂತಹ ಇನ್ನೂ ಅನೇಕ ಏರಿಕೆಗಳು ಮುಂದಿನ ದಿನಗಳಲ್ಲಿ ಬರಲಿವೆ ಮತ್ತು ಆ ಹೊರೆಯನ್ನು ನಾಗರಿಕರ ಮೇಲೆಯೇ ಹಾಕಲಾಗುತ್ತದೆ. ಇದು ಮೋದಿ ಮಾದರಿ, ಚುನಾವಣೆ ಸಮಯದಲ್ಲಿ ಜನರನ್ನು ದಾರಿ ತಪ್ಪಿಸುವುದು, ಮತ್ತು ನಂತರ ಅವರ ಮೇಲೆ ಹೊರೆ ಹಾಕುವುದು ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಮಾಡಿದ್ದಾರೆ.

ವರದಿ: ಈರಣ್ಣ ಬಸವ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 4:14 pm, Fri, 1 May 26

Source link

Leave a Reply

Your email address will not be published. Required fields are marked *