
ತಮಿಳು ನಟ ಧನುಶ್ (Dhanush) ಹಾಗೂ ನಯನತಾರಾ-ವಿಘ್ನೇಶ್ ಶಿವನ್ ಮಧ್ಯೆ ಕಿರಿಕ್ ಆಗಿತ್ತು. ನೆಟ್ಫ್ಲಿಕ್ಸ್ ಅಲ್ಲಿ ರಿಲೀಸ್ ಆದ ನಯನತಾರಾ ಅವರ ಮದುವೆ ಡಾಕ್ಯುಮೆಂಟರಿಯಲ್ಲಿ ಧನುಶ್ ಸಿನಿಮಾದ ಸೆಟ್ ದೃಶ್ಯ ಒಂದನ್ನು ಹಾಕಲಾಗಿತ್ತು. ಈ ಸಂಬಂಧ ಧನುಶ್ ಕೇಸ್ ದಾಖಲು ಮಾಡಿದ್ದರು. ಆ ಬಳಿಕ ಇವರ ಸಂಬಂಧ ಹದಗೆಟ್ಟಿದೆ. ಈ ಬಗ್ಗೆ ವಿಘ್ನೇಶ್ ಶಿವನ್ ಮಾತನಾಡಿದ್ದಾರೆ. ಈ ಕಿತ್ತಾಟ ತಮಗೆ ದೊಡ್ಡ ನಷ್ಟ ತಂದಿದೆ ಎಂದು ವಿಘ್ನೇಶ್ ಹೇಳಿದ್ದಾರೆ.
2015ರಲ್ಲಿ ‘ನಾನುಮ್ ರೌಡಿ ದಾನ್’ ಸಿನಿಮಾ’ ತೆರೆಗೆ ಬಂತು. ಈ ಚಿತ್ರವನ್ನು ನಿರ್ದೇಶನ ಮಾಡಿದ್ದು ವಿಘ್ನೇಶ್ ಶಿವನ್. ಈ ಚಿತ್ರವನ್ನು ನಿರ್ಮಾಣ ಮಾಡಿದ್ದು ಧನುಶ್. ನಯನತಾರಾ ಈ ಚಿತ್ರದ ನಾಯಕಿ. ವಿಘ್ನೇಶ್-ನಯನತಾರಾ ಮಧ್ಯೆ ಪ್ರೀತಿ ಮೂಡಿದ್ದು ಇದೇ ಸಿನಿಮಾದಲ್ಲಿ. ಈ ಚಿತ್ರದ ಶೂಟಿಂಗ್ ದೃಶ್ಯವನ್ನು ‘ನೆಟ್ಫ್ಲಿಕ್ಸ್’ ಡಾಕ್ಯುಮೆಂಟರಿ ‘ನಯನತಾರಾ: ಬಿಯಾಂಡ್ ದಿ ಫೇರಿ ಟೇಲ್’ನಲ್ಲಿ ಬಳಕೆ ಮಾಡಲಾಗಿತ್ತು. ಇದಕ್ಕೆ ಧನುಶ್ ಒಪ್ಪಿಗೆ ನೀಡಿರಲಿಲ್ಲ. ಈ ದೃಶ್ಯ ಬಳಸಿದ್ದಕ್ಕಾಗಿ ನಯನತಾರಾಗೆ ಮತ್ತು ನೆಟ್ಫ್ಲಿಕ್ಸ್ಗೆ 10 ಕೋಟಿ ರೂಪಾಯಿ ನೀಡುವಂತೆ ಧನುಶ್ ಬೇಡಿಕೆ ಇಟ್ಟಿದ್ದರು.
ಈ ಘಟನೆ ಬಗ್ಗೆ ವಿಘ್ನೇಶ್ ಮಾತನಾಡಿದ್ದಾರೆ. ‘ನಿಮ್ಮ ಜೊತೆ ಒಳ್ಳೆ ರೀತಿಯಲ್ಲಿ ಇದ್ದವರನ್ನು ಕಳೆದುಕೊಂಡರೆ ಅದು ನಾಚಿಕೆಗೇಡಿನ ಸಂಗತಿ. ಎಲ್ಲೋ ಒಂದು ಕಡೆ ತಪ್ಪು ನಡೆದಿದೆ’ ಎಂದು ಅವರು ಹೇಳಿಕೊಂಡಿದ್ದಾರೆ. ಈ ಮೂಲಕ ಜಗಳಕ್ಕೆ ಮೂಲ ಕಾರಣರಾದ ಪತ್ನಿ ನಯನಾತಾರಾ ಬಗ್ಗೆಯೇ ಅವರಿಗೆ ಬೇಸರ ಇದೆಯೇ ಎಂಬ ಪ್ರಶ್ನೆ ಮೂಡಿದೆ.
ಭಿನ್ನಾಭಿಪ್ರಾಯಗಳ ಹೊರತಾಗಿಯೂ, ವಿಘ್ನೇಶ್ ಅವರು ಧನುಷ್ ಬಗ್ಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ವ್ಯಕ್ತಪಡಿಸಿದ್ದಾರೆ. ಅವರ ವೃತ್ತಿಜೀವನದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ಅವರಿಗೆ ಧನ್ಯವಾದ ಹೇಳಿದ್ದಾರೆ. ‘ಅವರು ಇಲ್ಲದಿದ್ದರೆ ನಾನು ಇಲ್ಲಿ ಇರುತ್ತಿರಲಿಲ್ಲ’ ಎಂದಿದ್ದಾರೆ.
ಇದನ್ನೂ ಓದಿ: ನಯನಾತಾರಾಗೆ ದೊಡ್ಡ ಹಿನ್ನಡೆ: ಧನುಷ್ ಪರವಾಗಿ ತೀರ್ಪು ನೀಡಿದ ಕೋರ್ಟ್
ವಿಘ್ನೇಶ್ ಶಿವನ್ ಅವರಿಗೆ ಧನುಷ್ ಅವರ ಬಗ್ಗೆ ಅಪಾರ ಗೌರವ ಇದೆ. ಅಲ್ಲದೆ, ಅವರನ್ನು ಕಳೆದುಕೊಂಡಿದ್ದಕ್ಕೆ ಸಾಕಷ್ಟು ಬೇಸರ ಕೂಡ ಇದೆ. ಕ್ಷಮೆ ಕೇಳಿ ಈ ಪ್ರಕರಣವನ್ನು ಕೊನೆಗೊಳಿಸಿಕೊಳ್ಳುತ್ತಾರಾ ಅಥವಾ ಇವರ ಕಿತ್ತಾಟ ಹೀಗೆಯೇ ಮುಂದುವರೆಯುತ್ತದೆಯೇ ಎಂಬುದು ಸದ್ಯದ ಪ್ರಶ್ನೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.