‘ಇದು ನಾಯಕತ್ವವಲ್ಲ, ನೌಟಂಕಿ’: ಇಟಲಿ ಪ್ರಧಾನಿಗೆ ಮೋದಿ ಗಿಫ್ಟ್​​ ಬಗ್ಗೆ ರಾಹುಲ್​​ ಗಾಂಧಿ ಟೀಕೆ – Kannada News | This Is Not Leadership, It’s A Farce: Rahul Gandhi Slams Modi’s Chocolate Gift To Italian PM Meloni

ಪ್ರಧಾನಿ ಮೋದಿ ವಿರುದ್ಧ ರಾಹುಲ್​​ ವಾಗ್ದಾಳಿ

ನವದೆಹಲಿ/ ರಾಯ್‌ಬರೇಲಿ, ಮೇ 20: ಬಿಜೆಪಿ, ಆರೆಸ್ಸೆಸ್​​, ನರೇಂದ್ರ ಮೋದಿ (Narendra Modi), ಅಮಿತ್​​ ಶಾರಿಂದ ಹಿಡಿದು ಅದಾನಿ ವಿರುದ್ಧವೂ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್​​ ಗಾಂಧಿ (Rahul Gandhi) ತೀವ್ರ ವಾಗ್ದಾಳಿ ನಡೆಸಿದ್ದಾರೆ. ರೋಮ್ ಪ್ರವಾಸದಲ್ಲಿರುವ ಮೋದಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಅವರಿಗೆ ಉಡುಗೊರೆಯಾಗಿ ಮೆಲೋಡಿ ಚಾಕೊಲೇಟ್ ನೀಡಿದ ವಿಚಾರದ ಬಗ್ಗೆಯೂ ಟೀಕಿಸಿದ ಅವರು ಇದು ನಾಯಕತ್ವವಲ್ಲ, ನೌಟಂಕಿ ಎಂದು ತಿವಿದಿದ್ದಾರೆ.

ಎಕ್ಸ್​​ ಪೋಸ್ಟ್​​ ಮಾಡಿ ರಾಹುಲ್​​ ಕಿಡಿ

ಈ ಕುರಿತು ಎಕ್ಸ್ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ದೇಶದಲ್ಲಿ ರೈತರು, ಯುವಕರು, ಮಹಿಳೆಯರು, ಕಾರ್ಮಿಕರು ಹಾಗೂ ಸಣ್ಣ ವ್ಯಾಪಾರಿಗಳು ಸಂಕಷ್ಟದಲ್ಲಿರುವಾಗ ಪ್ರಧಾನಿ ಮೋದಿ ನಗುತ್ತಾ ರೀಲ್ಸ್ ಮಾಡುತ್ತಿದ್ದಾರೆ. ದೇಶದ ಮೇಲೆ ಆರ್ಥಿಕ ಸಂಕಷ್ಟದ ಮಬ್ಬು ಕವಿದಿದೆ. ಆದರೆ ನಮ್ಮ ಪ್ರಧಾನಿ ಇಟಲಿಯಲ್ಲಿ ಸಿಹಿತಿಂಡಿ ಹಂಚುತ್ತಿದ್ದಾರೆ. ಪ್ರಧಾನಿ ನಗುತ್ತಾ ರೀಲ್ಸ್ ಮಾಡುತ್ತಿದ್ದರೆ, ಬಿಜೆಪಿ ನಾಯಕರು ಚಪ್ಪಾಳೆ ತಟ್ಟುತ್ತಿದ್ದಾರೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ, RSS ವಿರುದ್ಧ ವಾಗ್ದಾಳಿ

ಮತ್ತೊಂದೆಡೆ ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ನಡೆದ ಬಹುಜನ ಸ್ವಾಭಿಮಾನ ಸಭೆಯಲ್ಲಿ ಮಾತನಾಡಿದ ರಾಹುಲ್​​, ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಭೆಯಲ್ಲಿ ಜನರು ಚಪ್ಪಾಳೆ ತಟ್ಟುತ್ತಿದ್ದುದನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, ನೀವು ಎಲ್ಲರೂ ಚಪ್ಪಾಳೆ ತಟ್ಟುತ್ತೀರಿ. ಆದರೆ ಆರ್‌ಎಸ್‌ಎಸ್ ಸದಸ್ಯರು ನಿಮ್ಮ ಕಣ್ಣೆದುರೇ ಸಂವಿಧಾನವನ್ನು ಹರಿದು ಎಸೆದಾಗ ಮೌನವಾಗಿರುತ್ತೀರಿ. ಈ ಸಂವಿಧಾನದಲ್ಲಿ ನಿಮ್ಮ ಧ್ವನಿ ಮತ್ತು ನಿಮ್ಮ ರಕ್ತವಿದೆ. ಅದನ್ನು ಉಳಿಸುವುದು ನಿಮ್ಮ ಜವಾಬ್ದಾರಿ ಎಂದಿದ್ದಾರೆ.

ಇದನ್ನೂ ಓದಿ: ಇಟಲಿ ಪ್ರಧಾನಿ ಮೆಲೋನಿ ಭೇಟಿಯಾಗಿ ಫೋಟೊಗಳನ್ನು ಹಂಚಿಕೊಂಡ ಪ್ರಧಾನಿ ಮೋದಿ

ಮೋದಿ ವಿದೇಶ ಪ್ರವಾಸ ಟೀಕಿಸಿದ ರಾಹುಲ್​​

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ವಿದೇಶ ಪ್ರವಾಸ ಕುರಿತ ಹೇಳಿಕೆಗಳನ್ನೂ ಟೀಕಿಸಿದ ಅವರು, ಪ್ರಧಾನಿ ಜನರಿಗೆ ವಿದೇಶ ಪ್ರವಾಸ ಮಾಡಬೇಡಿ ಎಂದು ಹೇಳುತ್ತಾರೆ. ಚಿನ್ನ ಖರೀದಿಸಬೇಡಿ ಎನ್ನುತ್ತಾರೆ. ಎಲೆಕ್ಟ್ರಿಕ್ ವಾಹನ ಖರೀದಿಸಿ ಎನ್ನುತ್ತಾರೆ. ಆದರೆ ತಾವೇ ಸಾವಿರಾರು ಕೋಟಿ ರೂ. ಮೌಲ್ಯದ ವಿಮಾನಗಳಲ್ಲಿ ವಿದೇಶ ಪ್ರವಾಸ ಮಾಡುತ್ತಾರೆ. ದೇಶದ ಮೇಲೆ ಆರ್ಥಿಕ ಚಂಡಮಾರುತ ಸಮೀಪಿಸುತ್ತಿದೆ. ಕೆಲವೇ ತಿಂಗಳಲ್ಲಿ ದರ ಏರಿಕೆ, ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಬೆಲೆಗಳು ಎಲ್ಲಿ ಹೋಗುತ್ತವೆ ಎಂಬುದನ್ನು ನೀವು ನೋಡುತ್ತೀರಿ. ಮುಂದೆ ರೈತರಿಗೆ ರಸಗೊಬ್ಬರವೂ ಸಿಗದ ಪರಿಸ್ಥಿತಿ ಬರಬಹುದು ಎಂದು ರಾಹುಲ್ ಗಾಂಧಿ ಇದೇ ವೇಳೆ ಎಚ್ಚರಿಸಿದ್ದಾರೆ.

‘ಸಂವಿಧಾನದ ಮೇಲೆ ದಾಳಿ’

ಪ್ರಧಾನಿ ಮೋದಿ, ಅಮಿತ್ ಶಾ, ಬಿಜೆಪಿ, ಆರ್‌ಎಸ್‌ಎಸ್‌ ದೇಶದ್ರೋಹಿಗಳಾಗಿದ್ದು, ರಾಷ್ಟ್ರದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ-ಆರ್‌ಎಸ್‌ಎಸ್ ಸಂವಿಧಾನದ ಮೇಲೆ ದಾಳಿ ಮಾಡಿದೆ. ಪಂಚ ರಾಜ್ಯಗಳ ಚುನಾವಣೆ ಮೊದಲು ಇಂಧನ ಕೊರತೆ ಇಲ್ಲ ಅಂದಿದ್ರಿ. ಪೆಟ್ರೋಲ್‌, ಡೀಸೆಲ್ ದರ ಹೆಚ್ಚಳವಾಗಲ್ಲ ಅಂತಾ ಹೇಳಿದ್ರಿ. ಆದರೆ ಈಗ ದೇಶದಲ್ಲಿ ಪೆಟ್ರೋಲ್‌, ಡೀಸೆಲ್ ದರ ಹೆಚ್ಚಳವಾಗುತ್ತಿದೆ. ಅಂಬಾನಿ ರಷ್ಯಾದಿಂದ ಪೆಟ್ರೋಲ್ ಖರೀದಿಸಿ ಹೊರಗೆ ಮಾರಾಟ ಮಾಡ್ತಾರೆ. ಆ ಹಣದಿಂದ ಪ್ರಧಾನಿ ನರೇಂದ್ರ ಮೋದಿಗೆ ಹಣಕಾಸು ಒದಗಿಸುತ್ತಾರೆ. ಮೋದಿ ಭಾರತದ ಆರ್ಥಿಕ ವ್ಯವಸ್ಥೆಯನ್ನ ಅಂಬಾನಿ, ಅದಾನಿ, ಅಮೆರಿಕಕ್ಕೆ ಹಸ್ತಾಂತರಿಸಿದ್ದು, ಅವರ ಸರ್ಕಾರ ನಿಮ್ಮನ್ನು ಉಳಿಸಲು ಸಾಧ್ಯವಿಲ್ಲ. ಅವರು ಅಳುತ್ತಾರೆ, ಅದು ನನ್ನ ತಪ್ಪಲ್ಲ ಅಂತಾರೆ. ಆದರೆ ಪ್ರಧಾನಿ ಮೋದಿ, ಅಮಿತ್ ಶಾ, ಆರ್‌ಎಸ್‌ಎಸ್‌ನವರದ್ದೇ ತಪ್ಪು ಎಂದು ರಾಹುಲ್​​ ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *