ಕೋಲ್ಕತ್ತಾ, ಮೇ 07: ಪಶ್ಚಿಮ ಬಂಗಾಳ(West Bengal) ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಜಯಭೇರಿ ಬಾರಿಸಿ ಸರ್ಕಾರ ರಚನೆಗೆ ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ, ರಾಜ್ಯದಲ್ಲಿ ಭೀಕರ ಹಿಂಸಾಚಾರ ಭುಗಿಲೆದ್ದಿದೆ. ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ (PA) ಚಂದ್ರನಾಥ್ ರಥ್ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಇದು ಪೂರ್ವ ಯೋಜಿತ ಕೊಲೆ ಎಂದು ಸುವೇಂದು ಅಧಿಕಾರಿ ಹೇಳಿದ್ದಾರೆ. ಎರಡು-ಮೂರು ದಿನಗಳಿಂದ ಕೊಲೆಗೆ ಸಂಚು ರೂಪಿಸಲಾಗಿತ್ತು ಎಂದರು.
ಬುಧವಾರ ರಾತ್ರಿ ಉತ್ತರ 24 ಪರಗಣ ಜಿಲ್ಲೆಯ ಮಧ್ಯಮಗ್ರಾಮ್ ಪ್ರದೇಶದ ದೊಹರಿಯಾದಲ್ಲಿ ಈ ಘಟನೆ ನಡೆದಿದೆ. 41 ವರ್ಷದ ಚಂದ್ರನಾಥ್ ರಥ್ ಅವರು ಸಾರ್ವಜನಿಕ ರಸ್ತೆಯಲ್ಲಿ ಹೋಗುತ್ತಿದ್ದಾಗ ಸಂಚು ರೂಪಿಸಿದ್ದ ಹಂತಕರು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ರಥ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ತಮ್ಮ ಆಪ್ತ ಸಹಾಯಕರನ್ನು ಕಳೆದುಕೊಂಡ ಆಘಾತದಲ್ಲಿರುವ ಸುವೇಂದು ಅಧಿಕಾರಿ, ಇದೊಂದು ನಿರ್ದಯ ಮತ್ತು ಪೂರ್ವ ಯೋಜಿತ ಕೊಲೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದು ಆಕಸ್ಮಿಕವಾಗಿ ನಡೆದ ಘಟನೆಯಲ್ಲ. ಹಂತಕರು ಕಳೆದ 2-3 ದಿನಗಳಿಂದ ರಥ್ ಅವರ ಚಲನವಲನದ ಮೇಲೆ ಕಣ್ಣಿಟ್ಟಿದ್ದರು . ಕೊಲೆಗೆ ಸಂಪೂರ್ಣ ಸ್ಕೆಚ್ ಹಾಕಲಾಗಿತ್ತು. ಬಂಗಾಳ ಪೊಲೀಸ್ ಮಹಾನಿರ್ದೇಶಕರು (DGP) ಕೂಡ ಇದು ಯೋಜಿತ ಕೃತ್ಯ ಎಂದು ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮತ್ತಷ್ಟು ಓದಿ: ಬಂಗಾಳದಲ್ಲಿ ಕೇಸರಿ ಯುಗಾರಂಭ: ಮೇ 9 ರಂದು ಬಿಜೆಪಿ ಸರ್ಕಾರದ ಪಟ್ಟಾಭಿಷೇಕ, ಸಿಎಂ ರೇಸ್‌ನಲ್ಲಿ ಸುವೇಂದು ಅಧಿಕಾರಿ ಮುಂಚೂಣಿ
ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಸರ್ಕಾರದ ವಿರುದ್ಧ ಕಿಡಿಕಾರಿದ ಸುವೇಂದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಟೀಕಿಸಿದರು. ಇದು ಟಿಎಂಸಿಯ ಮಹಾಜಂಗಲ್ ರಾಜ್ಗೆ ಸಾಕ್ಷಿ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇಂತಹ ಅಪರಾಧಿಗಳನ್ನು ನಿರ್ನಾಮ ಮಾಡುವುದು ಖಚಿತ. ಆದರೆ, ಕಾರ್ಯಕರ್ತರು ಸಮಾಧಾನದಿಂದಿರಬೇಕು, ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಅವರು ಮನವಿ ಮಾಡಿದರು.
VIDEO | It’s a ‘preplanned murder’; will clean up all ‘goons’ when BJP takes up administration: Suvendu Adhikari on his aide Chandranath Rath being shot dead. pic.twitter.com/tWshmpe2kT
— Press Trust of India (@PTI_News) May 6, 2026
ಈ ಹತ್ಯೆಯ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಮಾಹಿತಿ ನೀಡಲಾಗಿದೆ. ಕೇಂದ್ರ ಸಚಿವೆ ಸುಕಾಂತ ಮಜುಂದಾರ್ ಈಗಾಗಲೇ ಮೃತರ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಪೊಲೀಸರು ಘಟನಾ ಸ್ಥಳದಲ್ಲಿ ಕೆಲವು ಪ್ರಮುಖ ಪುರಾವೆಗಳನ್ನು ಸಂಗ್ರಹಿಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.
294 ಸ್ಥಾನಗಳ ಪೈಕಿ ಬಿಜೆಪಿ 207 ಸ್ಥಾನಗಳನ್ನು ಗೆದ್ದು ಅಪ್ರತಿಮ ಬಹುಮತ ಸಾಧಿಸಿದೆ. ಟಿಎಂಸಿ 80 ಸ್ಥಾನಗಳಿಗೆ ಕುಸಿದಿದೆ. ಮೇ 9 ರಂದು ಬಿಜೆಪಿ ರಾಜ್ಯದಲ್ಲಿ ಮೊದಲ ಬಾರಿಗೆ ಸರ್ಕಾರ ರಚಿಸಲಿದೆ. ಸೋಲಿನ ಹೊರತಾಗಿಯೂ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲು ನಿರಾಕರಿಸುತ್ತಿದ್ದಾರೆ ಮತ್ತು ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸಿದ್ಧತೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಅಧಿಕಾರ ಹಸ್ತಾಂತರದ ಪ್ರಕ್ರಿಯೆ ನಡೆಯುತ್ತಿರುವಾಗಲೇ ಈ ಹತ್ಯೆ ನಡೆದಿರುವುದು ಬಂಗಾಳದ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
