ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾImage Credit source: tv9 kannada
ಚಿಕ್ಕಮಗಳೂರು, ಮಾರ್ಚ್ 05: ವಿವಾದಿತ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಉರುಸ್ ಆಚರಣೆ ವೇಳೆ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮುಸ್ಲಿಂ (Muslims) ಸಮುದಾಯದವರು ರಾಜ್ಯ ಕಾಂಗ್ರೆಸ್ ಸರ್ಕಾರದ ತಿರುಗಿ ಬಿದ್ದಿದ್ದಾರೆ. ಗೋರಿಗಳ ಮೇಲೆ ಹಸಿರು ಬಟ್ಟೆ, ಗಂಧ ಲೇಪನ ಮಾಡದ ಹಿನ್ನಲೆ ಜನ ಶಕ್ತಿ ಸೇರಿದಂತೆ ಮುಸ್ಲಿಂ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತ ಸಾಲಿನಲ್ಲಿರುವ ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ನಿನ್ನೆಯಿಂದ ಸೆಂದಿಲ್ ಉರುಸ್ ಆರಂಭವಾಗಿದೆ. ನಿನ್ನೆ ವಿವಾದಿತ ಗುಹೆ ಹಾಗೂ ದತ್ತ ಪೀಠದ ಆವರಣದಲ್ಲಿರುವ ಗೋರಿಗಳಿಗೆ ಗಂಧ ಲೇಪನ ಹಾಗೂ ಸೇಂದಿಲ್ಗೆ ಅವಕಾಶ ನೀಡಿಲ್ಲ. ಗೋರಿಗಳಿಗೆ ಹಸಿರಿ ಬಟ್ಟೆ ಹೊದಿಸಲು ಬಿಡಲಿಲ್ಲ ಅಂತಾ ಮುಸ್ಲಿಂ ಸಂಘಟನೆಗಳು ಆರೋಪ ಮಾಡುತ್ತಿವೆ.
ಇದನ್ನೂ ಓದಿ: ದತ್ತಪೀಠದಲ್ಲಿ ಹೊಸ ವಿವಾದ: ‘ಕಲಮೆ ತಯ್ಯಬಾ’ ಆಚರಣೆಗೆ ಹಿಂದೂ ಸಂಘಟನೆಗಳ ಆಕ್ರೋಶ
ಹಿಂದೂಗಳಿಗೆ ಗುಹೆಯ ಒಳಗೆ ಪೂಜೆ ಮಾಡುವುದಕ್ಕೆ ಬಿಡುವ ಜಿಲ್ಲಾಡಳಿತ ನಮಗೆ ಮಾತ್ರ ಪೂಜೆಗೆ ಅವಕಾಶ ಕೊಟ್ಟಿಲ್ಲ ಅಂತಾ ಆರೋಪಿಸಿವೆ. ಜಿಲ್ಲಾಡಳಿತ ಹಾಗೂ ಕಾಂಗ್ರೆಸ್ ಸರ್ಕಾರ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮಾಡಿದ್ದ ಕೆಲವು ಆಚರಣೆಗಳನ್ನೇ ಮುಂದುವರಿಸಿಕೊಂಡು ಹೋಗ್ತಿದೆ. ಹಿಂದಿನ ವರ್ಷ ಯಾವ ರೀತಿ ನಡೆಸಲಾಗಿತ್ತೋ ಅದೇ ರೀತಿ ಕೂಡ ಈ ವರ್ಷವೂ ನಡೆಸೋದಕ್ಕೆ ಅವಕಾಶ ಕೊಡ್ತೀವಿ ಅಂತಾ ಹೇಳ್ತಿದ್ದಾರೆ. ಉರುಸ್ ನಡೆಸಲಾಗುತ್ತಿದೆ ಎಂದು ಕೇವಲ ದಾಖಲೆಗಳನ್ನ ತೋರಿಸೋದಕ್ಕಾಗಿ ಮಾಡ್ತಿರುವ ಷಡ್ಯಂತ್ರ ಎಂದು ಆರೋಪಿಸಿದ್ದು, ರಾಜ್ಯ ಕಾಂಗ್ರೆಸ್ ವಿರುದ್ಧ ಮುಸ್ಲಿಂ ಮುಖಂಡ ಗೌಸ್ ಮೊಹಿದ್ದೀನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿನ್ನೆ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ನಡೆದ ಉರುಸ್ ವೇಳೆ ಜಿಲ್ಲಾಡಳಿತದ ಕೆಲವು ನಿರ್ಧಾರಗಳನ್ನ ಕಂಡು ಇಡೀ ಮುಸ್ಲಿಂ ಸಮುದಾಯವೇ ಒಂದು ಕ್ಷಣ ಶಾಕ್ ಆಗಿದ್ದು, ಜಿಲ್ಲಾಡಳಿತದ ವಿರುದ್ಧ ತಿರುಗಿ ಬಿದ್ದಿದೆ. ಯಾವಾಗ ಮುಸ್ಲಿಂ ಸಮುದಾಯದ ಮುಖಂಡರು ಹಿಂದಿನಿಂದ ನಡೆದುಕೊಂಡು ಬರುತ್ತಿದ್ದಂತೆಯೇ ಈ ವರ್ಷವೂ ಅವಕಾಶ ಕೊಡಬೇಕು ಅಂತಾ ಪಟ್ಟು ಹಿಡಿದರೋ ಕೇವಲ 10 ಜನರನ್ನ ಮಾತ್ರ ವಿವಾದಿತ ಗುಹೆಯ ಒಳಗೆ ಬಿಡಲಾಯ್ತು. ಅಲ್ಲಿ ಕೂಡ ಗೋರಿಗಳಿಗೆ ಗಂಧ ಲೇಪನಕ್ಕೆ ಬಿಟ್ಟಿಲ್ಲ ಎಂದು ಆರೋಪಿಸಿದರು.
ಕೆ.ಎಲ್ ಅಶೋಕ್ ಸೇರಿದಂತೆ ಪ್ರತಿಭಟನಾ ನಿರತರು ವಶಕ್ಕೆ
ಇದೇ ವಿಚಾರವಾಗಿ ಇಂದು ಕೆ.ಎಲ್ ಅಶೋಕ್ ನೇತೃತ್ವದಲ್ಲಿ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆಗೆ ಕರೆ ಕೊಟ್ಟಿದ್ದು, ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆಗೆ ಅವಕಾಶ ನೀಡಿರಲಿಲ್ಲ. ಆದರೂ ಪೊಲೀಸರ ಕಣ್ಣು ತಪ್ಪಿಸಿ ನಗರಸಭೆ ಆವರಣದೊಳಗಿಂದ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಹೊರಟಿದ್ದ ಕೆ.ಎಲ್ ಅಶೋಕ್ ಸೇರಿದಂತೆ ಪ್ರತಿಭಟನಾ ನಿರತರನ್ನ ಪೊಲೀಸರು ನಗರಸಭೆಯ ಆವರಣದಲ್ಲಿಯೇ ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಪ್ರವಾಸಿಗರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ: ಸಿಡಿದೆದ್ದ ಹಿಂದೂ ಸಂಘಟನೆಗಳು
ಒಟ್ಟಿನಲ್ಲಿ ಹಿಂದೂ- ಮುಸ್ಲಿಮರ ನಡುವೆ ಆಚಾರ, ಪೂಜೆ, ಸಂಪ್ರದಾಯ, ಪದ್ದತಿ ವಿಷಯವಾಗಿಯೇ ಮುನ್ನೆಲೆಗೆ ಬರುವ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಈಗ ಮತ್ತೆ ಉರುಸ್ ಆಚರಣೆಯಿಂದ ಸದ್ದು ಮಾಡುತ್ತಿದ್ದು, ಮುಸ್ಲಿಂ ಸಮುದಾಯ ಸರ್ಕಾರದ ವಿರುದ್ಧವೇ ತಿರುಗಿ ಬೀಳುವಂತೆ ಮಾಡಿದ್ದು, ದರ್ಗಾ ವಿವಾದ ಮತ್ತೆ ಯಾವ ಸ್ವರೂಪ ಪಡೆದುಕೊಳ್ಳುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
